*ಮೃತದೇಹ ಹೊರತೆಗೆಯಲು ಹೋದ ವ್ಯಕ್ತಿಯೂ ಸಾವು*: *ದಕ್ಷಿಣ ಪಿನಾಕಿನಿ ನದಿಯಲ್ಲಿ ಇಬ್ಬರ ದುರಂತ ಅಂತ್ಯ*

ಪ್ರಗತಿವಾಹಿನಿ ಸುದ್ದಿ: ನದಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಅವರ ಮೃತದೇಹ ಹೊರತೆಗೆಯಲು ಹೋದ ವ್ಯಕ್ತಿಯೂ ಅದೇ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಒಬ್ಬರ ಮೃತದೇಹ ಹೊರತೆಗೆಯುವ ಕಾರ್ಯಾಚರಣೆ ಮತ್ತೊಂದು ಜೀವವನ್ನು ಬಲಿ ಪಡೆದಿದೆ. ಈ ದುರಂತದಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮುಗಳೂರು ಸಮೀಪದ ದಕ್ಷಿಣ ಪಿನಾಕಿನಿ ನದಿಯಲ್ಲಿ ಘಟನೆ ನಡೆದಿದೆ. ಮೃತರನ್ನು ಕಲ್ಕುಂಟೆ ಅಗ್ರಹಾರ ಗ್ರಾಮದ ಕವಿತಾ ಶ್ರೀನಿವಾಸ್ (35) ಮತ್ತು ಮಾಲೂರಿನ ಮಂಜುನಾಥ್ ಎಂದು ಗುರುತಿಸಲಾಗಿದೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೌಟುಂಬಿಕ ಕಲಹದ ಬಳಿಕ ಮಹಿಳೆ ಆತ್ಮಹತ್ಯೆ
ಕವಿತಾಗೆ ಸುಮಾರು 14 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಪತಿ ಮತ್ತು ಪತ್ನಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಇದರಿಂದ ಮನನೊಂದ ಕವಿತಾ ದಕ್ಷಿಣ ಪಿನಾಕಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ನದಿಯಲ್ಲಿ ಮಹಿಳೆಯ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಸರ್ಜಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮೃತದೇಹವನ್ನು ಹೊರತೆಗೆಯಲು ಮಾಲೂರಿನ ಮಂಜುನಾಥ್ ಅವರನ್ನು ಕರೆಸಲಾಗಿತ್ತು. ಆದರೆ, ಮೃತದೇಹ ಹೊರತೆಗೆಯುವ ಸಂದರ್ಭದಲ್ಲಿ ಮಂಜುನಾಥ್ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತದೇಹ ಹೊರತೆಗೆಯುವ ಕಾರ್ಯಾಚರಣೆ ವೇಳೆ ಸರ್ಜಾಪುರ ಪೊಲೀಸರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಪೊಲೀಸರ ನಿರ್ಲಕ್ಷ್ಯದಿಂದಲೇ ರಕ್ಷಣೆಗೆ ಬಂದ ಮಂಜುನಾಥ್ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಳಿಕ ಅಗ್ನಿಶಾಮಕ ದಳದ ತಂಡ ನದಿಯಲ್ಲಿ ಇಬ್ಬರ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಿದೆ. ನದಿ ದಡದಲ್ಲಿ ನೂರಾರು ಜನರು ಜಮಾಯಿಸಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯಬೇಕಿದೆ.




