*ಗೋವಾ-ಮಂಗಳೂರು-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು*: *ವೇಳಾಪಟ್ಟಿ, ಟಿಕೆಟ್ ದರದ ಬಗ್ಗೆ ಇಲ್ಲಿದೆ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಯಶವಂತಪುರ (ಬೆಂಗಳೂರು)–ಮಂಗಳೂರು ಜಂಕ್ಷನ್–ಮಡಗಾಂವ್ (ಗೋವಾ) ನಡುವಿನ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಇತ್ತ ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ರೈಲು ಸೇವೆಯನ್ನು ಶುಕ್ರವಾರ ಉದ್ಘಾಟಿಸಿದರು.
ಮಂಗಳೂರು ಜಂಕ್ಷನ್‌ನಲ್ಲಿ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, “ಕರಾವಳಿ ಕರ್ನಾಟಕವನ್ನು ರಾಜ್ಯದ ರಾಜಧಾನಿ ಬೆಂಗಳೂರಿನೊಂದಿಗೆ ಬೆಸೆಯುವ ಬಹುಕಾಲದ ಕನಸು ಇಂದು ನನಸಾಗಿದೆ. ಪಶ್ಚಿಮ ಘಟ್ಟದ ವಿದ್ಯುದ್ದೀಕರಣದಲ್ಲಿದ್ದ ಹಲವಾರು ತಾಂತ್ರಿಕ ಅಡಚಣೆಗಳನ್ನು ಮೆಟ್ಟಿನಿಂತು ಇಂದು ಯಶಸ್ವಿಯಾಗಿ ರೈಲು ಸಂಚಾರ ಆರಂಭಿಸಿದ್ದೇವೆ. ನಾನೂ ಕೂಡ ಇಂದು ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದೇನೆ” ಎಂದು ಹರ್ಷ ವ್ಯಕ್ತಪಡಿಸಿದರು.
ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಸಮಗ್ರ ಅಭಿವೃದ್ಧಿಗಾಗಿ ₹94 ಕೋಟಿ ಮಂಜೂರು ಮಾಡಲಾಗಿದೆ ಎಂದು ಸಚಿವರು ಘೋಷಿಸಿದರು.
ವಂದೇ ಭಾರತ್ ವೇಳಾಪಟ್ಟಿ ಮತ್ತು ನಿಲುಗಡೆ ವಿವರ:
ಗೋವಾ-ಮಂಗಳೂರು-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನವೆಂಬರ್ 15ರಿಂದ ನಿಯಮಿತ ಸಂಚಾರ ನಡೆಸಲಿದೆ. ಇದು 16 ಬೋಗಿಗಳನ್ನು (ಎಕ್ಸಿಕ್ಯೂಟಿವ್ ಚೇರ್ ಕಾರ್ ಮತ್ತು ಚೇರ್ ಕಾರ್) ಒಳಗೊಂಡಿದೆ.
ರೈಲು ಸಂಖ್ಯೆ 26655 ಯಶವಂತಪುರ – ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬುಧವಾರ ಹೊರತುಪಡಿಸಿ ವಾರದ ಆರು ದಿನ ಸಂಚರಿಸಲಿದೆ. ಈ ರೈಲು ಬೆಳಿಗ್ಗೆ 7.35ಕ್ಕೆ ಯಶವಂತಪುರದಿಂದ ಹೊರಟು, ಮಧ್ಯಾಹ್ನ 3.05ಕ್ಕೆ ಮಂಗಳೂರು ಜಂಕ್ಷನ್‌ಗೆ ತಲುಪಿ 3.15ಕ್ಕೆ ನಿರ್ಗಮಿಸಲಿದೆ ಹಾಗೂ ರಾತ್ರಿ 8.55ಕ್ಕೆ ಮಡಗಾಂವ್ ತಲುಪಲಿದೆ.
ರೈಲು ಸಂಖ್ಯೆ 26656 ಮಡಗಾಂವ್ – ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗುರುವಾರ ಹೊರತುಪಡಿಸಿ ವಾರದ ಆರು ದಿನ ಸಂಚರಿಸಲಿದೆ. ಈ ರೈಲು ಬೆಳಿಗ್ಗೆ 08:20ಕ್ಕೆ ಮಡಗಾಂವ್‌ನಿಂದ ಹೊರಟು, ಮಧ್ಯಾಹ್ನ 1.50ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಿ 2 ಗಂಟೆಗೆ ಹೊರಡಲಿದ್ದು, ರಾತ್ರಿ 9.15ಕ್ಕೆ ಯಶವಂತಪುರ ತಲುಪಲಿದೆ.
ನಿಲುಗಡೆಗಳು:
ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್ ಮತ್ತು ಕಾರವಾರ.
ಬೆಂಗಳೂರು–ಮಂಗಳೂರು ಪ್ರಯಾಣ ದರದ ವಿವರ:
ನೂತನ ವಂದೇ ಭಾರತ್ ರೈಲಿನಲ್ಲಿ ಪ್ರಯಾಣದ ಅವಧಿ ಸುಮಾರು 7 ಗಂಟೆ 15 ನಿಮಿಷದಿಂದ 7 ಗಂಟೆ 30 ನಿಮಿಷ ಇರಲಿದ್ದು, ಟಿಕೆಟ್ ದರಗಳು ಈ ಕೆಳಗಿನಂತಿವೆ:
ಯಶವಂತಪುರದಿಂದ ಮಂಗಳೂರು ಜಂಕ್ಷನ್ (26655):
ಚೇರ್ ಕಾರ್ (CC): ₹1,315
ಎಕ್ಸಿಕ್ಯೂಟಿವ್ ಚೇರ್ ಕಾರ್ (EC): ₹2,305
ಮಂಗಳೂರು ಜಂಕ್ಷನ್‌ನಿಂದ ಯಶವಂತಪುರ (26656):
ಚೇರ್ ಕಾರ್ (CC): ₹1,480
ಎಕ್ಸಿಕ್ಯೂಟಿವ್ ಚೇರ್ ಕಾರ್ (EC): ₹2,500
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




