*ನ.14ರಂದು ಕೆಎಲ್ಇ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ ತಪಾಸಣೆ ಶಿಬಿರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವ ಮಧುಮೇಹ ದಿನದ ಅಂಗವಾಗಿ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ವಿಭಾಗದಿಂದ ನವೆಂಬರ್ 14ರಂದು ಉಚಿತ ಮಧುಮೇಹ ತಪಾಸಣೆ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನೆಹರು ನಗರದ ಆಸ್ಪತ್ರೆಯ ಮಧುಮೇಹ ಕೇಂದ್ರದ ಕೊಠಡಿ ಸಂಖ್ಯೆ 5ರಲ್ಲಿ ಶಿಬಿರ ನಡೆಯಲಿದೆ.
‘ಮಧುಮೇಹದ ಬಗ್ಗೆ ಬೇಗ ಕ್ರಮ ಕೈಗೊಳ್ಳೋಣ’ ಎಂಬ ಧ್ಯೇಯದೊಂದಿಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಧುಮೇಹ ಮತ್ತು ಮಧುಮೇಹಪೂರ್ವ ಸ್ಥಿತಿಯನ್ನು ಆರಂಭದಲ್ಲೇ ಪತ್ತೆಹಚ್ಚುವುದು, ಟೈಪ್-2 ಮಧುಮೇಹದ ಅಪಾಯ ತಗ್ಗಿಸುವುದು ಹಾಗೂ ಮಧುಮೇಹದಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಶಿಬಿರದಲ್ಲಿ ಉಚಿತ ರಕ್ತದ ಸಕ್ಕರೆ ಪರೀಕ್ಷೆ ನಡೆಸಲಾಗುತ್ತದೆ. ವೈದ್ಯರ ಸಲಹೆಯ ಮೇರೆಗೆ ಯಕೃತ್ತಿನ ಫೈಬ್ರೋಸ್ಕ್ಯಾನ್, ಎಚ್ಬಿಎ1ಸಿ ಮತ್ತು ಥೈರಾಯ್ಡ್ ಪರೀಕ್ಷೆಗಳ ಸೌಲಭ್ಯವೂ ಇರಲಿದೆ.
ಕುಟುಂಬದಲ್ಲಿ ಮಧುಮೇಹದ ಇತಿಹಾಸ ಹೊಂದಿರುವವರು, ಅಧಿಕ ತೂಕ, ಅಧಿಕ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಮತ್ತು ಗರ್ಭಾವಸ್ಥೆಯಲ್ಲಿ ಮಧುಮೇಹ ಹೊಂದಿದ್ದ ಮಹಿಳೆಯರು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾಡಿದೆ.
ಮೊದಲ ಬಾರಿಗೆ ಮಧುಮೇಹ ಅಥವಾ ಮಧುಮೇಹಪೂರ್ವ ಸ್ಥಿತಿಯ ತಪಾಸಣೆಗೆ ಬರುವವರು ಉಪವಾಸದಲ್ಲಿಯೇ ಆಗಮಿಸಬೇಕು ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 0831-2551486 ಅಥವಾ 0831-2551116 ಸಂಪರ್ಕಿಸಬಹುದು. ಲೈಫ್ ಫಾರ್ ಎ ಚೈಲ್ಡ್, ಸ್ವೀಟ್ (SWEET) ಮತ್ತು ನ್ಯಾಷನಲ್ ಡಯಾಬಿಟಿಸ್ ಫೌಂಡೇಶನ್ ಸೊಸೈಟಿ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಹಯೋಗ ನೀಡಿವೆ.



