Film & EntertainmentKannada NewsKarnataka News

*ಗಲ್ವಾನ್ ಕಣಿವೆಯ ರಣಕಹಳೆ*: *ಸಲ್ಮಾನ್ ಖಾನ್ ಅಭಿನಯದ ‘ಮಾತೃಭೂಮಿ’ ಟ್ರೈಲರ್ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಭಾರತೀಯ ಸೈನಿಕರ ಧೈರ್ಯ, ತ್ಯಾಗ ಮತ್ತು ದೇಶಪ್ರೇಮದ ಕಥೆ ಈ ಚಿತ್ರದ ಪ್ರಮುಖ ಆಕರ್ಷಣೆ. ಯುದ್ಧದ ಸನ್ನಿವೇಶಗಳ ಜೊತೆಗೆ ಭಾವನಾತ್ಮಕ ಕ್ಷಣಗಳೂ ಟ್ರೈಲರ್‌ನಲ್ಲಿ ಗಮನ ಸೆಳೆಯುತ್ತಿವೆ.

‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಎಂಬ ಹೆಸರಿನಲ್ಲಿ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಆರಂಭದಲ್ಲಿ ‘ಬ್ಯಾಟಲ್ ಆಫ್ ಗಾಲ್ವಾನ್’ ಎಂದು ಹೆಸರಿಡಲಾಗಿದ್ದ ಈ ಚಿತ್ರದ ಶೀರ್ಷಿಕೆಯನ್ನು ಬಳಿಕ ಬದಲಾಯಿಸಲಾಗಿದೆ. 2020ರ ಜೂನ್‌ನಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ ಈ ಸಿನಿಮಾ ರೂಪುಗೊಂಡಿದೆ.

ಟ್ರೈಲರ್‌ನಲ್ಲಿ ಸಲ್ಮಾನ್ ಖಾನ್ ಭಾರತೀಯ ಸೇನೆಯ ಬೆಟಾಲಿಯನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಗಡಿಯಲ್ಲಿ ಚೀನಾ ಸೈನಿಕರ ಉದ್ಧಟತನವನ್ನು ಎದುರಿಸುವ ಜೊತೆಗೆ ಶಾಂತಿ ಕಾಪಾಡುವ ಜವಾಬ್ದಾರಿಯನ್ನು ನಿಭಾಯಿಸುವ ಭಾರತೀಯ ಯೋಧರ ಧೈರ್ಯ ಮತ್ತು ಸಂಯಮವನ್ನು ಚಿತ್ರಿಸಲಾಗಿದೆ. ಸುಮಾರು 4 ನಿಮಿಷ 43 ಸೆಕೆಂಡ್ ಉದ್ದದ ಟ್ರೈಲರ್‌ನಲ್ಲಿ ಯುದ್ಧದ ದೃಶ್ಯಗಳು ಮೈನವಿರೇಳಿಸುತ್ತವೆ.

16 ಬಿಹಾರ್ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿಕ್ಕುಮಲ್ಲ ಸಂತೋಷ್ ಬಾಬು ಅವರಿಂದ ಪ್ರೇರಿತವಾದ ಪಾತ್ರದಲ್ಲಿ ಸಲ್ಮಾನ್ ನಟಿಸಿದ್ದಾರೆ. ಗಾಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಸಂತೋಷ್ ಬಾಬು ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ನೀಡಿ ಗೌರವಿಸಲಾಗಿತ್ತು.

ಯುದ್ಧದ ಸನ್ನಿವೇಶಗಳಷ್ಟೇ ಅಲ್ಲದೆ, ಸೈನಿಕರ ಕುಟುಂಬಗಳ ಭಾವನೆಗಳು, ತ್ಯಾಗ ಮತ್ತು ದೇಶಪ್ರೇಮಕ್ಕೂ ಚಿತ್ರದಲ್ಲಿ ಆದ್ಯತೆ ನೀಡಲಾಗಿದೆ. ಚಿತ್ರಾಂಗದಾ ಸಿಂಗ್ ಅವರು ಸಲ್ಮಾನ್ ಖಾನ್ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಹಾಸ್ಯದ ಸನ್ನಿವೇಶಗಳೂ ಇದ್ದು, ಚೀನಾದ ಸೇನಾಧಿಕಾರಿಗೆ ಭಾರತೀಯ ಶೈಲಿಯ ಚೈನೀಸ್ ಖಾದ್ಯ ತಿನ್ನಿಸುವ ದೃಶ್ಯ ಗಮನ ಸೆಳೆಯುತ್ತದೆ.

ಲಡಾಖ್‌ನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ನೈಜ ಸ್ಥಳಗಳ ದೃಶ್ಯಗಳಿಗೆ ವಿಎಫ್‌ಎಕ್ಸ್ ತಂತ್ರಜ್ಞಾನವನ್ನು ಬಳಸಲಾಗಿದೆ. ಸಿನಿಮಾ ಬಯೋಪಿಕ್ ಅಲ್ಲ ಎಂದು ಸಲ್ಮಾನ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಹಸ್ತಕ್ಷೇಪದ ವದಂತಿಗಳನ್ನೂ ತಳ್ಳಿಹಾಕಿದ್ದು, ಚಿತ್ರದ ಮುಖ್ಯ ಸಂದೇಶ ಶಾಂತಿ ಎಂದು ಹೇಳಿದ್ದಾರೆ. ವಿಎಫ್‌ಎಕ್ಸ್ ಕೆಲಸ ಪೂರ್ಣಗೊಳಿಸುವ ಕಾರಣದಿಂದ ಬಿಡುಗಡೆ ವಿಳಂಬವಾಯಿತು ಎಂದಿದ್ದಾರೆ. ಚಿತ್ರವು ಡಿಸೆಂಬರ್ 4ರಂದು ಬಿಡುಗಡೆಯಾಗಲಿದೆ.

Related Articles

Back to top button