Belagavi NewsBelgaum NewsKannada NewsKarnataka News

*ಕೆಎಲ್‌ಇ ಕಟ್ಟಿದ ಸಪ್ತಋಷಿಗಳು*

13 ನವ್ಹೆಂಬರ್‌ 2026 ಕೆಎಲ್‌ಇ ಸಂಸ್ಥೆಯ 111ನೇ ಸಂಸ್ಥಾಪನಾ ದಿನಾಚರಣೆ ತನ್ನಿಮಿತ್ತ ಲೇಖನ

ಪ್ರಾ. ಬಿ.ಎಸ್.ಗವಿಮಠ (ನಿವೃತ್ತ -ಆಜೀವ ಸದಸ್ಯರು, ಕೆಎಲ್‍ಇ ಸಂಸ್ಥೆ)

ಏಳು ಜನ ಯುವಕರು ಉತ್ತರ ಕರ್ನಾಟಕ ಅಂದರೆ ಅಂದಿನ ಮುಂಬೈ ಕರ್ನಾಟಕದ ಜಿಲ್ಲೆಗಳಿಂದ ಪುಣೆಗೆ ಹೋಗಿ ಸ್ನಾತಕೋತ್ತರ ಪದವೀಧರರಾಗಿ ಮರಳಿ ಬಂದಾಗ 22, 23, 24ರ ತರುಣರಾಗಿದ್ದರು. 1914ರಲ್ಲಿ ಅವರು ಬೆಳಗಾವಿ ಕಲ್ಮಠದಲ್ಲಿ  ಸಭೆ ಮಾಡಿ ಬೆಳಗಾವಿಯಲ್ಲಿಯೇ ಡೆಕ್ಕನ್ ಎಜ್ಯುಕೇಶನ್ ಸೊಸೈಟಿ ಮಾದರಿಯ ಒಂದು ಶಿಕ್ಷಣ ಸಂಸ್ಥೆ ಸ್ಥಾಪಿಸಲು ನಿರ್ಧರಿಸಿದರು. ಅವರಿಗೆ ಸರ್ವ ರೀತಿಯಿಂದಲೂ ಪ್ರೋತ್ಸಾಹಿಸಿದವರು ರಾವ್ ಬಹದ್ದೂರ್ ಅರಟಾಳ ರುದ್ರಗೌಡರು. ಅವರು ನೀಡಿದ ಆರ್ಥಿಕ ಸಹಾಯದಿಂದ 1916 ರಲ್ಲಿ ಬೆಳಗಾವಿಯ ಕೋಟೆಯಲ್ಲಿ ಗಿಲಗಂಚಿ ಅರಟಾಳ ಆಂಗ್ಲೋ ವ್ಹರ್ನಾಕ್ಯುಲರ ಶಾಲೆ ಪ್ರಾರಂಭಿಸಿದರು. 1917ರಲ್ಲಿ ಸಂಸ್ಥೆಯನ್ನು ಸರಕಾರದಲ್ಲಿ ನೋಂದಾಯಿಸಿದರು. ಹತ್ತು ಜನರ ಆಡಳಿತ ಮಂಡಳಿಯಲ್ಲಿ ರಾ. ಬ. ಅರಟಾಳ ರುದ್ರಗೌಡರು ಅಧ್ಯಕ್ಷರಾಗಿ, ರಾ.ಬ.ವಿ.ಜಿ.ನಾಯಕ ಚಚಡಿ  ದೇಸಾಯಿ ಉಪಾಧ್ಯಕ್ಷರಾಗಿ,  ರಾ.ಬ.ವೈಜಪ್ಪ ಅನಿಗೋಳರವರು  ಹಾಗೂ ಲಿಂಗಾಯತ ಸಮಾಜದ ಅತ್ಯಂತ ಮಾನ್ಯತೆ ಪಡೆದ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಿದರು.

ಅಂದು ಅವರು ನೆಟ್ಟ ಸಸಿ ಇಂದು ಬೃಹದಾಕಾರವಾಗಿ, 320 ಶಾಖೆಗಳಲ್ಲಿ ಟಿಸಿಲೊಡೆದು ಇಡೀ ವಿಶ್ವದ ತುಂಬಾ ಪ್ರಸಿದ್ಧಿ ಪಡೆದಿದೆ.

ಆ ಏಳು ಜನ ಶಿಕ್ಷಕರಾದ  ಪಂಡಿತಪ್ಪ ಚಿಕ್ಕೋಡಿ (ಬೆಳಗಾವಿ), ಎಂ. ಆರ್. ಸಾಖರೆ (ಬೆಳಗಾವಿ), ಎಸ್. ಎಸ್. ಬಸವನಾಳ (ಧಾರವಾಡ), ಬಿ.ಬಿ. ಮಮದಾಪುರ (ಗೋಕಾಕ), ಎಚ್.ಎಫ್. ಕಟ್ಟಿಮನಿ (ಹುಬ್ಬಳ್ಳಿ), ಬಿ.ಎಸ್. ಹಂಚಿನಾಳ (ಹುಬ್ಬಳ್ಳಿ), ಸರ್ದಾರ್ ವೀರನಗೌಡ ಪಾಟೀಲ (ಹುಬ್ಬಳ್ಳಿ). ಇವರು ಸಂಸ್ಥೆಯ ಆಜೀವ ಸದಸ್ಯರಾದರು. ಸಂಸ್ಥೆಯ ಸಮಸ್ತ ಆಗುಹೋಗುಗಳಿಗೆ ತಾವೇ ಹೊಣೆಹೊತ್ತು ನಿಸ್ವಾರ್ಥಸೇವೆ ನೀಡಿದರು. ಸರ್ಕಾರದಲ್ಲಿ ಉನ್ನತ ಹುದ್ದೆಗಳು ಸಹಜವಾಗಿ ಲಭಿಸುತ್ತಿದ್ದ ಕಾಲದಲ್ಲಿ ಅವುಗಳಿಗೆ ಆಸೆ ಪಡದೆ ಫಲಾಪೇಕ್ಷೆ ಇಲ್ಲದೆ ವಿದ್ಯಾದಾನ ಮಾಡಿದ ಪುಣ್ಯಾತ್ಮರು. ಈ ಏಳು ಜನ ಶಿಕ್ಷಕರೇ ಸಂಸ್ಥೆಯ ಆಜೀವ ಸದಸ್ಯರಾಗಿದ್ದರು. ಆಜೀವ ಸದಸ್ಯರ ಮಂಡಳಿಗೆ ‘ಬೋರ್ಡ್ ಆಫ್ ಲೈಫ್ ಮೆಂಬರ್ಸ್’ ಎನ್ನುತ್ತಿದ್ದರು. ಇವರೇ ಸಂಸ್ಥೆಯ ಎಲ್ಲ ಆಗುಹೋಗುಗಳಿಗೆ ಜವಾಬ್ದಾರರಾಗಿದ್ದರು. ಇವರು ಪ್ರಾತಃಸ್ಮರಣೀಯರಾದ ಮಹಾದಾನಿಗಳೂ ಆಗಿದ್ದ ಸಿರಸಂಗಿ ಲಿಂಗರಾಜರನ್ನು, ರಾಜಾ ಲಖಮಗೌಡರನ್ನು ಮತ್ತು ಬಿ.ವ್ಹಿ.ಭೂಮರಡ್ಡಿಯವರನ್ನು ಹಾಗೂ ಸಾವಿರಾರು ದಾನಿಗಳನ್ನು ಸಂಪರ್ಕಿಸಿ  ಸಂಸ್ಥೆಗಾಗಿ ಅಪಾರನಿಧಿ ಸಂಗ್ರಹಿಸಿದರು.

1916 ರಲ್ಲಿ ಹೈಸ್ಕೂಲ್ ಪ್ರಾರಂಭಿಸಿದ ಇವರು 1933ರಲ್ಲಿ ಲಿಂಗರಾಜ ಕಾಲೇಜು ಪ್ರಾರಂಭಿಸಿದರು. ಇದು ಮುಂಬೈ ಕರ್ನಾಟಕದ ಮೊಟ್ಟಮೊದಲ ಖಾಸಗಿ ಪದವಿ ಕಾಲೇಜು ಆಗಿತ್ತು.

 ಬೆಳಗಾವಿಯಲ್ಲಿ ಶಾಲೆ ಕಾಲೇಜು ಸ್ಥಾಪಿಸಿ, ಜನಸಾಮಾನ್ಯರಿಗೆ ವಿದ್ಯೆ ನೀಡಿ ಕನ್ನಡಪ್ರಜ್ಞೆ ಹುಟ್ಟು ಹಾಕಿದರು. ಸಂಸ್ಥೆಗೆ ಅಖಂಡ ಕರ್ನಾಟಕದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಕರ್ನಾಟಕ ಲಿಬರಲ್ ಎಜ್ಯುಕೇಶನ್ ಸೊಸೈಟಿ ಎಂದು ನಾಮಕರಣ ಮಾಡಿದರು. ಆಗ ಇನ್ನೂ ಕರ್ನಾಟಕ ರಾಜ್ಯ ಉದಯವಾಗಿರಲಿಲ್ಲ. ಆದರೆ ಕರ್ನಾಟಕ ರಾಜ್ಯದ ಗುರಿ ಅವರದಾಗಿತ್ತು. 1928ರ ವೇಳೆಗೆ ಈ ಏಳು ಜನ ಶಿಕ್ಷಕರು ಬೆಳಗಾವಿ ಕಾಳಿ ಅಂಬ್ರಾಯಿ ಪ್ರದೇಶದಲ್ಲಿ 17 ಎಕರೆ 8 ಗುಂಟೆ ನಿವೇಶನ ಖರೀದಿಸಿದರು. 80,000 ವೆಚ್ಚದಲ್ಲಿ ಲಿಂಗರಾಜ ಕಾಲೇಜ್ ಬಿಲ್ಡಿಂಗ್ ನಿರ್ಮಿಸಿದರು.  ಶಿರಸಂಗಿ ಲಿಂಗರಾಜರ ಟ್ರಸ್ಟಿನ ನೆರವಿನಿಂದ ಲಿಂಗರಾಜ ಹಾಸ್ಟೆಲ್ ಬಿಲ್ಡಿಂಗ್ ನಿರ್ಮಿಸಿದರು. ವಂಟಮುರಿ ಸಂಸ್ಥಾನದ ದೊರೆ ರಾಜಾ ಲಖಮಗೌಡರಿಂದ ದಾನ ಪಡೆದು ರಾಜಾ ಲಖಮಗೌಡ ಸೈನ್ಸ್ ಕಾಲೇಜ ಕಟ್ಟಡಗಳ ಜೊತೆಗೆ ಲಿಂಗರಾಜ ಬೆಬ್ರೋನ್ ಹಾಸ್ಟೆಲ್ ಕಟ್ಟಡಗಳು ನಿರ್ಮಾಣವಾದವು. ಅಂದಿನ ಮುಂಬೈ ಕರ್ನಾಟಕದ ಬಡಹುಡುಗರಿಗೆ ಉನ್ನತ ಶಿಕ್ಷಣ ಸುಲಭವಾಗಿ ದೊರೆಯಬೇಕೆಂಬ ಉದ್ದೇಶದಿಂದ ನಾಗನೂರು ರುದ್ರಾಕ್ಷಿಮಠದ ಲಿಂ ಶಿವಬಸವಸ್ವಾಮಿಗಳು 1932ರಲ್ಲಿ ಉಚಿತ ಪ್ರಸಾದ ನಿಲಯ ಪ್ರಾರಂಭಿಸಿದರು.  ನಾಗನೂರು ಸ್ವಾಮೀಜಿ ವಿದ್ಯಾರ್ಥಿ ಪ್ರಸಾದ ನಿಲಯದಲ್ಲಿ ಆಶ್ರಯ ಪಡೆದು  ಪ್ರಸಾದ ಸ್ವೀಕರಿಸಿ ಲಿಂಗರಾಜ ಕಾಲೇಜಿನಲ್ಲಿ ಶಿರಸಂಗಿ ಪ್ರೀಶಿಫ್‌ ಪಡೆದು ಪದವಿ ಶಿಕ್ಷಣ ಪಡೆಯ ತೊಡಗಿದಾಗ ಲಿಂಗಾಯತ ಸಮಾಜ ಜಾಗೃತಗೊಂಡು ಸುಶಿಕ್ಷಿತವಾಗ ತೊಡಗಿತು. ಶಿಕ್ಷಣದಿಂದಲೇ ತಮ್ಮ ಉದ್ಧಾರವೆಂಬುದನ್ನು ಅರಿತುಕೊಂಡಿತು. ಅನಾಥವಾಗಿದ್ದ ಕನ್ನಡ ಭಾಷೆಗೆ ಜೀವರಸ ತುಂಬುವ ಕೆಲಸ ಮಾಡಿದ ‘ಸಪ್ತಋಷಿಗಳು’ ಋಷಿಗಳಂತೆ ಜೀವನ ಸವೆಸಿದರು. ಪ್ರಾರಂಭದಲ್ಲಿ ಎಲ್ಲರೂ ಸೇರಿ ತಿಂಗಳಿಗೆ 50 ರೂ. ನಂತರ 100 ರೂ. ವೇತನ ಪಡೆದರು. ಒಂದು ಹಂತದಲ್ಲಿ ತಿಂಗಳಿಗೆ ತಲಾ 35 ರೂ.ಗಳ ವೇತನ ಪಡೆದ ದಾಖಲೆಗಳೂ ಇವೆ. ಈ ಯುವಕರು ಪ್ರಾರಂಭದಲ್ಲಿ ಪಂಡಿತಪ್ಪ ಚಿಕ್ಕೋಡಿಯವರ ಮಾವ ಭೋಜಣ್ಣವರ ಮನೆ ಕಟ್ಟಡದಲ್ಲಿ ಬಾಡಿಗೆಗೆ ವಾಸವಾಗಿದ್ದರು (ಖಡೇಬಜಾರ್). ಇವರಿಗೆ ದಿನವೂ ಅಡುಗೆ ಮಾಡಿ ಊಟ ಬಡಿಸುವ ಕಾಯಕ ಪಂಡಿತಪ್ಪ ಚಿಕ್ಕೋಡಿಯವರ ಧರ್ಮಪತ್ನಿ ಗೌರಮ್ಮನವರದಾಗಿತ್ತು. ಮುಂದೆ ಕಿಲ್ಲೆಯೊಳಗಿನ ಎರಡು ಬಂಗಲೆಗಳನ್ನ ಬಾಡಿಗೆಗೆ ಪಡೆದು ‘ಸುಖನಿವಾಸ’ ಎಂದು ಹೆಸರಿಟ್ಟು ಅಲ್ಲಿಯೇ ಇರಹತ್ತಿದರು.

 1924 ರಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಇವರು ಶ್ರೀಮತಿ ಸರೋಜಿನಿ ನಾಯ್ಡು (ಭಾರತದ ಸಂಗೀತ ಕೋಗಿಲೆ) ಅವರನ್ನು ಶಾಲೆಗೆ ಆಮಂತ್ರಿಸಿದರು. ಸರ್ದಾರ್ ವೀರನಗೌಡರು ಕಾಂಗ್ರೆಸ್ಸಿನ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದರು. ಇವರು 1931 ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿಕೊಂಡಾಗ ಕೆ. ಎಲ್. ಇ. ಸಂಸ್ಥೆಗೆ ರಾಜೀನಾಮೆ ನೀಡಿ ಹುಬ್ಬಳ್ಳಿಗೆ ಹೋದರು.

1918ರಲ್ಲಿ ಪಂಡಿತಪ್ಪ ಚಿಕ್ಕೋಡಿ ಅವರು ರಾಜೀನಾಮೆ ನೀಡಿ ಜಿಲ್ಲೆಯ ರಾಜಕಾರಣ ಪ್ರವೇಶ ಪಡೆದರು. ಉಳಿದ ಐದು ಜನರು ಕೊನೆಯವರೆಗೆ ಕೆಎಲ್‍ಇ ಸಂಸ್ಥೆಗಾಗಿ ನಿಸ್ವಾರ್ಥ ಸೇವೆ ನೀಡಿ ಅಮರರಾಗಿದ್ದಾರೆ. ಇವರೆಲ್ಲರ ಸ್ವಾರ್ಥ ತ್ಯಾಗ ಸಮಾಜದ ಬಗೆಗಿನ ಪ್ರೀತಿ ಅಭಿಮಾನ ಕಳಕಳಿಯಿಂದಾಗಿ ಕೆ ಎಲ್ ಇ ಸಂಸ್ಥೆ ಭದ್ರವಾದ ಬುನಾದಿ ಪಡೆಯಿತು. ಸಮಾಜವು ಶೈಕ್ಷಣಿಕವಾಗಿ ಜಾಗೃತಗೊಂಡು ರಾಜಕೀಯ ಜಾಗೃತಿಗೆ ದಾರಿ ಮಾಡಿಕೊಟ್ಟಿತು. ವೀರಶೈವ ಲಿಂಗಾಯತ ಮಠಾಧೀಶರ ಅನ್ನದಾಸೋಹ, ಕೆಎಲ್‍ಇ ಮತ್ತು ಇತರ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಣ ದಾಸೋಹಗಳು ರಾಜಕೀಯ ಜಾಗೃತಿಗೆ ಕಾರಣವಾಗಿ ಕರ್ನಾಟಕದ ರಾಜ್ಯೋದಯಕ್ಕೆ ಕಾರಣವೆನಿಸಿತು. ನೂತನ ರಾಜ್ಯದ ಪ್ರಥಮ ಮುಖ್ಯಮಂತ್ರಿಗಳಾಗಿ ಎಸ್.ನಿಜಲಿಂಗಪ್ಪನವರು ಅಧಿಕಾರವಹಿಸಿಕೊಂಡು ಲಿಂಗಾಯತರು ಪ್ರಮುಖವಾಹಿನಿಯಲ್ಲಿ ಸೇರಿಕೊಂಡಂತಾಯಿತು. ಸಪ್ತರ್ಷಿಗಳ ತ್ಯಾಗ ಮತ್ತು ಬಲಿದಾನಗಳ ಭದ್ರಬುನಾದಿ ದೊರೆಯಿತು. ನಂತರದಲ್ಲಿ ಅಧಿಕಾರಕ್ಕೆ ಬಂದವರೆಲ್ಲರ ದೂರದೃಷ್ಟಿ, ನಿರಂತರ ಪರಿಶ್ರಮದಿಂದ ಸಂಸ್ಥೆ ಜಗದಗಲ ಮುಗಿಲಗಲಕ್ಕೆ ಬೆಳೆಯಿತು.

ನಿಮ್ಮ ನೆನೆದಾಗಲೇ ಉದಯ; ನಿಮ್ಮ ಮರೆವೇ ಅಸ್ತಮಾನ!

ತ್ಯಾಗ, ಸೇವೆ, ಸ್ವಾಭಿಮಾನ ಮತ್ತು ಶಿಕ್ಷಣದ ಮೂಲಕ ಶತಮಾನಕ್ಕೂ ಮೀರಿದ ಜ್ಞಾನಯಾತ್ರೆ

ಪ್ರಾ. ಬಿ.ಎಸ್. ಗವಿಮಠ

ಬೆಳಗಾವಿ: ಕನ್ನಡದ ನೆಲದಲ್ಲಿಯೇ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಶಿಕ್ಷಣ ಅನಾಥವಾಗಿದ್ದ ಕಾಲವದು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದ ಉತ್ತರ ಕರ್ನಾಟಕದ ಜನಸಮುದಾಯಕ್ಕೆ ಶಿಕ್ಷಣದ ಬೆಳಕು ನೀಡುವ ಮಹತ್ತರ ಸಂಕಲ್ಪದೊಂದಿಗೆ ಏಳು ಜನ ಯುವ ಶಿಕ್ಷಕರು ಕೈಗೊಂಡ ಸಾಹಸ ಇಂದು ಜಗತ್ತಿನ ಶೈಕ್ಷಣಿಕ ಭೂಪಟದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದೆ. ಅದುವೇ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ (ಕೆಎಲ್‌ಇ).

ನೂರು ವರ್ಷಗಳಿಗೂ ಮೀರಿದ ಈ ಜ್ಞಾನಯಾತ್ರೆ ಕೇವಲ ಒಂದು ಶಿಕ್ಷಣ ಸಂಸ್ಥೆಯ ಬೆಳವಣಿಗೆಯ ಕಥೆಯಲ್ಲ. ಇದು ಏಳು ಜನ ಶಿಕ್ಷಕರ ಅಪ್ರತಿಮ ತ್ಯಾಗ, ಸಮಾಜದ ಮೇಲಿನ ಕಳಕಳಿ, ಕನ್ನಡದ ಬಗೆಗಿನ ಅಭಿಮಾನ, ದಾನಿಗಳ ಔದಾರ್ಯ ಹಾಗೂ ಶಿಕ್ಷಣದ ಮೂಲಕ ಸಮಾಜ ಪರಿವರ್ತನೆ ಮಾಡುವ ದೂರದೃಷ್ಟಿಯ ಮಹಾಗಾಥೆ.

1916ರಲ್ಲಿ ಬೆಳಗಾವಿಯಲ್ಲಿ ಬಿತ್ತಲ್ಪಟ್ಟ ಜ್ಞಾನದ ಬೀಜ ಇಂದು 320ಕ್ಕೂ ಅಧಿಕ ಅಂಗಸಂಸ್ಥೆಗಳು, 18 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಮತ್ತು 1.40 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿರುವ ಬೃಹತ್ ಶೈಕ್ಷಣಿಕ ಸಾಮ್ರಾಜ್ಯವಾಗಿ ಬೆಳೆದು ನಿಂತಿದೆ. ಈ ಸಾಧನೆಯ ಹಿಂದೆ ಅಡಗಿರುವ ಇತಿಹಾಸವನ್ನು ನೆನಪಿಸಿಕೊಳ್ಳುವುದು ಎಂದರೆ ಸಂಸ್ಥಾಪಕರ ತ್ಯಾಗಕ್ಕೆ ಗೌರವ ಸಲ್ಲಿಸುವುದಷ್ಟೇ ಅಲ್ಲ, ಮುಂದಿನ ಪೀಳಿಗೆಗೆ ಅವರ ಆದರ್ಶಗಳನ್ನು ಪರಿಚಯಿಸುವುದೂ ಆಗಿದೆ.

ಏಳು ಶಿಕ್ಷಕರು… ಒಂದು ಮಹಾಸಂಕಲ್ಪ!

ಕೆಎಲ್‌ಇ ಸಂಸ್ಥೆಯ ಸ್ಥಾಪನೆಯ ಹಿಂದೆ ದೂರದೃಷ್ಟಿಯುಳ್ಳ ಹಲವು ಮಹನೀಯರ ಪರಿಶ್ರಮವಿದೆ. ಅದರಲ್ಲೂ ಆಗಿನ ಬೆಳಗಾವಿ ಜಿಲ್ಲೆಯ ಡೆಪ್ಯುಟಿ ಕಲೆಕ್ಟರ್ ರಾವಬಹದ್ದೂರ ಅರಟಾಳ ರುದ್ರಗೌಡರು ಈ ಮಹತ್ಕಾರ್ಯಕ್ಕೆ ಪ್ರೇರಣಾಶಕ್ತಿಯಾಗಿ ನಿಂತರು. ಶ್ರೀಮಂತ ವಿ.ಜಿ. ನಾಯಿಕ ಬಹದ್ದೂರ ದೇಸಾಯಿ (ಚಚಡಿ) ಹಾಗೂ ಬೆಳಗಾವಿಯ ಶ್ರೀಮಂತ ವೈಜಪ್ಪ ಆನಿಗೋಳ ಅವರು ಆರ್ಥಿಕವಾಗಿ ಬೆಂಬಲ ನೀಡಿದರು.

ಕೆಎಲ್‌ಇ ಸಂಸ್ಥೆಯ ಸ್ಥಾಪನೆಗೆ ಮುಂದಾದ ಪಂಡಿತಪ್ಪ ಚಿಕ್ಕೋಡಿ ಅವರು, ಬೆಳಗಾವಿಯ ಅತ್ಯಂತ ಹಳೆಯ ಪತ್ರಿಕೆಗಳಲ್ಲಿ ಒಂದಾದ ‘ಬೆಳಗಾಂವ ಸಮಾಚಾರ’ದಲ್ಲಿ ಶಿಕ್ಷಕರ ನೇಮಕಾತಿಗಾಗಿ ಜಾಹೀರಾತು ಪ್ರಕಟಿಸಿದರು. ಅರ್ಜಿದಾರರ ಸಂದರ್ಶನಕ್ಕಾಗಿ ಬೆಳಗಾವಿಯ ರವಿವಾರ ಪೇಟೆಯ ಕಲ್ಮಠದಲ್ಲಿ ಸಭೆ ಕರೆಯಲಾಯಿತು.

ಹೀಗೆ ಒಂದೆಡೆ ಸೇರಿದ್ದ ಏಳು ಜನ ಶಿಕ್ಷಕರೇ ಕೆಎಲ್‌ಇ ಸಂಸ್ಥೆಯ ಸಂಸ್ಥಾಪಕ ಸಪ್ತರ್ಷಿಗಳು.

ಪಂಡಿತಪ್ಪ ಚಿಕ್ಕೋಡಿ, ಪ್ರೊ. ಎಂ.ಆರ್. ಸಾಖರೆ, ಬಿ.ಬಿ. ಮಮದಾಪುರ, ಪ್ರೊ. ಶಿ.ಶಿ. ಬಸವನಾಳ, ಎಚ್.ಎಫ್. ಕಟ್ಟಿಮನಿ, ಬಿ.ಎಸ್. ಹಂಚಿನಾಳ ಹಾಗೂ ಸರದಾರ ವೀರನಗೌಡ ಪಾಟೀಲರು ಈ ಸಪ್ತರ್ಷಿಗಳು.

ಇವರೆಲ್ಲರೂ ಕಷ್ಟಪಟ್ಟು ಶಿಕ್ಷಣ ಪಡೆದು ಪದವೀಧರರಾಗಿದ್ದವರು. ಪುಣೆ, ಮುಂಬಯಿಗಳಲ್ಲಿ ವೀರಶೈವ ಆಶ್ರಮಗಳಲ್ಲಿ ನೆಲೆಸಿ, ವಿದ್ಯಾರ್ಥಿಗಳಿಗೆ ಪಾಠ ಹೇಳಿ ಸಂಪಾದಿಸಿದ ಹಣದಿಂದ ಕಾಲೇಜು ಶುಲ್ಕ ಪಾವತಿಸಿ ಬಿ.ಎ., ಬಿ.ಎಸ್‌ಸಿ., ಎಂ.ಎ., ಎಲ್‌ಎಲ್‌ಬಿ ಸೇರಿದಂತೆ ವಿವಿಧ ಪದವಿಗಳನ್ನು ಪಡೆದಿದ್ದರು. ಇವರಲ್ಲಿ ಬಹುತೇಕರು ಅರಟಾಳ ರುದ್ರಗೌಡರು ಮತ್ತು ಗಿಲಗಂಚಿ ಗುರುಸಿದ್ದಪ್ಪನವರು ಸ್ಥಾಪಿಸಿದ್ದ ‘ಲಿಂಗಾಯತ ಫಂಡ್’ನಿಂದ ವಿದ್ಯಾರ್ಥಿವೇತನ ಪಡೆದು ಉನ್ನತ ಶಿಕ್ಷಣ ಪಡೆದವರಾಗಿದ್ದರು.

ತಮ್ಮ ಶಿಕ್ಷಣಕ್ಕೆ ಸಮಾಜ ನೀಡಿದ ನೆರವಿನ ಋಣವನ್ನು ತೀರಿಸಬೇಕು ಎಂಬ ಭಾವನೆ ಅವರಲ್ಲಿ ಬಲವಾಗಿತ್ತು. ಬ್ರಿಟಿಷ್ ಆಡಳಿತದಲ್ಲಿ ಸುಲಭವಾಗಿ ದೊರೆಯಬಹುದಾಗಿದ್ದ ಉನ್ನತ ಹುದ್ದೆಗಳ ಆಕರ್ಷಣೆಯನ್ನು ಬದಿಗಿಟ್ಟು, ಖಚಿತ ವೇತನದ ಭರವಸೆಯೂ ಇಲ್ಲದೆ ಶಿಕ್ಷಕರಾಗಿ ದುಡಿಯಲು ಮುಂದಾದರು. ಬೆಳಗಾವಿಯಲ್ಲಿಯೇ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಸಂಕಲ್ಪ ಮಾಡಿದರು.

ಮನೆಮನೆಗೆ ತೆರಳಿ ದೇಣಿಗೆ ಸಂಗ್ರಹಿಸಿದರು. ತಮ್ಮ ವೈಯಕ್ತಿಕ ಬದುಕಿನ ಸುಖ-ಸೌಲಭ್ಯಗಳನ್ನು ತ್ಯಜಿಸಿ, ಸಂಸ್ಥೆಯ ಬೆಳವಣಿಗೆಯನ್ನೇ ಬದುಕಿನ ಗುರಿಯನ್ನಾಗಿಸಿಕೊಂಡರು.

ಅಲ್ಪ ವೇತನ… ಅಪಾರ ತ್ಯಾಗ!

ಸಂಸ್ಥೆಯ ಆರಂಭದ ದಿನಗಳಲ್ಲಿ ಈ ಏಳು ಜನ ಶಿಕ್ಷಕರು ಒಂದೇ ಕಡೆ ವಾಸಿಸುತ್ತಿದ್ದರು. ಬೆಳಗಾವಿಯ ಖಡೇಬಜಾರ್‌ನ ಭೋಜನ್ನವರ ಮನೆಯಲ್ಲಿ ನೆಲೆಸಿ, ಸಾಮೂಹಿಕವಾಗಿ ಅಡುಗೆ ಮಾಡಿಕೊಂಡು ಸರಳ ಜೀವನ ನಡೆಸುತ್ತಿದ್ದರು.

1917ರ ಜೂನ್‌ನಿಂದ ಕೆಲಕಾಲ ಎಲ್ಲರೂ ಸೇರಿ ತಿಂಗಳಿಗೆ 150 ರೂ. ವೇತನ ಪಡೆದರು. 1918ರಿಂದ ತಲಾ 35 ರೂ., ನಂತರ ತಲಾ 50 ರೂ. ವೇತನಕ್ಕೆ ಕೆಲಸ ಮಾಡಿದರು. ಇಂದಿನ ತಲೆಮಾರಿಗೆ ಕಲ್ಪಿಸಿಕೊಳ್ಳಲೂ ಕಷ್ಟವಾಗುವ ಇಂತಹ ತ್ಯಾಗ ಮತ್ತು ಸಮರ್ಪಣಾಭಾವವೇ ಕೆಎಲ್‌ಇ ಸಂಸ್ಥೆಯ ಬುನಾದಿಯಾಯಿತು.

ಈ ಏಳು ಜನರಲ್ಲಿ ಎಚ್.ಎಫ್. ಕಟ್ಟಿಮನಿ ಮತ್ತು ಬಿ.ಬಿ. ಮಮದಾಪುರ ಅವರು ವಿಧಾನ ಪರಿಷತ್ ಸದಸ್ಯರಾದರು. ಪಂಡಿತಪ್ಪ ಚಿಕ್ಕೋಡಿ ಅವರು ಜಿಲ್ಲಾ ಲೋಕಲ್ ಬೋರ್ಡ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಸಮಾಜವು ಅವರ ಸೇವೆಯನ್ನು ಗುರುತಿಸಿ ಗೌರವಿಸಿತು. ಅವರು ಕೇವಲ ಶಿಕ್ಷಕರಾಗಿ ಉಳಿಯಲಿಲ್ಲ; ಕನ್ನಡದ ಕಟ್ಟಾಳುಗಳಾಗಿ, ಸಮಾಜದ ದಾರಿದೀಪಗಳಾಗಿ, ಶಿಕ್ಷಣ ಕ್ರಾಂತಿಯ ಹರಿಕಾರರಾಗಿ ಇತಿಹಾಸದಲ್ಲಿ ನೆಲೆಸಿದರು.

ಅರಟಾಳ ರುದ್ರಗೌಡರ ದೂರದೃಷ್ಟಿ ಮತ್ತು ದಾನಿಗಳ ಔದಾರ್ಯ

ಕೆಎಲ್‌ಇ ಸಂಸ್ಥೆಯ ಸ್ಥಾಪನೆಗೆ ಅರಟಾಳ ರುದ್ರಗೌಡರ ಕೊಡುಗೆ ಅನನ್ಯ. 1883ರಲ್ಲಿ ಅವರು ಲಿಂಗಾಯತ ಫಂಡ್ ಸ್ಥಾಪಿಸಿ, ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ನೀಡುವ ವ್ಯವಸ್ಥೆ ಮಾಡಿದ್ದರು. ಧಾರವಾಡದಲ್ಲಿ ಸರ್ಕಾರಿ ಕಾಲೇಜು ಆರಂಭಿಸಲು ಲಿಂಗಾಯತ ಸಮಾಜದ ವತಿಯಿಂದ 90 ಸಾವಿರ ರೂ.ಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡಿದ್ದರು.

ಈ ಹಣವನ್ನು ಸುರಕ್ಷಿತವಾಗಿ ಬ್ಯಾಂಕಿನಲ್ಲಿ ಠೇವಣಿ ಇಟ್ಟು, ಅದರಿಂದ ಬರುವ ಬಡ್ಡಿಯ ಹಣದ ಜೊತೆಗೆ ತಮ್ಮ ವೈಯಕ್ತಿಕ 400 ರೂ.ಗಳ ನೆರವನ್ನು ಸೇರಿಸಿ ಏಳು ಜನ ಶಿಕ್ಷಕರ ಶೈಕ್ಷಣಿಕ ಪ್ರಯತ್ನಕ್ಕೆ ಬೆಂಬಲ ನೀಡಿದರು.

ಶಾಲೆ ಆರಂಭಿಸುವಂತೆ ಸಪ್ತರ್ಷಿಗಳು ನಿರಂತರವಾಗಿ ಒತ್ತಾಯಿಸಿದಾಗ, ಅವರ ತಾಳ್ಮೆ, ಛಲ ಮತ್ತು ಮನೋಬಲವನ್ನು ಪರೀಕ್ಷಿಸಿದ ಅರಟಾಳ ರುದ್ರಗೌಡರು, 2,727 ರೂ. 4 ಆಣೆ ಹಾಗೂ ವೈಯಕ್ತಿಕವಾಗಿ 400 ರೂ.ಗಳ ನೆರವು ನೀಡಿದರು. ಈ ಬೆಂಬಲವೇ ಶಿಕ್ಷಣ ಕ್ರಾಂತಿಯ ಆರಂಭಕ್ಕೆ ಮಹತ್ವದ ಶಕ್ತಿಯಾಯಿತು.

ವಂಟಮುರಿ ಸಂಸ್ಥಾನದ ಲಖಮಗೌಡರು ಮೊದಲ ದಾನವಾಗಿ 20 ಸಾವಿರ ರೂ. ನೀಡಿದರು. ಸರ್ ಸಿದ್ದಪ್ಪ ಕಂಬಳಿಯವರು ಮುಂಬಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮ್ಮ ಪ್ರಭಾವ ಬಳಸಿ ಲಿಂಗರಾಜ ಕಾಲೇಜಿಗೆ ಅನುಮತಿ ದೊರಕಿಸಿಕೊಟ್ಟರು. ಸಿರಸಂಗಿ ಲಿಂಗರಾಜ ಟ್ರಸ್ಟ್ 50 ಸಾವಿರ ರೂ.ಗಳ ದೇಣಿಗೆ ನೀಡಿತು. ಹೀಗೆ ಹಲವು ಮಹನೀಯರ ಸಹಕಾರದಿಂದ ಕೆಎಲ್‌ಇ ಸಂಸ್ಥೆಯ ಬೆಳವಣಿಗೆಗೆ ಭದ್ರ ಬುನಾದಿ ನಿರ್ಮಾಣವಾಯಿತು.

ಕೋಟೆಯ ಬಂಗಲೆಯಿಂದ ವಿಶಾಲ ಕ್ಯಾಂಪಸ್‌ವರೆಗೆ

ಕೆಎಲ್‌ಇ ಸಂಸ್ಥಾಪಕ ಸಪ್ತರ್ಷಿಗಳು ಆರಂಭದಲ್ಲಿ ಬೆಳಗಾವಿ ಕೋಟೆಯೊಳಗಿನ ಬಂಗಲೆ ಸಂಖ್ಯೆ 24ನ್ನು ಬಾಡಿಗೆಗೆ ಪಡೆದು ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಿದರು. 1927-28ರ ಸುಮಾರಿಗೆ ಇಂದಿನ ಲಿಂಗರಾಜ ಕಾಲೇಜು ಇರುವ ಕಾಳಿ-ಅಮರಾಯಿ ಪ್ರದೇಶದ 17 ಎಕರೆ ಜಾಗವನ್ನು 30 ಸಾವಿರ ರೂ.ಗಳಿಗೆ ಖರೀದಿಸಿದರು. ನಂತರ ಮತ್ತೆ ಎಂಟು ಎಕರೆ ಜಾಗವನ್ನು ಸೇರಿಸಿಕೊಂಡರು.

1930ರಲ್ಲಿ ಬ್ರಿಟಿಷ್ ವಾಸ್ತುಶೈಲಿಯ ಮಾದರಿಯಲ್ಲಿ ಲಿಂಗರಾಜ ಕಾಲೇಜಿನ ಕಟ್ಟಡ ನಿರ್ಮಾಣಗೊಂಡಿತು. ಅದಕ್ಕಾಗಿ ತಗುಲಿದ ವೆಚ್ಚ ಕೇವಲ 80 ಸಾವಿರ ರೂ.ಗಳು!

ಇಂದು ಆ ಕಟ್ಟಡವು ಕೆಎಲ್‌ಇ ಸಂಸ್ಥೆಯ ಐತಿಹಾಸಿಕ ಪರಂಪರೆಯ ಪ್ರತೀಕವಾಗಿ ನಿಂತಿದೆ.

1916ರಲ್ಲಿ ಗಿಲಗಂಚಿ ಅರಟಾಳರ ಹೆಸರಿನಲ್ಲಿ ಆರಂಭವಾದ ಮೊದಲ ಪ್ರೌಢಶಾಲೆಯು ಸಂಸ್ಥೆಯ ಶೈಕ್ಷಣಿಕ ಪಯಣಕ್ಕೆ ಚಾಲನೆ ನೀಡಿತು. ನಂತರ ಸಿರಸಂಗಿ ಲಿಂಗರಾಜರ ಹೆಸರಿನಲ್ಲಿ ಕಾಲೇಜು ಸ್ಥಾಪನೆಯಾಯಿತು. ಸಂಸ್ಥಾಪಕರು ತಮ್ಮ ಶಾಲೆ, ಕಾಲೇಜುಗಳಿಗೆ ಮಹನೀಯರ ಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಕೃತಜ್ಞತೆ ಮತ್ತು ಗೌರವದ ಸಂಸ್ಕೃತಿಯನ್ನೂ ಬೆಳೆಸಿದರು.

ಶಿಕ್ಷಣದ ಜೊತೆಗೆ ಕನ್ನಡದ ಅಸ್ಮಿತೆಯ ಹೋರಾಟ

ಕೆಎಲ್‌ಇ ಸಂಸ್ಥಾಪಕರ ದೃಷ್ಟಿಕೋನ ಕೇವಲ ಶಾಲೆ-ಕಾಲೇಜುಗಳನ್ನು ಸ್ಥಾಪಿಸುವುದಕ್ಕೆ ಸೀಮಿತವಾಗಿರಲಿಲ್ಲ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಸ್ತಿತ್ವವನ್ನು ಉಳಿಸುವ ಮಹತ್ತರ ಜವಾಬ್ದಾರಿಯನ್ನೂ ಅವರು ಹೊತ್ತುಕೊಂಡಿದ್ದರು.

ಮರಾಠಿ ಭಾಷೆಯ ಪ್ರಾಬಲ್ಯವಿದ್ದ ಬೆಳಗಾವಿಯ ನೆಲದಲ್ಲಿ ಕನ್ನಡದ ನಂದಾದೀಪವನ್ನು ಬೆಳಗಿಸಿದರು. ಕನ್ನಡಿಗರಲ್ಲಿ ಭಾಷಾಭಿಮಾನ ಮತ್ತು ಶೈಕ್ಷಣಿಕ ಜಾಗೃತಿ ಮೂಡಿಸಿದರು. ಅಖಂಡ ಕರ್ನಾಟಕದ ನಿರ್ಮಾಣದ ಆಶಯದೊಂದಿಗೆ ಹೋರಾಟ ನಡೆಸಿದರು.

ಪುಣೆಯಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ಥಾಪಿಸಿದ್ದ ಡೆಕ್ಕನ್ ಎಜುಕೇಶನ್ ಸೊಸೈಟಿಯ ಕಾರ್ಯವೈಖರಿ ಇವರಿಗೆ ಮಾದರಿಯಾಗಿತ್ತು. ಅದರ ಆಡಳಿತ ವ್ಯವಸ್ಥೆಯನ್ನು ಅಧ್ಯಯನ ಮಾಡಿ, ನಿಯಮಾವಳಿಗಳನ್ನು ರೂಪಿಸಿ, 1917ರಲ್ಲಿ ಕೆಎಲ್‌ಇ ಸಂಸ್ಥೆಯನ್ನು ನೋಂದಾಯಿಸಿದರು.

ಸಂಸ್ಥೆಯ ಆಡಳಿತದಲ್ಲಿ ಆಜೀವ ಸದಸ್ಯರಿಗೆ ಪ್ರಮುಖ ಅಧಿಕಾರಗಳನ್ನು ನೀಡುವ ಮೂಲಕ ನಿಯಮಬದ್ಧ ಮತ್ತು ಮೌಲ್ಯಾಧಾರಿತ ಆಡಳಿತ ವ್ಯವಸ್ಥೆಯನ್ನು ರೂಪಿಸಿದರು.

ಸತ್ಯ, ಪ್ರೇಮ, ಸೇವೆ ಮತ್ತು ಸ್ವಾರ್ಥತ್ಯಾಗ ಎಂಬ ನಾಲ್ಕು ಮೌಲ್ಯಗಳೇ ಸಂಸ್ಥೆಯ ಧ್ಯೇಯದ ತಳಹದಿಯಾದವು.

ಮೂರು ಕಾಲಘಟ್ಟಗಳಲ್ಲಿ ಬೆಳೆದ ಜ್ಞಾನಸಾಮ್ರಾಜ್ಯ

ಕೆಎಲ್‌ಇ ಸಂಸ್ಥೆಯ ಬೆಳವಣಿಗೆಯನ್ನು ಪ್ರಮುಖವಾಗಿ ಮೂರು ಕಾಲಘಟ್ಟಗಳಲ್ಲಿ ಗುರುತಿಸಬಹುದು.

ಮೊದಲ ಕಾಲಘಟ್ಟ: 1916ರಿಂದ 1944ರವರೆಗೆ

ಸಂಸ್ಥಾಪಕ ಸಪ್ತರ್ಷಿಗಳು, ಅರಟಾಳ ರುದ್ರಗೌಡರು, ಶ್ರೀಮಂತ ಚಚಡಿ ದೇಸಾಯಿ, ವೈಜಪ್ಪ ಆನಿಗೋಳ, ಸರ್ ಸಿದ್ದಪ್ಪ ಕಂಬಳಿ, ಲಖಮಗೌಡರು ಸೇರಿದಂತೆ ಅನೇಕ ದಾನಿಗಳ ಪರಿಶ್ರಮ ಮತ್ತು ಸಹಕಾರದಿಂದ ಸಂಸ್ಥೆಗೆ ಭದ್ರ ಬುನಾದಿ ಹಾಕಲಾಯಿತು. ಶಾಲೆ, ಕಾಲೇಜು, ಹಾಸ್ಟೆಲ್ ಸೇರಿದಂತೆ ಶೈಕ್ಷಣಿಕ ಸೌಲಭ್ಯಗಳು ಒಂದೊಂದಾಗಿ ರೂಪುಗೊಂಡವು.

ಎರಡನೇ ಕಾಲಘಟ್ಟ: 1945ರಿಂದ 1984ರವರೆಗೆ

ಈ ಅವಧಿಯಲ್ಲಿ ಸಂಸ್ಥೆಯ ಶೈಕ್ಷಣಿಕ ವ್ಯಾಪ್ತಿ ವಿಸ್ತರಿಸಿತು. ವಿಜ್ಞಾನ, ತಾಂತ್ರಿಕ, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ಸಂಸ್ಥೆಗಳು ಆರಂಭಗೊಂಡವು. ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಹೊಸ ಅವಕಾಶಗಳು ತೆರೆದುಕೊಂಡವು.

ಮೂರನೇ ಕಾಲಘಟ್ಟ: 1984ರಿಂದ 2025ರವರೆಗೆ

ಈ ಅವಧಿಯಲ್ಲಿ ಕೆಎಲ್‌ಇ ಸಂಸ್ಥೆ ರಾಷ್ಟ್ರಮಟ್ಟದ ಶೈಕ್ಷಣಿಕ ಮತ್ತು ಆರೋಗ್ಯ ಸೇವಾ ಜಾಲವಾಗಿ ಬೆಳೆಯಿತು. ವೈದ್ಯಕೀಯ ಸೇವೆ, ಸಂಶೋಧನೆ, ತಾಂತ್ರಿಕ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳ ಸ್ಥಾಪನೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿತು.

ಶಿಕ್ಷಣ ಕ್ಷೇತ್ರದಲ್ಲಿ ಮೈಲುಗಲ್ಲುಗಳ ಸಾಧನೆ

ಕೆಎಲ್‌ಇ ಸಂಸ್ಥೆಯ ಬೆಳವಣಿಗೆಯ ಹಾದಿಯಲ್ಲಿ ಹಲವು ಐತಿಹಾಸಿಕ ಮೈಲುಗಲ್ಲುಗಳಿವೆ.

  • 1916: ಗಿಲಗಂಚಿ ಅರಟಾಳ ಎ.ವಿ. ಶಾಲೆಯ ಸ್ಥಾಪನೆ. ಕನ್ನಡದ ನೆಲದಲ್ಲಿ ಶಿಕ್ಷಣದ ಬೆಳಕು ಹರಡುವ ಮಹತ್ವದ ಹೆಜ್ಜೆ.
  • 1933: ಬೆಳಗಾವಿಯಲ್ಲಿ ಲಿಂಗರಾಜ ಕಾಲೇಜಿನ ಸ್ಥಾಪನೆ. ಉತ್ತರ ಕರ್ನಾಟಕದ ಮೊದಲ ಪದವಿ ಕಾಲೇಜು ಎಂಬ ಹೆಗ್ಗಳಿಕೆ.
  • 1944: ಬೆಳಗಾವಿಯಲ್ಲಿ ರಾಜಾ ಲಖಮಗೌಡ ವಿಜ್ಞಾನ ಸಂಸ್ಥೆಯ ಸ್ಥಾಪನೆ. ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರಿಂದ ಉದ್ಘಾಟನೆ.
  • 1947: ಹುಬ್ಬಳ್ಳಿಯಲ್ಲಿ ಬಿ.ವಿ. ಭೂಮರಡ್ಡಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಕಾಲೇಜಿನ ಸ್ಥಾಪನೆ.
  • 1963: ಬೆಳಗಾವಿಯಲ್ಲಿ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಆರಂಭ. ಈ ಭಾಗದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಹೊಸ ಅಧ್ಯಾಯ.
  • 1986: ಬೆಳಗಾವಿಯಲ್ಲಿ ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಸ್ಥಾಪನೆ.
  • 2006: ಬೆಳಗಾವಿಯಲ್ಲಿ ಕೆಎಲ್‌ಇ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ (ಕಾಹೆರ್) ಸ್ಥಾಪನೆ.
  • 2015: ಹುಬ್ಬಳ್ಳಿಯಲ್ಲಿ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಥಾಪನೆ.

ಈ ಬೆಳವಣಿಗೆಗಳು ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ತಮ್ಮ ನೆಲದಲ್ಲಿಯೇ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿವೆ.

ಶಿಕ್ಷಣದಾಚೆಗೂ ವಿಸ್ತರಿಸಿದ ಆರೋಗ್ಯ ಸೇವೆ

ಕೆಎಲ್‌ಇ ಸಂಸ್ಥೆಯ ಸಾಧನೆ ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಆರೋಗ್ಯ ಸೇವೆಯಲ್ಲಿಯೂ ಸಂಸ್ಥೆ ಮಹತ್ವದ ಕೊಡುಗೆ ನೀಡಿದೆ.

ಅಲೋಪಥಿ, ಆಯುರ್ವೇದ ಮತ್ತು ಹೋಮಿಯೋಪಥಿ ಸೇರಿದಂತೆ ವಿವಿಧ ವೈದ್ಯಕೀಯ ಪದ್ಧತಿಗಳಲ್ಲಿ ಆಸ್ಪತ್ರೆಗಳ ಬೃಹತ್ ಜಾಲವನ್ನು ರೂಪಿಸಿದೆ.

ಇಂದು ಸಂಸ್ಥೆಯಡಿ 16 ಆಸ್ಪತ್ರೆಗಳು, 5 ಸಾವಿರಕ್ಕೂ ಅಧಿಕ ಹಾಸಿಗೆಗಳು ಹಾಗೂ 1,700ಕ್ಕೂ ಅಧಿಕ ಉಚಿತ ಹಾಸಿಗೆಗಳ ಸೌಲಭ್ಯವಿದೆ. ಆರೋಗ್ಯ ಸೇವೆಯನ್ನು ಜನಸಾಮಾನ್ಯರಿಗೂ ತಲುಪಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ.

ವೈದ್ಯಕೀಯ ಶಿಕ್ಷಣ, ಸಂಶೋಧನೆ, ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ಮತ್ತು ಗ್ರಾಮೀಣ ಆರೋಗ್ಯ ಸೇವೆಗಳ ಮೂಲಕ ಕೆಎಲ್‌ಇ ಸಂಸ್ಥೆ ತನ್ನ ಸೇವಾ ವ್ಯಾಪ್ತಿಯನ್ನು ನಿರಂತರವಾಗಿ ವಿಸ್ತರಿಸುತ್ತಿದೆ.

ಜಗತ್ತಿನೊಂದಿಗೆ ಜ್ಞಾನದ ಸೇತುವೆ

ಇಂದು ಕೆಎಲ್‌ಇ ಸಂಸ್ಥೆ 320ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಹೊಂದಿದ್ದು, 18 ಸಾವಿರಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 1.40 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಬೆಳಗಾವಿಯೊಂದರಲ್ಲಿಯೇ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವುದು ಗಡಿನಾಡು ಪ್ರದೇಶಕ್ಕೆ ಸಂಸ್ಥೆ ನೀಡಿರುವ ಕೊಡುಗೆಯ ಮಹತ್ವವನ್ನು ಸಾರುತ್ತದೆ.

ನ್ಯಾಕ್ ಮಾನ್ಯತೆ ಪಡೆದ ಕೆಎಲ್‌ಇ ಪದವಿ ಕಾಲೇಜುಗಳು ಎ, ಎ+ ಮತ್ತು ಎ++ ಶ್ರೇಣಿಗಳನ್ನು ಹೊಂದಿರುವುದು ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳೊಂದಿಗೆ ಅನೇಕ ಶೈಕ್ಷಣಿಕ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಅಮೆರಿಕದ ಫಿಲಡೆಲ್ಫಿಯಾದ ಪ್ರತಿಷ್ಠಿತ ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯವೂ ಈ ಸಹಯೋಗದ ಭಾಗವಾಗಿದೆ.

ದೇಶದ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಸೇರಿದಂತೆ ಅನೇಕ ಗಣ್ಯರು ಸಂಸ್ಥೆಗೆ ಭೇಟಿ ನೀಡಿರುವುದು ಕೆಎಲ್‌ಇಯ ರಾಷ್ಟ್ರೀಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ.

ಸಂಸ್ಥಾಪಕರನ್ನು ಮರೆಯದಿರುವುದೇ ನಿಜವಾದ ಗೌರವ

ಒಂದು ಶತಮಾನದ ಹಿಂದೆ ಏಳು ಜನ ಶಿಕ್ಷಕರು ತಮ್ಮ ವೈಯಕ್ತಿಕ ಬದುಕಿನ ಸುಖವನ್ನು ಬದಿಗಿಟ್ಟು ಸಮಾಜದ ಭವಿಷ್ಯಕ್ಕಾಗಿ ಹಚ್ಚಿದ ಜ್ಞಾನದ ಜ್ಯೋತಿ ಇಂದು ಲಕ್ಷಾಂತರ ವಿದ್ಯಾರ್ಥಿಗಳ ಬದುಕನ್ನು ಬೆಳಗಿಸುತ್ತಿದೆ. ಅವರ ತ್ಯಾಗದಿಂದ ರೂಪುಗೊಂಡ ಸಂಸ್ಥೆ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.

ಆದರೆ ಸಂಸ್ಥೆಯ ಸಾಧನೆಗಳನ್ನು ಸಂಭ್ರಮಿಸುವುದರ ಜೊತೆಗೆ, ಅದರ ಮೂಲ ಆಶಯಗಳನ್ನು ಎಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂಬುದರ ಆತ್ಮಾವಲೋಕನವೂ ಅಗತ್ಯ.

ಸಂಸ್ಥಾಪಕರು ಶಿಕ್ಷಣವನ್ನು ವ್ಯಾಪಾರವಾಗಿ ನೋಡಲಿಲ್ಲ; ಅದನ್ನು ಸಮಾಜ ಪರಿವರ್ತನೆಯ ಸಾಧನವಾಗಿ ಕಂಡರು. ಅಧಿಕಾರ, ಹಣ, ಕೀರ್ತಿಗಿಂತ ಸಮಾಜದ ಋಣ ತೀರಿಸುವುದನ್ನೇ ಬದುಕಿನ ಗುರಿಯಾಗಿಸಿಕೊಂಡರು. ಕನ್ನಡದ ಅಸ್ಮಿತೆ, ಸಾಮಾಜಿಕ ಸಮಾನತೆ, ಬಡವರ ಶಿಕ್ಷಣ ಮತ್ತು ಸ್ವಾರ್ಥರಹಿತ ಸೇವೆಗೆ ಆದ್ಯತೆ ನೀಡಿದರು.

ಇಂದು ಕೆಎಲ್‌ಇ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿರುವ ಸಂದರ್ಭದಲ್ಲಿ ಸಂಸ್ಥಾಪಕ ಸಪ್ತರ್ಷಿಗಳ ಆದರ್ಶಗಳು ಆಡಳಿತ, ಶಿಕ್ಷಣ, ಸಂಶೋಧನೆ ಮತ್ತು ಸಾಮಾಜಿಕ ಸೇವೆಯ ಪ್ರತಿಯೊಂದು ಹಂತದಲ್ಲಿಯೂ ಪ್ರತಿಬಿಂಬಿಸಬೇಕು. ಹೊಸ ತಲೆಮಾರಿನ ವಿದ್ಯಾರ್ಥಿಗಳಲ್ಲಿ ಸೇವಾಭಾವ, ಮಾನವೀಯತೆ, ಕನ್ನಡದ ಅಭಿಮಾನ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯನ್ನು ಬೆಳೆಸಬೇಕು.

ಕೆಎಲ್‌ಇಯ ಇತಿಹಾಸ ಎಂದರೆ ಕೇವಲ ಕಟ್ಟಡಗಳ, ಕಾಲೇಜುಗಳ, ಆಸ್ಪತ್ರೆಗಳ ಅಥವಾ ವಿಶ್ವವಿದ್ಯಾಲಯಗಳ ಬೆಳವಣಿಗೆಯ ಇತಿಹಾಸವಲ್ಲ. ಅದು ನಿಸ್ವಾರ್ಥ ಸೇವೆಯ, ತ್ಯಾಗದ, ಸ್ವಾಭಿಮಾನದ ಮತ್ತು ಸಮಾಜದ ಮೇಲಿನ ಅಚಲ ನಿಷ್ಠೆಯ ಇತಿಹಾಸ.

1916ರಲ್ಲಿ ಬಿತ್ತಿದ ಆ ಜ್ಞಾನದ ಬೀಜ ಇಂದು ಹೆಮ್ಮರವಾಗಿ ಬೆಳೆದು ವಿಶ್ವದಾದ್ಯಂತ ತನ್ನ ನೆರಳನ್ನು ಹರಡಿದೆ. ಆ ಹೆಮ್ಮರದ ಬೇರುಗಳು ಮಾತ್ರ ಎಂದೆಂದಿಗೂ ಸಂಸ್ಥಾಪಕರ ತ್ಯಾಗ, ಆದರ್ಶ ಮತ್ತು ಸಮಾಜಮುಖಿ ಚಿಂತನೆಯಲ್ಲಿಯೇ ಇರಬೇಕು.

ಸಂಸ್ಥಾಪಕ ಸಪ್ತರ್ಷಿಗಳ ಸ್ಮರಣೆ ಕೇವಲ ವಾರ್ಷಿಕ ಆಚರಣೆಯಾಗಬಾರದು; ಅದು ಸಂಸ್ಥೆಯ ಪ್ರತಿಯೊಂದು ನಿರ್ಧಾರಕ್ಕೂ ದಾರಿದೀಪವಾಗಬೇಕು. ಏಕೆಂದರೆ ಅವರ ನೆನಪಿನಲ್ಲಿಯೇ ಕೆಎಲ್‌ಇಯ ಉದಯವಿದೆ. ಅವರ ಆದರ್ಶಗಳನ್ನು ಮರೆಯುವುದೇ ಅದರ ಅಸ್ತಮಾನದ ಆರಂಭವಾಗಬಾರದು!

https://meet.google.com/call?authuser=0&hl=en-GB&mc=KAIwAZoBFDoScGludG9fZmF6cmx2bzh4Y2xnogE3MgJQADoCEAFKBAgBEAFaAggAagIIAXICCAF6AggCiAEBkgECEAGaAQQYASAAogECEADiAQIIALIBBxgDIAAqATDCAQIgAdgBAQ&origin=https%3A%2F%2Fmail.google.com&iilm=1794481670036

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button