*ಮಗನನ್ನೇ ಕೊಲೆ ಮಾಡಿಸಿದ ತಾಯಿ*: *ಬೆಳಗಾವಿಯಲ್ಲಿ ಭೀಕರ ಕೃತ್ಯ ಬಯಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೆತ್ತ ಮಗನನ್ನೇ ಕೊಲೆ ಮಾಡಿಸಲು ಸುಪಾರಿ ನೀಡಿದ ಆರೋಪದ ಮೇಲೆ ಬೆಂಗಳೂರಿನ ತಾಯಿಯೊಬ್ಬಳನ್ನು ಒಳಗೊಂಡಂತೆ ಒಟ್ಟು ಆರು ಮಂದಿಯನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನೂ ಗುರುತಿಸಲಾಗಿದ್ದು, ಒಟ್ಟು ಏಳು ಮಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ನವೆಂಬರ್ 1ರಂದು ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೆಎಲ್‌ಇ ಛತ್ರಿ ಸಮೀಪದ ಗಟಾರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಮಾಹಿತಿ ಪಡೆದ ಮಾಳಮಾರುತಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಕೊಲೆ ಮತ್ತು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ನವೆಂಬರ್ 4ರಂದು ಬೆಂಗಳೂರಿನ ಆರ್.ಟಿ. ನಗರ ನಿವಾಸಿ ಮೀನಾ ನಾರಾಯಣ (44) ಎಂಬ ಮಹಿಳೆ ಸ್ಥಳದಲ್ಲಿ ಪತ್ತೆಯಾದ ಮೃತದೇಹ ತನ್ನ ಮಗ ವಿಜಯ ನಾರಾಯಣ (24) ಎಂಬಾತನದ್ದು ಎಂದು ಗುರುತಿಸಿದ್ದರು. ಅಕ್ಟೋಬರ್ 28ರಂದು ರಾಕೇಶ್ ಎಂಬಾತ ತನ್ನ ಕಾರಿನಲ್ಲಿ ಮಗನನ್ನು ಬೆಂಗಳೂರಿನಿಂದ ಬೆಳಗಾವಿಗೆ ಕರೆದುಕೊಂಡು ಬಂದಿದ್ದ ಎಂಬ ಮಾಹಿತಿಯನ್ನೂ ಪೊಲೀಸರಿಗೆ ನೀಡಿದ್ದರು.
ಈ ಸುಳಿವಿನ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ ಮಾಳಮಾರುತಿ ಠಾಣೆಯ ಪಿಐ ಬಿ.ಆರ್. ಗಡ್ಡೆಕರ ನೇತೃತ್ವದ ತಂಡ ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಮೃತ ವಿಜಯನ ತಾಯಿ ಮೀನಾ ನಾರಾಯಣಳೇ ತನ್ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ರಾಕೇಶ್ ಪರಶುರಾಮ ಜಾಮೂನಿಗೆ ಮಗನನ್ನು ಕೊಲೆ ಮಾಡುವಂತೆ ಸೂಚಿಸಿದ್ದಳು ಎನ್ನಲಾಗಿದೆ. ಅದರಂತೆ ರಾಕೇಶ್ ತನ್ನ ಇತರ ಸಹಚರರೊಂದಿಗೆ ಸೇರಿ ಸಂಚು ರೂಪಿಸಿದ್ದಾನೆ.
ಆರೋಪಿಗಳು ನಿದ್ದೆ ಮಾತ್ರೆಗಳನ್ನು ಕೊಲ್ಕಂಕ್ಸ್ದಲ್ಲಿ ಬೆರೆಸಿ ವಿಜಯನಿಗೆ ಕುಡಿಸಿ ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಕಾರಿನಲ್ಲಿಯೇ ಶಲ್ಲೆಯಿಂದ ಆತನ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೆಎಲ್‌ಇ ಛತ್ರಿ ಸಮೀಪದ ಗಟಾರದಲ್ಲಿ ಎಸೆದು ಪರಾರಿಯಾಗಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ರಾಕೇಶ್ ಪರಶುರಾಮ ಜಾಮೂನಿ (34), ಮೀನಾ ನಾರಾಯಣ (44), ಸಚಿನ್ ಮಲ್ಲಪ್ಪ ಕಾಂಬಳೆ (34), ಮನೋಜ ದುಂಡಪ್ಪ ಕಾಂಬಳೆ (19), ತಮ್ಮಣ್ಣ ರವೀಂದ್ರ ಕಾಂಬಳೆ (21), ಏಕನಾಥ ಉಮಪ್ಪ ಕಾಂಬಳೆ (32). ಬಂಧಿತ ಆರೋಪಿಗಳಲ್ಲಿ ಮೀನಾ ನಾರಾಯಣ ಬೆಂಗಳೂರಿನ ನಿವಾಸಿಯಾಗಿದ್ದು, ಉಳಿದ ಆರೋಪಿಗಳು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ್ ತಾಲೂಕಿನ ತೇರಣಿ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಇನ್ನೋರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಪಾತ್ರವೂ ಪತ್ತೆಯಾಗಿದ್ದು, ಆತನ ವಿರುದ್ಧವೂ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೊಬ್ಬ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಮುಂದುವರಿಸಿದ್ದು, ತನಿಖೆ ಪ್ರಗತಿಯಲ್ಲಿದೆ.
ಪ್ರಕರಣವನ್ನು ಭೇದಿಸುವಲ್ಲಿ ಮಾಳಮಾರುತಿ ಠಾಣೆಯ ಪಿಐ ಬಿ.ಆರ್. ಗಡ್ಡೆಕರ, ಪಿಎಸ್‌ಐ ಆನಂದ ಆದಗೊಂಡ, ಎಎಸ್‌ಐ ಬಿ.ಎಫ್. ಬಸ್ತವಾಡ ಸೇರಿದಂತೆ ಠಾಣೆಯ ಪೊಲೀಸ್ ಸಿಬ್ಬಂದಿ ಮಹತ್ವದ ಪಾತ್ರ ವಹಿಸಿದ್ದಾರೆ. ಪೊಲೀಸರ ಕಾರ್ಯಾಚರಣೆಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ಶ್ಲಾಘಿಸಿದ್ದಾರೆ.
ಹೆತ್ತ ತಾಯಿಯೇ ಮಗನ ಕೊಲೆಗೆ ಸಂಚು ರೂಪಿಸಿದ ಆರೋಪ ಬೆಳಕಿಗೆ ಬಂದಿರುವುದು ನಗರದಲ್ಲಿ ತೀವ್ರ ಆಘಾತ ಮೂಡಿಸಿದೆ.



