*ದೇವಿರಮ್ಮ ಬೆಟ್ಟದಲ್ಲಿ ಭಾರೀ ಅವಘಡ*: *ಕಂಬಿ ಮುರಿದು 20ಕ್ಕೂ ಹೆಚ್ಚು ಭಕ್ತರಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ: ದೇವಿರಮ್ಮನ ದರ್ಶನಕ್ಕೆ ಈ ಬಾರಿ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿದ್ದಾರೆ. ಬೆಟ್ಟದ ತುದಿಯಲ್ಲಿ ಭಕ್ತರು ಏರಲು ಅನುಕೂಲವಾಗುವಂತೆ ಅಳವಡಿಸಿದ್ದ ಕಂಬಿ ಏಕಾಏಕಿ ಮುರಿದುಬಿದ್ದಿದೆ. ಪರಿಣಾಮ, ಓರ್ವ ಬಾಲಕ ಸೇರಿದಂತೆ 20ಕ್ಕೂ ಹೆಚ್ಚು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಿಂದ ಬೆಟ್ಟದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಶನಿವಾರ ಬೆಟ್ಟದಿಂದ ಜಾರಿಬಿದ್ದು ಯುವಕನೋರ್ವ ಗಾಯಗೊಂಡಿದ್ದ. ಭಾನುವಾರ ಬೆಟ್ಟ ಏರುವಾಗ ಹೃದಯಾಘಾತದಿಂದ ಓರ್ವ ಸಾವನ್ನಪ್ಪಿದ್ದಾರೆ. ಈ ಮಧ್ಯೆ ಇಂದು ಬೆಟ್ಟದ ಮೇಲೆ ಹಾಕಿದ್ದ ಕಬ್ಬಿಣದ ಕಂಬಿ ಮುರಿದ ಪರಿಣಾಮ ಒಬ್ಬರ ಮೇಲೆ ಮತ್ತೊಬ್ಬರು ಬಿದ್ದು, ಓರ್ವ ಬಾಲಕ ಸೇರಿದಂತೆ 20ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಅಗ್ನಿಶಾಮಕ ಸಿಬ್ಬಂದಿ ಬೆಟ್ಟದಿಂದ ಕೆಳಕ್ಕೆ ಹೊತ್ತುತಂದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಗಾಯಾಳುಗಳಿಗೆ ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೇವಿರಮ್ಮ ಬೆಟ್ಟದಲ್ಲಿ ಭಕ್ತರ ದಂಡೇ ಹರಿದುಬಂದಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ದೇವಿಯ ಆಶೀರ್ವಾದ ಪಡೆಯಲು ಸುಮಾರು ಒಂದು ಲಕ್ಷ ಭಕ್ತರು ಆಗಮಿಸಿದ್ದಾರೆ. ಇಂದು ದೇವಿರಮ್ಮನ ದರ್ಶನಕ್ಕೆ ಕೊನೆಯ ದಿನವಾಗಿರುವುದರಿಂದ ನಿನ್ನೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೆಟ್ಟದತ್ತ ಹೆಜ್ಜೆ ಹಾಕುತ್ತಿದ್ದಾರೆ. ಹಸಿರು ಸಿರಿಯ ನಡುವೆ ಕಡಿದಾದ ಹಾದಿಯಲ್ಲಿ ಭಕ್ತರು ಸಾಗುತ್ತಿರುವಾಗಲೇ ಈ ಅವಘಡ ಸಂಭವಿಸಿದೆ.




