
ಪ್ರಗತಿವಾಹಿನಿ ಸುದ್ದಿ: ಬಾಳೆಕುದ್ರು ಮಠದ ಪೀಠಾಧಿಪತಿ ವಾಸುದೇವ ಸದಾಶಿವ ಸ್ವಾಮೀಜಿಯವರ ವಾಸ್ತವ್ಯ ಇದೀಗ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಮಠದ ಪುರಾತನ ವಿಗ್ರಹಗಳ ಮಾರಾಟ ಆರೋಪದ ಹಿನ್ನೆಲೆಯಲ್ಲಿ ಸ್ವಾಮೀಜಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಮಠದಿಂದ ನಿರ್ಗಮಿಸಿದ್ದ ಸ್ವಾಮೀಜಿ ಎಲ್ಲಿದ್ದಾರೆ ಎಂಬ ಪ್ರಶ್ನೆ ಮೂಡಿತ್ತು. ಇದೀಗ ಕೊಡಗಿನ ಪವಿತ್ರ ಕ್ಷೇತ್ರ ತಲಕಾವೇರಿಯ ಕೈಲಾಸಾಶ್ರಮದಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿದ್ದ ವಿಚಾರ ಬೆಳಕಿಗೆ ಬಂದಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಐತಿಹಾಸಿಕ ಬಾಳೆಕುದ್ರು ಮಠದ ಪುರಾತನ ವಿಗ್ರಹಗಳನ್ನು ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಹಿತರಕ್ಷಣಾ ವೇದಿಕೆಯ ದೂರಿನ ಮೇರೆಗೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಾಮೀಜಿ ವಾಸುದೇವ ಸದಾಶಿವ, ಮಠದ ಆಡಳಿತಾಧಿಕಾರಿ ಅನಿಲ್ ಕುಮಾರ್, ಅಕೌಂಟೆಂಟ್ ಜಯಲಕ್ಷ್ಮಿ, ಪರಿಚಾರಕ ಶ್ರೇಯಸ್ ಹಾಗೂ ವಿಗ್ರಹಗಳನ್ನು ಪಡೆದಿದ್ದಾರೆ ಎನ್ನಲಾದ ನಾಗೇಂದ್ರ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಮಠದಿಂದ ನಿರ್ಗಮಿಸಿದ್ದ ಸ್ವಾಮೀಜಿ, ಗುರುವಾರ ತಲಕಾವೇರಿಗೆ ಆಗಮಿಸಿ ಶುಕ್ರವಾರ ಸಂಜೆವರೆಗೂ ಕೈಲಾಸಾಶ್ರಮದಲ್ಲಿ ತಂಗಿದ್ದರು ಎನ್ನಲಾಗಿದೆ. ಅವರ ಈ ವಾಸ್ತವ್ಯದ ಬಗ್ಗೆ ಹಲವು ಚರ್ಚೆಗಳು ಆರಂಭವಾಗಿವೆ.
ತಮ್ಮ ವಾಸ್ತವ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾಮೀಜಿ, ಅನಗತ್ಯ ಗೊಂದಲಗಳಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ತಲಕಾವೇರಿಗೆ ಬಂದಿದ್ದಾಗಿ ತಿಳಿಸಿದ್ದಾರೆ. ತಮ್ಮ ವಿರುದ್ಧದ ಕಾನೂನಾತ್ಮಕ ಸಮಸ್ಯೆಗಳನ್ನು ಎದುರಿಸಲು ತಂಡ ಸಿದ್ಧವಾಗಿದೆ ಎಂದಿದ್ದಾರೆ.
ಇದೇ ವೇಳೆ, ವಿಗ್ರಹ ಮಾರಾಟದ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇದು ಇಂದಿನ ವಿವಾದವಲ್ಲ, 2013ರಿಂದಲೇ ಮಠದೊಳಗೆ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಹಿಂದಿನ ಗುರುಗಳ ಕಾಲದಿಂದಲೂ ಕೆಲವರು ಮಠದ ಪೀಠದಿಂದ ಗುರುಗಳನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ. ಮಠದ ಆಸ್ತಿಯನ್ನು ತಮ್ಮ ವಶಕ್ಕೆ ಪಡೆಯುವ ಉದ್ದೇಶದಿಂದ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಸ್ವಾಮೀಜಿ ದೂರಿದ್ದಾರೆ.
ಮಠದ ಕೆಲವು ವಿಗ್ರಹಗಳು ಕಾಲಕ್ರಮೇಣ ಹಾನಿಗೊಳಗಾಗಿದ್ದವು. ಅವುಗಳನ್ನು ಧಾರ್ಮಿಕ ವಿಧಿವಿಧಾನಗಳ ಮೂಲಕ ದುರಸ್ತಿ ಮಾಡಿಸುವ ಉದ್ದೇಶದಿಂದ ಲೋಹದ ವ್ಯಾಪಾರಿಯೊಬ್ಬರಿಗೆ ನೀಡಲಾಗಿತ್ತು ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ಯಾವುದೇ ವಿಗ್ರಹಗಳನ್ನು ಅಕ್ರಮವಾಗಿ ಮಾರಾಟ ಮಾಡಿಲ್ಲ. ಸಂಪೂರ್ಣ ಹಾಳಾಗಿದ್ದ ಕೆಲವು ಬಿಂಬಗಳನ್ನು ಧಾರ್ಮಿಕ ಸಂಪ್ರದಾಯದಂತೆ ವಿಸರ್ಜಿಸಲಾಗಿದೆ. ವಿಗ್ರಹಗಳನ್ನು ದುರಸ್ತಿಗೊಳಿಸಿ ಮತ್ತೆ ಪೂಜಾ ಕಾರ್ಯಗಳಿಗೆ ಬಳಸುವ ಉದ್ದೇಶದಿಂದಲೇ ಕ್ರಮ ಕೈಗೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಗಳೂ ಇವೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ, ಬಾಳೆಕುದ್ರು ಮಠದ ಪುರಾತನ ವಿಗ್ರಹಗಳ ಮಾರಾಟ ಆರೋಪದ ನಡುವೆ ಸ್ವಾಮೀಜಿಯವರ ತಲಕಾವೇರಿ ವಾಸ್ತವ್ಯ ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ.



