Kannada NewsKarnataka NewsLatestPolitics

*ಕುಮಾರಕೃಪಾ ಗೆಸ್ಟ್ ಹೌಸ್ ಇನ್ಮುಂದೆ ‘ಗಂಗಾ’*: *ನೊಣವಿನಕೆರೆ ಅಜ್ಜಯ್ಯನವರ ನೇತೃತ್ವದಲ್ಲಿ ವಿಶೇಷ ಹೋಮ-ಹವನ; ನೂತನ ನಿವಾಸಕ್ಕೆ ಡಿಕೆಶಿ ಗೃಹಪ್ರವೇಶ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೂತನ ಅಧಿಕೃತ ನಿವಾಸವಾಗಿ ಸಿದ್ಧಗೊಂಡಿರುವ ಐತಿಹಾಸಿಕ ಕುಮಾರಕೃಪಾ ಅತಿಥಿಗೃಹ ಇದೀಗ ‘ಗಂಗಾ’ ಎಂಬ ಹೊಸ ಹೆಸರನ್ನು ಪಡೆದುಕೊಂಡಿದೆ. ನೂತನ ನಾಮಫಲಕವನ್ನೂ ಅಳವಡಿಸಲಾಗಿದೆ. ಕಾರ್ತಿಕ ಸೋಮವಾರದ ಅಂದರೆ ಇಂದು ಶುಭ ಮುಹೂರ್ತದಲ್ಲಿ ಮುಖ್ಯಮಂತ್ರಿ ಗೃಹಪ್ರವೇಶ ಮಾಡಲಿದ್ದಾರೆ. ಈಗಾಗಲೇ ನಿವಾಸದಲ್ಲಿ ವಿಶೇಷ ಪೂಜೆ ಹಾಗೂ ಹೋಮ-ಹವನಗಳು ಆರಂಭವಾಗಿವೆ.

ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ನೊಣವಿನಕೆರೆ ಅಜ್ಜಯ್ಯನವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರುತ್ತಿದ್ದು, ಮುಖ್ಯಮಂತ್ರಿ ಹಾಗೂ ಕುಟುಂಬ ಸದಸ್ಯರು ನಿವಾಸದಲ್ಲೇ ಉಪಸ್ಥಿತರಿದ್ದಾರೆ. ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಧ್ಯಮದವರಿಗೆ ಒಳ ಪ್ರವೇಶ ನಿರಾಕರಿಸಲಾಗಿದ್ದು, ಮುಖ್ಯ ದ್ವಾರದ ಬಳಿ ಪೊಲೀಸರು ಭದ್ರತೆ ಕಲ್ಪಿಸಿದ್ದಾರೆ.

ಇತಿಹಾಸ ಪ್ರಸಿದ್ಧ ಕುಮಾರಕೃಪಾಗೆ ‘ಗಂಗಾ’ ಹೆಸರು: ನೂತನ ನಿವಾಸಕ್ಕೆ ಡಿಕೆಶಿ ಗೃಹಪ್ರವೇಶ!

ಗೃಹಪ್ರವೇಶದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯಿಂದಲೇ ನೊಣವಿನಕೆರೆ ಅಜ್ಜಯ್ಯನವರ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ಹೋಮ-ಹವನಗಳು ಆರಂಭವಾಗಿವೆ. ಮುಖ್ಯಮಂತ್ರಿ ಹಾಗೂ ಕುಟುಂಬ ಸದಸ್ಯರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದಾರೆ. ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಒಳ ಪ್ರವೇಶ ನಿರಾಕರಿಸಲಾಗಿದ್ದು, ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ಗಂಗಾ ನಿವಾಸಕ್ಕೆ ನದಿಗಳ ಹೆಸರು

ನವೀಕರಣಗೊಂಡ ನಿವಾಸದ ಕೊಠಡಿಗಳಿಗೆ ಹೇಮಾವತಿ, ಶಾಲ್ಮಲ ಹಾಗೂ ತುಂಗಭದ್ರಾ ಸೇರಿದಂತೆ ನದಿಗಳ ಹೆಸರುಗಳನ್ನು ಇಡಲಾಗಿದೆ. ಇಂದು ಸಾಂಕೇತಿಕವಾಗಿ ಗೃಹಪ್ರವೇಶ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ನವೆಂಬರ್ ತಿಂಗಳ ಕೊನೆಯಲ್ಲಿ ಮುಖ್ಯಮಂತ್ರಿಗಳ ಇಡೀ ಕುಟುಂಬ ಸದಾಶಿವನಗರದ ನಿವಾಸದಿಂದ ಗಂಗಾ ನಿವಾಸಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಗಾಂಧೀಜಿ ತಂಗಿದ್ದ ಐತಿಹಾಸಿಕ ಕಟ್ಟಡ

ಸುಮಾರು 160 ವರ್ಷಗಳ ಇತಿಹಾಸ ಹೊಂದಿರುವ ಕುಮಾರಕೃಪಾ ಕಟ್ಟಡವು ಮೈಸೂರಿನ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಖಾಸಗಿ ನಿವಾಸವಾಗಿತ್ತು. ಬಳಿಕ 1918ರಲ್ಲಿ ಸರ್ಕಾರದ ಸ್ವಾಧೀನಕ್ಕೆ ಬಂದ ಈ ಕಟ್ಟಡ ಸರ್ಕಾರಿ ಅತಿಥಿಗೃಹವಾಗಿ ಬಳಕೆಯಾಯಿತು. 1927ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿ ಇದೇ ಕಟ್ಟಡದಲ್ಲಿ ವಾಸ್ತವ್ಯ ಹೂಡಿದ್ದರು. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರೂ ಇಲ್ಲಿ ವಾಸವಿದ್ದರು.

ಹಳೆಯ ಪಾರಂಪರಿಕ ಕಟ್ಟಡವನ್ನು ನವೀಕರಿಸಿ ಇದೀಗ ‘ಗಂಗಾ’ ಎಂದು ಮರುನಾಮಕರಣ ಮಾಡಲಾಗಿದೆ. ಈ ಮೂಲಕ ಐತಿಹಾಸಿಕ ಕುಮಾರಕೃಪಾ ಅತಿಥಿಗೃಹವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೂತನ ಅಧಿಕೃತ ನಿವಾಸವಾಗಿ ಹೊಸ ಗುರುತನ್ನು ಪಡೆದುಕೊಂಡಿದೆ.

Related Articles

Back to top button