*ಗೂಢಚಾರಿಣಿಯ ಬಲೆಗೆ ಬಿದ್ದ ಎನ್‌ವಿಡಿಯಾ ಸಿಇಒ*: *ವಿವಾಹೇತರ ಸಂಬಂಧ ಒಪ್ಪಿಕೊಂಡ ಜೆನ್ಸನ್ ಹುವಾಂಗ್!*

ಪ್ರಗತಿವಾಹಿನಿ ಸುದ್ದಿ: ವಿಶ್ವದ ಪ್ರಮುಖ ಎಐ ಚಿಪ್ ತಯಾರಿಕಾ ಸಂಸ್ಥೆ ಎನ್‌ವಿಡಿಯಾದ ಸಿಇಒ ಜೆನ್ಸನ್ ಹುವಾಂಗ್ ಇದೀಗ ಅಂತರರಾಷ್ಟ್ರೀಯ ಮಟ್ಟದ ವಿವಾದದಲ್ಲಿ ಸಿಲುಕಿದ್ದಾರೆ. ಚೀನಾ ಪರ ಗೂಢಚಾರಿಕೆ ನಡೆಸುತ್ತಿದ್ದಳೆಂದು ಶಂಕಿಸಲಾದ ಮಹಿಳೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಆರೋಪ ಕೇಳಿಬಂದಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ಎನ್‌ವಿಡಿಯಾ ನಿರ್ದೇಶಕರ ಮಂಡಳಿ ಸ್ವತಂತ್ರ ತನಿಖೆಗೆ ಆದೇಶಿಸಿದೆ. ಇತ್ತ ತಮ್ಮ ಪತ್ನಿಗೆ ದ್ರೋಹ ಎಸಗಿರುವುದಾಗಿ ಜೆನ್ಸನ್ ಹುವಾಂಗ್ ಕಂಪನಿಯ ಉದ್ಯೋಗಿಗಳಿಗೆ ಬರೆದ ಸಂದೇಶದಲ್ಲಿ ಒಪ್ಪಿಕೊಂಡಿದ್ದಾರೆ.
ಯಾರು ಆ ಶಂಕಿತ ಮಹಿಳೆ ಅಲೈಸ್ ಹುವಾಂಗ್?
ವರದಿಗಳ ಪ್ರಕಾರ, ಅಲೈಸ್ ಹುವಾಂಗ್ ಎಂಬ ಚೀನೀ ಮಹಿಳೆ ಈ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಚೀನಾದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡಿದ್ದ ಈಕೆ, ಬಳಿಕ ಬ್ಯಾಂಕಿಂಗ್ ಮತ್ತು ಹೂಡಿಕೆ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸಿದ್ದಾರೆ. ಸಿಂಗಾಪುರ ಮೂಲದ ಮೆಗಾಸ್ಪೀಡ್ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದ ಅಲೈಸ್, ಎನ್‌ವಿಡಿಯಾದ ವ್ಯವಹಾರಿಕ ಸಂಪರ್ಕದಲ್ಲಿದ್ದರು.
ಅಮೆರಿಕದ ಗುಪ್ತಚರ ಅಧಿಕಾರಿಗಳ ಪ್ರಕಾರ, ಅಲೈಸ್ ಚೀನಾದ ಗುಪ್ತಚರ ಜಾಲದೊಂದಿಗೆ ಸಂಪರ್ಕ ಹೊಂದಿದ್ದು, ಜೆನ್ಸನ್ ಹುವಾಂಗ್ ಅವರಿಂದ ಮಾಹಿತಿ ಪಡೆಯುವ ಪ್ರಯತ್ನ ನಡೆಸಿದ್ದರು ಎಂದು ಶಂಕಿಸಲಾಗಿದೆ.
ಈ ನಡುವೆಯೇ ಜೆನ್ಸನ್ ಹುವಾಂಗ್ ತಮ್ಮ ಕಂಪನಿಯ ಉದ್ಯೋಗಿಗಳಿಗೆ ಸಂದೇಶವೊಂದನ್ನು ಕಳುಹಿಸಿದ್ದಾರೆ. ಅದರಲ್ಲಿ ಪತ್ನಿಗೆ ದ್ರೋಹ ಎಸಗಿರುವುದಾಗಿ ಒಪ್ಪಿಕೊಂಡು, ತಮ್ಮ ನಡೆ ಪತ್ನಿ ಮತ್ತು ಮಕ್ಕಳಿಗೆ ನೋವುಂಟುಮಾಡಿದೆ ಎಂದು ಕ್ಷಮೆ ಕೇಳಿದ್ದಾರೆ. ಕುಟುಂಬದವರ ವಿಶ್ವಾಸವನ್ನು ಮರಳಿ ಗಳಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ನವೆಂಬರ್ 8ರಂದು ಎನ್‌ವಿಡಿಯಾದ ನಿರ್ದೇಶಕರ ಮಂಡಳಿ ಸ್ವತಂತ್ರ ತನಿಖೆಗೆ ಆದೇಶಿಸಿದೆ. ಕಂಪನಿಯ ಗೌಪ್ಯ ಮಾಹಿತಿ ಅಥವಾ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಆದರೆ ಈವರೆಗೆ ಕಂಪನಿಯ ರಹಸ್ಯ ಮಾಹಿತಿ ಅಥವಾ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿದೆ ಎಂಬುದಕ್ಕೆ ಯಾವುದೇ ಕಾರಣ ಕಂಡುಬಂದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಜೆನ್ಸನ್ ಹುವಾಂಗ್ ಕೂಡ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಸಿಂಗಾಪುರದ ಮೆಗಾಸ್ಪೀಡ್ ಸಂಸ್ಥೆ ಕಳೆದ ಎರಡು ವರ್ಷಗಳಲ್ಲಿ ಎನ್‌ವಿಡಿಯಾದಿಂದ ಸುಮಾರು 4.8 ಬಿಲಿಯನ್ ಡಾಲರ್ ಮೌಲ್ಯದ ಚಿಪ್‌ಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ಈ ಚಿಪ್‌ಗಳು ರಫ್ತು ನಿರ್ಬಂಧಗಳನ್ನು ಮೀರಿ ಚೀನಾಗೆ ತಲುಪಿವೆಯೇ ಎಂಬ ಅನುಮಾನವನ್ನು ಅಮೆರಿಕದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅಂದರೆ, ಇದು ಕೇವಲ ವೈಯಕ್ತಿಕ ಸಂಬಂಧದ ವಿವಾದವಲ್ಲ; ಅಮೆರಿಕ ಮತ್ತು ಚೀನಾ ನಡುವಿನ ತಂತ್ರಜ್ಞಾನ ಸ್ಪರ್ಧೆಯ ಆಯಾಮವನ್ನೂ ಪಡೆದುಕೊಂಡಿದೆ.
ಒಟ್ಟಿನಲ್ಲಿ, ಜೆನ್ಸನ್ ಹುವಾಂಗ್ ಅವರ ವೈಯಕ್ತಿಕ ಜೀವನದ ವಿವಾದ ಮತ್ತು ಚೀನಾ ಗೂಢಚಾರಿಕೆ ಆರೋಪಗಳು ಎನ್‌ವಿಡಿಯಾ ಸಂಸ್ಥೆಯನ್ನು ದೊಡ್ಡ ತನಿಖೆಯ ಹಂತಕ್ಕೆ ಕೊಂಡೊಯ್ದಿವೆ. ತನಿಖೆಯ ವರದಿಯಲ್ಲಿ ಏನು ಹೊರಬರಲಿದೆ ಎಂಬ ಕುತೂಹಲ ಇದೀಗ ಜಾಗತಿಕ ತಂತ್ರಜ್ಞಾನ ವಲಯದಲ್ಲಿದೆ.




