*ಅನ್ನಭಾಗ್ಯ ಅಕ್ಕಿ ನಿತ್ಯ 200 ಲೋಡ್ ಹೊರರಾಜ್ಯಗಳಿಗೆ ರವಾನೆ : ಡಾ. ವಿಜಯ ಸಂಕೇಶ್ವರ* *ಹಾಲಿನ ದರ ಏರಿಕೆಗೆ ವಿರೋಧ ಬೇಡ*

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ ಜಾಲಕ್ಕೆ ಕಡಿವಾಣ ಹಾಕಿ: ಡಾ. ವಿಜಯ ಸಂಕೇಶ್ವರ ಆಗ್ರಹ
ನಿತ್ಯ 200 ಲೋಡ್ ಅಕ್ಕಿ ಹೊರರಾಜ್ಯಗಳಿಗೆ ರವಾನೆ – ಪಡಿತರ ವ್ಯವಸ್ಥೆಯ ದುರ್ಬಳಕೆಗೆ ಆಕ್ರೋಶ
ಪ್ರಗತಿವಾಹಿನಿ ಸುದ್ದಿ/ ಬೆಂಗಳೂರು: ಬಡವರಿಗೆ ತಲುಪಬೇಕಾದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟವಾಗಿ ಹೊರರಾಜ್ಯಗಳಿಗೆ ಸಾಗಣೆಯಾಗುತ್ತಿದೆ. ನಿತ್ಯ ಸುಮಾರು 200 ಲೋಡ್ಗಳಷ್ಟು ಅಕ್ಕಿ ರಾಜ್ಯದ ಗಡಿ ದಾಟುತ್ತಿದ್ದು, ಇದರಿಂದ ರಾಜ್ಯದಲ್ಲಿ ಅಕ್ಕಿಯ ಬೆಲೆ ಏರಿಕೆಗೂ ಕಾರಣವಾಗುತ್ತಿದೆ ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಆರೋಪಿಸಿದ್ದಾರೆ.
ವಿಜಯವಾಣಿ ಸುದ್ದಿಜಾಲದೊಂದಿಗೆ ಮಾತನಾಡಿದ ಅವರು, ಪಡಿತರ ಅಕ್ಕಿಯ ಅಕ್ರಮ ಮಾರಾಟದ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳಿಗೂ ಮಾಹಿತಿ ಇದ್ದರೂ ಇದನ್ನು ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳು ಜಾರಿಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಡಿತರ ಅಕ್ಕಿ ವಿತರಣೆಯ ಪ್ರಮಾಣವನ್ನು ಫಲಾನುಭವಿಗಳ ನೈಜ ಅಗತ್ಯಕ್ಕೆ ಅನುಗುಣವಾಗಿ ನಿರ್ಧರಿಸಬೇಕು. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರವೂ ಸೂಕ್ತ ಪರಿಶೀಲನೆ ನಡೆಸದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಟೀಕಿಸಿದ್ದಾರೆ.
*ಅಗತ್ಯಕ್ಕಿಂತ ಮೂರು ಪಟ್ಟು ಹೆಚ್ಚು ಅಕ್ಕಿ ವಿತರಣೆ?*
ಪಡಿತರ ಚೀಟಿದಾರರಿಗೆ ಅವರ ನೈಜ ಅಗತ್ಯಕ್ಕಿಂತ ಮೂರು ಪಟ್ಟು ಹೆಚ್ಚು ಅಕ್ಕಿ ವಿತರಿಸಲಾಗುತ್ತಿದೆಯೇ ಅಥವಾ ಕಾಳಸಂತೆಕೋರರ ಜಾಲವೇ ಇದರ ಹಿಂದೆ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಸಮಗ್ರವಾಗಿ ತನಿಖೆ ಮಾಡಬೇಕಿದೆ. ಅನ್ನಭಾಗ್ಯದ ಅಕ್ಕಿಯನ್ನು ಪಾಲಿಷ್ ಮಾಡಿ ಹೊರರಾಜ್ಯಗಳಿಗೆ ಸಾಗಿಸುವುದು ವ್ಯವಸ್ಥಿತ ದಂಧೆಯಾಗಿ ಬೆಳೆದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಬಡವರ ಹಸಿವು ನೀಗಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಜನಪರ ಯೋಜನೆ ದುರ್ಬಳಕೆಯಾಗುತ್ತಿರುವುದು ಗಂಭೀರ ವಿಚಾರ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವುದಲ್ಲದೆ, ಅಭಿವೃದ್ಧಿ ಕಾರ್ಯಗಳಿಗೂ ಆರ್ಥಿಕ ಹೊಡೆತ ಬೀಳುತ್ತದೆ. ಈ ಅಕ್ರಮದಲ್ಲಿ ಭ್ರಷ್ಟ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಹಾಗೂ ಕೆಲ ಸಚಿವರು, ಶಾಸಕರ ಬೆಂಬಲವೂ ಇದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸರ್ಕಾರ ಇಂತಹ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
“ಕಾಳಸಂತೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಮತ್ತು ವಿಚಕ್ಷಣಾ ದಳಗಳು ಏನು ಮಾಡುತ್ತಿವೆ? ಸಾಮಾನ್ಯ ಜನರ ಗಮನಕ್ಕೆ ಬರುವ ಅಕ್ರಮಗಳು ಅಧಿಕಾರಿಗಳ ಕಣ್ಣಿಗೆ ಬೀಳುತ್ತಿಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.
*ಹಾಲಿನ ದರ ಏರಿಕೆಯನ್ನು ರಾಜಕೀಯಗೊಳಿಸುವುದು ಬೇಡ*
ರೈತರ ಹಿತದೃಷ್ಟಿಯಿಂದ ಸರ್ಕಾರ ನಂದಿನಿ ಹಾಲಿನ ಖರೀದಿ ದರ ಹೆಚ್ಚಿಸಿರುವುದನ್ನು ವಿರೋಧಿಸುವುದು ಸರಿಯಲ್ಲ ಎಂದು ಡಾ. ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟಿದ್ದಾರೆ.
ದುಬಾರಿ ದಿನಗಳಲ್ಲಿ ಜಾನುವಾರುಗಳ ಮೇವು, ಪಶು ಆಹಾರ ಹಾಗೂ ಹೈನುಗಾರಿಕೆಯ ನಿರ್ವಹಣಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಹಸು ಸಾಕುವ ರೈತರ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿಲ್ಲ. ಹೀಗಿರುವಾಗ ಹಾಲಿನ ದರ ಹೆಚ್ಚಳದ ನಿರ್ಧಾರ ಸಕಾಲಿಕವಾಗಿದೆ. ಕಳೆದ 60 ವರ್ಷಗಳಿಂದ ಹಸು ಸಾಕಣೆ ಮಾಡುತ್ತಿರುವ ನಮಗೂ ಈಗ ಅದರ ನಿರ್ವಹಣೆ ದುಬಾರಿಯಾಗಿ ಪರಿಣಮಿಸಿದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
*ಹಾಲಿನ ದರ ಏರಿಕೆ ವಿರೋಧಿಸಲು ಇದು ಚುನಾವಣಾ ಸಂದರ್ಭವಲ್ಲ. ವಿಪಕ್ಷಗಳು ಕೇವಲ 2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಮಾಡುವ ಬದಲು ರೈತರ ಹಿತದೃಷ್ಟಿಯಿಂದ ಯೋಚಿಸಬೇಕು. ರೈತರ ಆದಾಯಕ್ಕೆ ರಾಜಕೀಯ ಕಾರಣಗಳಿಗಾಗಿ ಅಡ್ಡಿಯಾಗುವುದು ಸರಿಯಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಪ್ರತಿ ಲೀಟರ್ ಹಾಲಿಗೆ 8 ರೂ. ಹೆಚ್ಚಳ ಮಾಡಲಾಗಿದೆ. ಹೊರರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ಮಾರಾಟ ದರ ಇನ್ನೂ ಕಡಿಮೆಯಿದೆ. ದರ ಹೆಚ್ಚಳದಿಂದ ಬಡ ಹೈನುಗಾರರ ಬದುಕಿಗೆ ನೆರವಾಗುವುದಾದರೆ ಅದನ್ನು ವಿರೋಧಿಸುವ ಅಗತ್ಯವಿಲ್ಲ. ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಲಕ್ಷಾಂತರ ಸಣ್ಣ ಕುಟುಂಬಗಳ ಬದುಕಿಗೆ ಈ ಖರೀದಿ ದರ ಹೆಚ್ಚಳ ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಕೆಎಂಎಫ್ ಹಾಗೂ ಅದರ ಅಧೀನದಲ್ಲಿ ಕಾರ್ಯನಿರ್ವಹಿಸುವ ಹಾಲು ಮಾರಾಟ ಒಕ್ಕೂಟಗಳು ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ರೈತರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಅವರ ಹಿತಾಸಕ್ತಿಯನ್ನು ಕಾಪಾಡುವ ಕೆಲಸ ಮಾಡುತ್ತಿವೆ ಎಂದು ಡಾ. ವಿಜಯ ಸಂಕೇಶ್ವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



