*ಕೆಲಸವಿಲ್ಲ, ಟೆನ್ಷನ್ ಇಲ್ಲ, ಬರೀ ನಿದ್ದೆ*: *ಮಲಗಿಕೊಂಡೇ ಲಕ್ಷಾಂತರ ರೂಪಾಯಿ ಗೆದ್ದ ಭಾರತದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ಕೆಲಸ ಮಾಡಿಯೇ ಹಣ ಸಂಪಾದಿಸಬೇಕು ಎಂಬ ನಿಯಮವನ್ನೇ ಮರೆಸುವಂತಹ ಅಪರೂಪದ ಸ್ಪರ್ಧೆಯೊಂದು ಗಮನ ಸೆಳೆದಿದೆ. ಇಲ್ಲಿ ನಿದ್ದೆ ಮಾಡಿದ್ದಕ್ಕೇ ಮಹಿಳೆಯೊಬ್ಬರು ಬರೋಬ್ಬರಿ 9.6 ಲಕ್ಷ ರೂಪಾಯಿ ಬಹುಮಾನ ಗೆದ್ದಿದ್ದಾರೆ. ಅಷ್ಟೇ ಅಲ್ಲ, ಉಚಿತ ಪ್ರವಾಸದ ಅವಕಾಶವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ನಿದ್ದೆಯನ್ನೇ ಉದ್ಯೋಗವನ್ನಾಗಿಸಿಕೊಂಡ ಈ ಸ್ಪರ್ಧೆಯ ವಿಜೇತೆ ಯಾರು ಗೊತ್ತಾ?
2 ಲಕ್ಷಕ್ಕೂ ಹೆಚ್ಚು ಅರ್ಜಿಗಳ ನಡುವೆ ಗೆದ್ದ ಮಹಿಳೆ!
ಮುಂಬೈ ಮೂಲದ ಜಿನಿಯಾ ಚಟರ್ಜಿ ಈ ಅಪರೂಪದ ಸಾಧನೆ ಮಾಡಿದ ಮಹಿಳೆ. ದೇಶಾದ್ಯಂತ ನಡೆದ ಎರಡು ತಿಂಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಭಾರತದ ‘ಸ್ಲೀಪ್ ಚಾಂಪಿಯನ್’ ಪಟ್ಟ ಅಲಂಕರಿಸಿದ್ದಾರೆ. ಈ ಸ್ಪರ್ಧೆಗೆ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು.
ಮನೆ ಮತ್ತು ಪೀಠೋಪಕರಣಗಳ ಕಂಪನಿ ವೇಕ್ಫಿಟ್ ಆಯೋಜಿಸಿದ್ದ ಈ ಸ್ಪರ್ಧೆಯ ಹೆಸರು ‘ಸ್ಲೀಪ್ ಇಂಟರ್ನ್ಶಿಪ್’. ಸ್ಪರ್ಧಿಗಳು ಪ್ರತಿದಿನ ಸರಿಯಾಗಿ ನಿದ್ದೆ ಮಾಡಬೇಕು, ನಿಗದಿತ ಸಮಯಕ್ಕೆ ಮಲಗಬೇಕು ಮತ್ತು ವಾರಕ್ಕೊಮ್ಮೆ ನೀಡುವ ಸೃಜನಶೀಲ ಸವಾಲುಗಳನ್ನು ಪೂರ್ಣಗೊಳಿಸಬೇಕಿತ್ತು.
2 ಲಕ್ಷಕ್ಕೂ ಹೆಚ್ಚು ಅರ್ಜಿಗಳ ಪೈಕಿ ಹಲವು ಹಂತಗಳ ಆಯ್ಕೆ ಪ್ರಕ್ರಿಯೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ಕೇವಲ 10 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಸುಮಾರು 60 ದಿನಗಳ ಕಾಲ ಸ್ಪರ್ಧಿಗಳು ತಮ್ಮ ನಿದ್ದೆಯ ಅವಧಿ ಮತ್ತು ಗುಣಮಟ್ಟವನ್ನು ದಾಖಲಿಸಬೇಕಿತ್ತು. ಪ್ರತಿದಿನದ ನಿದ್ದೆಯ ಅಂಕಗಳ ಆಧಾರದ ಮೇಲೆ ಲೀಡರ್ಬೋರ್ಡ್ನಲ್ಲಿ ಸ್ಥಾನ ನಿರ್ಧಾರವಾಗುತ್ತಿತ್ತು.
ಆದರೆ ಇಲ್ಲಿ ಕೇವಲ ನಿದ್ದೆ ಮಾಡಿದರೆ ಸಾಲುತ್ತಿರಲಿಲ್ಲ. ಸ್ಪರ್ಧಿಗಳು ತಮ್ಮ ಸೃಜನಶೀಲತೆಯನ್ನೂ ಸಾಬೀತುಪಡಿಸಬೇಕಿತ್ತು. ‘ಸ್ಲೀಪ್ ಸಿನಿಮಾ’ ಸವಾಲಿನಲ್ಲಿ ಪ್ರಸಿದ್ಧ ಸಿನಿಮಾಗಳ ದೃಶ್ಯಗಳನ್ನು ನಿದ್ದೆಗೆ ಸಂಬಂಧಿಸಿದಂತೆ ಮರುಸೃಷ್ಟಿಸಬೇಕಿತ್ತು. ‘ಸ್ಲೀಪ್ ಬಿಂಗೊ’ ಸ್ಪರ್ಧೆಯಲ್ಲಿ ಒಂದು ವಾರದ ತಮ್ಮ ನಿದ್ದೆಯ ಅಭ್ಯಾಸಗಳನ್ನು ಪರಿಶೀಲಿಸಬೇಕಿತ್ತು.
ಇನ್ನೊಂದು ವಿಚಿತ್ರ ಸವಾಲು ‘ಅಂಡರ್ಕವರ್ ಸ್ಲೀಪ್ ಮಿಷನ್’. ಮಾತನಾಡುವಾಗ ಯಾರಿಗೂ ಅನುಮಾನ ಬಾರದಂತೆ ‘ಬ್ಲಾಂಕೆಟ್’ ಅಥವಾ ‘ಪಿಲ್ಲೋ’ ಎಂಬ ಪದಗಳನ್ನು 10 ಬಾರಿ ಬಳಸಬೇಕಿತ್ತು. ಪ್ರತಿ ವಾರ ಉತ್ತಮ ಪ್ರದರ್ಶನ ನೀಡಿದವರಿಗೆ ‘ಪ್ರೊ ಸ್ಲೀಪರ್ ಆಫ್ ದಿ ವೀಕ್’ ಪ್ರಶಸ್ತಿ ನೀಡಲಾಗುತ್ತಿತ್ತು.
ಎರಡು ತಿಂಗಳ ಸ್ಪರ್ಧೆಯ ಬಳಿಕ ಜಿನಿಯಾ ಚಟರ್ಜಿ, ರತ್ನಗಿರಿ ಮಣಿಕಂದನ್ ಮತ್ತು ಮೆಹೆಕ್ ಖೋಟ್ ಅಗ್ರ ಮೂರು ಸ್ಥಾನ ಪಡೆದಿದ್ದರು. ವಾರದ ಸೃಜನಶೀಲ ಸವಾಲುಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹೈದರಾಬಾದ್ನ ಕರೀಂ ಖಾನ್ ವೈಲ್ಡ್ಕಾರ್ಡ್ ಪ್ರವೇಶ ಪಡೆದು ಫೈನಲ್ಗೆ ಮತ್ತಷ್ಟು ರೋಚಕತೆ ತಂದಿದ್ದರು.
‘ಬಿಗ್ ಬೆಡ್’ ಹೆಸರಿನ ಅಂತಿಮ ಸುತ್ತಿನಲ್ಲಿ ಎರಡು ಪ್ರಮುಖ ಸವಾಲುಗಳಿದ್ದವು. ಮೊದಲನೆಯದು ‘ಮೆಮೊರಿ ಫೋಮ್ ಚಾಲೆಂಜ್’. ಇದರಲ್ಲಿ ಮಾದರಿ ಚಿತ್ರಗಳನ್ನು ನೋಡಿ ಅದೇ ರೀತಿಯ ಮಲಗುವ ಕೋಣೆಯ ವ್ಯವಸ್ಥೆಯನ್ನು ಮರುಸೃಷ್ಟಿಸಬೇಕಿತ್ತು. ಇದಕ್ಕಾಗಿ ನೆನಪಿನ ಶಕ್ತಿ, ಗಮನ ಮತ್ತು ತಂಡದ ಸಹಕಾರವನ್ನು ಪರೀಕ್ಷಿಸಲಾಯಿತು.
ಎರಡನೇ ಸವಾಲು ‘ಸ್ಲೀಪ್ ಆಕ್ಷನ್’. ಇದರಲ್ಲಿ ದಿಂಬು, ಹೊದಿಕೆ, ಎಸಿ ನಿಯಂತ್ರಣ, ಬೆಳಕು ಮತ್ತು ಶಬ್ದದ ವ್ಯವಸ್ಥೆ ಸೇರಿದಂತೆ ನಿದ್ದೆಗೆ ಅಗತ್ಯವಾದ ಸೌಲಭ್ಯಗಳನ್ನು ಬಿಡ್ ಮೂಲಕ ಆಯ್ಕೆ ಮಾಡಿಕೊಳ್ಳಬೇಕಿತ್ತು.
ಕೊನೆಗೆ ಸ್ಪರ್ಧಿಗಳು ತಮಗೆ ಬೇಕಾದ ರೀತಿಯಲ್ಲಿ ಸಿದ್ಧಪಡಿಸಿಕೊಂಡ ಮಲಗುವ ವ್ಯವಸ್ಥೆಯಲ್ಲಿ ಒಂದು ರಾತ್ರಿ ಕಳೆಯಬೇಕಿತ್ತು. ಆ ರಾತ್ರಿ ದಾಖಲಾದ ನಿದ್ದೆಯ ಅಂಕಗಳೇ ಅಂತಿಮ ವಿಜೇತರನ್ನು ನಿರ್ಧರಿಸಿದವು.
ಎಲ್ಲಾ ಸವಾಲುಗಳ ಬಳಿಕ ಜಿನಿಯಾ ಚಟರ್ಜಿ ಮೊದಲ ಸ್ಥಾನ ಪಡೆದು ಭಾರತದ ಸ್ಲೀಪ್ ಚಾಂಪಿಯನ್ ಆಗಿದ್ದಾರೆ. ಅವರಿಗೆ 9.6 ಲಕ್ಷ ರೂಪಾಯಿ ಬಹುಮಾನದ ಜೊತೆಗೆ ವೇಕ್ಫಿಟ್ ಪ್ರಾಯೋಜಿತ ಪ್ರವಾಸದ ಅವಕಾಶವೂ ದೊರೆತಿದೆ. 2019ರಲ್ಲಿ ಆರಂಭವಾದ ಈ ಸ್ಲೀಪ್ ಇಂಟರ್ನ್ಶಿಪ್ನ ಮೊದಲ ನಾಲ್ಕು ಆವೃತ್ತಿಗಳಿಗೆ ಒಟ್ಟು 10 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈವರೆಗೆ 65 ಇಂಟರ್ನ್ಗಳಿಗೆ ತಲಾ ಒಂದು ಲಕ್ಷ ರೂಪಾಯಿ ಸ್ಟೈಪೆಂಡ್ ನೀಡಲಾಗಿದೆ.
ಇದೀಗ ಆರನೇ ಆವೃತ್ತಿಯಲ್ಲೂ ಭಾಗವಹಿಸಲು ಆಸಕ್ತರು ವೇಕ್ಫಿಟ್ ಅಧಿಕೃತ ವೆಬ್ಸೈಟ್ನಲ್ಲಿ ಮುಂಗಡ ನೋಂದಣಿ ಮಾಡಿಕೊಳ್ಳಬಹುದು. ಒಟ್ಟಿನಲ್ಲಿ, ನಿದ್ದೆ ಮಾಡಿಯೇ ಲಕ್ಷಾಂತರ ರೂಪಾಯಿ ಗೆಲ್ಲುವ ಅವಕಾಶವಿದೆ ಎಂಬುದನ್ನು ಈ ಸ್ಪರ್ಧೆ ತೋರಿಸಿಕೊಟ್ಟಿದೆ.




