*ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿಪ್ಪಾಣಿಯ ಅರ್ಹ ಫಲಾನುಭವಿಗಳಿಗೆ ನಾಳೆ ಲಕ್ಕಿ ಡ್ರಾ ಮೂಲಕ 800 ಮನೆ ಹಸ್ತಾಂತರ*: *ಶಾಸಕಿ ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿಪ್ಪಾಣಿ-ಪಟ್ಟಣಕುಡಿ ಪ್ರದೇಶದಲ್ಲಿ ‘ಜಿ+2’ (G+2) ಮಾದರಿಯಲ್ಲಿ ನಿರ್ಮಿಸಲಾಗುತ್ತಿರುವ ವಸತಿ ಯೋಜನೆಯ ಮನೆಗಳನ್ನು ಶುಕ್ರವಾರ ವಿತರಣಾ ಆಶ್ರಯ ಸಮಿತಿ ಅಧ್ಯಕ್ಷರಾದ ಶಶಿಕಲಾ ಜೊಲ್ಲೆ ಹಾಗೂ ಸಮಿತಿ ಸದಸ್ಯರು ಲಕ್ಕಿ ಡ್ರಾ ಮೂಲಕ ನಿಪ್ಪಾಣಿ ಛತ್ರಪತಿ ಶಿವಾಜಿ ಮಹಾರಾಜ ಸಾಂಸ್ಕೃತಿಕ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಆಯ್ಕೆ ಮಾಡುವರು.
ಶಶಿಕಲಾ ಜೊಲ್ಲೆ ಅವರ ನಿರಂತರ ಪ್ರಯತ್ನ ಹಾಗೂ ಸತತ ಪರಿಶ್ರಮದಿಂದ ಚಾಲನೆ ದೊರೆತು, ಈಗ ಅಂತಿಮ ಹಂತ ತಲುಪಿದೆ. ಪ್ರತಿಯೊಬ್ಬ ಬಡ ಹಾಗೂ ಅರ್ಹ ಕುಟುಂಬಕ್ಕೂ ಸ್ವಂತ ಮನೆಯ ಹಕ್ಕು ಸಿಗಬೇಕು ಮತ್ತು ಅವರ ಜೀವನ ಸುಖಮಯವಾಗಬೇಕು ಎಂಬುವುದೇ ನನ್ನ ಪ್ರಮುಖ ಉದ್ದೇಶವಾಗಿದೆ.ಈ ಬೃಹತ್ ವಸತಿ ಯೋಜನೆಯಡಿ ಒಟ್ಟು 1,812 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಅದರಲ್ಲಿ ಈಗಾಗಲೇ ಸುಮಾರು 800ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಸ್ವಂತ ಸೂರಿನ ಆಸರೆಯನ್ನು ಕಲ್ಪಿಸುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದರು
ಈ ವಸತಿ ಯೋಜನೆಯಡಿ ನಿಗದಿತ ನಾಲ್ಕು ಕಂತುಗಳನ್ನು ಪಾವತಿಸಿದ ಅರ್ಜಿದಾರರ ಅರ್ಹತಾ ಪರಿಶೀಲನೆಯನ್ನು ಆಶ್ರಯ ಸಮಿತಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಸಂಬಂಧಪಟ್ಟ ಅರ್ಜಿದಾರರ ಅಗತ್ಯ ದಾಖಲೆಗಳು ಹಾಗೂ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಪರಿಶೀಲನೆ ನಡೆಸಿ,ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ನಮ್ಮ ನಿರಂತರ ಪ್ರಯತ್ನದ ಫಲವಾಗಿ, ಪ್ರಥಮ ಹಂತದಲ್ಲಿ ಅರ್ಹತೆ ಪಡೆದ 800 ಫಲಾನುಭವಿಗಳಿಗೆ ಲಕ್ಕಿ ಡ್ರಾ ಮೂಲಕ ಮನೆಗಳನ್ನು ಹಸ್ತಾಂತರಿಸಲಾಗುವುದು. ಸಾಮಾನ್ಯ ಕುಟುಂಬಗಳ ಸ್ವಂತ ಮನೆಯ ಕನಸನ್ನು ನನಸು ಮಾಡುವುದೇ ನನ್ನ ಮೊದಲ ಆದ್ಯತೆಯಾಗಿದ್ದು, ಆ ಕನಸು ನನಸಾಗುತ್ತಿದೆ ಎಂದು ಹೇಳಿದರು.




