
ಪ್ರಗತಿವಾಹಿನಿ ಸುದ್ದಿ: “ಈ ರಾಜ್ಯ ಸುಭಿಕ್ಷವಾಗಿರಲಿ, ಎಲ್ಲರಿಗೂ ನೆಮ್ಮದಿ ಇರಲಿ, ಸುಳ್ಳು ಮಾಯವಾಗಲಿ. ಸುಳ್ಳೇ ಮನೆದೇವರು ಅನ್ನೋರಿಗೆಲ್ಲ ದೇವರೇ ನೋಡಿಕೊಳ್ಳಲಿ. ತಾಯಿ ಪುರದಮ್ಮ ಚೌಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಹೊರತು, ಹರಕೆಯನ್ನೇನೂ ಹೊತ್ತಿಲ್ಲ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ದೇವರ ಬಳಿ ಏನಾದರೂ ಹರಕೆ ಹೊತ್ತಿದ್ದೀರಾ ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದರು. ಹಾಸನದ ಪುರದಮ್ಮ ದೇವಸ್ಥಾನದ ಬಳಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು. ನಾನು ಮುಖ್ಯಮಂತ್ರಿಯಾದರೆ ಕರೆದುಕೊಂಡು ಬರುತ್ತೇವೆಂದು ಸ್ನೇಹಿತರು ಹರಕೆ ಹೊತ್ತಿದ್ದರು.
ದೇವಸ್ಥಾನಕ್ಕೆ ವೈಯಕ್ತಿಕವಾಗಿ ಹರಕೆ ಹೊತ್ತಿದ್ದೀರಾ ಎಂಬ ಪ್ರಶ್ನೆಗೆ, “ನನ್ನ ಸ್ನೇಹಿತರು ಈ ಹಿಂದೆ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ನಾನು ಮುಖ್ಯಮಂತ್ರಿ ಆದರೆ ಮತ್ತೆ ಇಲ್ಲಿಗೆ ಕರೆದುಕೊಂಡು ಬರುತ್ತೇವೆ ಎಂದು ಹರಕೆ ಹೊತ್ತಿದ್ದರು. ನಾನು ಕಷ್ಟದ ಕಾಲದಲ್ಲಿದ್ದಾಗ, ನನಗೆ ತೊಂದರೆಯಾದಾಗಲೂ ಇಲ್ಲಿ ಹರಕೆ ಮಾಡಿಕೊಂಡಿದ್ದರು. ಆಗಲೂ ದೇವಿಗೆ ಪೂಜೆ ಸಲ್ಲಿಸಿದ್ದೆ. ದೇವಿ ಭಕ್ತರಿಗೆ ಬಹಳ ಧೈರ್ಯ ನೀಡುವ ಶಕ್ತಿ ಹೊಂದಿದ್ದಾಳೆ. ಚೌಡೇಶ್ವರಿ ದುರ್ಗಾದೇವಿಯ ಸ್ವರೂಪಿ. ಇಲ್ಲಿಗೆ ಬಂದು ದರ್ಶನ ಪಡೆದಿರುವುದು ಬಹಳ ಸಂತೋಷ ತಂದಿದೆ” ಎಂದರು.
ಮೂಲಸೌಕರ್ಯ ಅಭಿವೃದ್ಧಿಗೆ ಭರವಸೆ
“ಇಲ್ಲಿನ ಗ್ರಾಮಸ್ಥರ ಬೇಡಿಕೆಗಳು ಸಾಕಷ್ಟಿವೆ. ಭಕ್ತರು ಹಾಗೂ ಸ್ಥಳೀಯರು ತಮ್ಮ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಅದನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಇದು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬಂದರೆ ಕೂಡಲೇ ಅಭಿವೃದ್ಧಿಗೆ ಕ್ರಮವಹಿಸಲು ಸೂಚನೆ ನೀಡುತ್ತೇನೆ” ಎಂದು ಹೇಳಿದರು.
ದೇವಸ್ಥಾನದ ಅಭಿವೃದ್ಧಿಗೆ 4.5 ಕೋಟಿ ಅನುದಾನವಿದ್ದರೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಕೇಳಿದಾಗ, “ಇದರ ಬಗ್ಗೆ ಪರಿಶೀಲನೆ ನಡೆಸುತ್ತೇನೆ” ಎಂದರು.




