
ಪ್ರಗತಿವಾಹಿನಿ ಸುದ್ದಿ: ಕೆ.ಎಸ್.ಆರ್.ಟಿ.ಸಿಯ ಮಹಿಳಾ ಮೆಕ್ಯಾನಿಕ್ ಒಬ್ಬರ ಮೇಲೆ ಸಹೋದ್ಯೋಗಿಯೊಬ್ಬ ಏಕಾಏಕಿ ಚಾಕುವಿನಿಂದ ಇರಿದು ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಮಹಿಳಾ ಮೆಕ್ಯಾನಿಕ್ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಏಕಾಏಕಿ ಆಗಮಿಸಿದ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಈ ಘಟನೆ ನಡೆದಿದೆ.
ನೆಲಮಂಗಲ ನಗರದ ಅರಿಶಿನಕುಂಟೆ ಬಳಿಯಿರುವ KSRTC ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿರುವ 40 ವರ್ಷದ ಲಕ್ಷ್ಮಿ ಎಂಬುವವರು ಗಂಭೀರವಾಗಿ ಹಲ್ಲೆಗೊಳಲಾಗಿದ್ದಾರೆ.
ನಿನ್ನೆ ರಾತ್ರಿ ಸುಮಾರು 8:30ರ ವೇಳೆಗೆ ಲಕ್ಷ್ಮಿ ಅವರು ತಮ್ಮ ಕೆಲಸ ಮುಗಿಸಿ ಮನೆಗೆ ಹೊರಟಿದ್ದರು. ಈ ವೇಳೆ ಅಲ್ಲಿಗೆ ಬಂದ ಅಮಾನತುಗೊಂಡಿರುವ ಸಹೋದ್ಯೋಗಿ ಶಿವರಾಜ್ ಎಂಬಾತ, ಏಕಾಏಕಿ ಲಕ್ಷ್ಮಿ ಅವರ ಮೇಲೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.
ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ಅವರು ಆರೋಪಿ ಶಿವರಾಜ್ ವಿರುದ್ಧ ಸಾಕ್ಷಿ ಹೇಳಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ದ್ವೇಷ ಸಾಧಿಸುತ್ತಿದ್ದ ಶಿವರಾಜ್ ಈಗ ಚಾಕು ಇರಿದಿದ್ದಾನೆ.
ಆರೋಪಿ ಶಿವರಾಜ್ ಕಳೆದ ಕೆಲವು ತಿಂಗಳ ಹಿಂದೆ ಕರ್ತವ್ಯದಿಂದ ಅಮಾನತುಗೊಂಡಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ.
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಲಕ್ಷ್ಮಿ ಅವರನ್ನು ತಕ್ಷಣವೇ ಸ್ಥಳೀಯರು ಹಾಗೂ ಡಿಪೋ ಸಿಬ್ಬಂದಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




