Kannada NewsKarnataka NewsLatest

*E20 ಪೆಟ್ರೋಲ್ ವಿವಾದಕ್ಕೆ ಗಡ್ಕರಿ ಎಂಟ್ರಿ*: *ರಿಜ್ವಾನ್ ಅರ್ಷದ್ ಆರೋಪಕ್ಕೆ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣದ ಕುರಿತು ರಾಜ್ಯದಲ್ಲಿ ಆರಂಭವಾಗಿರುವ ವಿವಾದ ಇದೀಗ ಕೇಂದ್ರ ಸರ್ಕಾರದ ಅಂಗಳ ತಲುಪಿದೆ. ಪೆಟ್ರೋಲ್‌ನ ಗುಣಮಟ್ಟ, ವಾಹನಗಳ ಮೇಲಿನ ಪರಿಣಾಮ ಹಾಗೂ ಗ್ರಾಹಕರಿಗೆ ಸಿಗುತ್ತಿರುವ ಇಂಧನದ ಪ್ರಮಾಣದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ನಡುವೆ ಸಚಿವ ರಿಜ್ವಾನ್ ಅರ್ಷದ್ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಸೆಪ್ಟೆಂಬರ್‌ನಲ್ಲಿ ರಾಜ್ಯದ ವಿವಿಧ ಪೆಟ್ರೋಲ್ ಬಂಕ್‌ಗಳಿಂದ ಸಂಗ್ರಹಿಸಿದ ಇಂಧನದ ಮಾದರಿಗಳನ್ನು NABL ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ. 14 ಮಾದರಿಗಳ ಪೈಕಿ 11ರಲ್ಲಿ ಶೇ.20ಕ್ಕಿಂತ ಹೆಚ್ಚು ಎಥೆನಾಲ್ ಪತ್ತೆಯಾಗಿದ್ದು, ಗರಿಷ್ಠ ಶೇ.31.2ರಷ್ಟು ಮಿಶ್ರಣ ಕಂಡುಬಂದಿದೆ ಎಂದು ರಿಜ್ವಾನ್ ಅರ್ಷದ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಶೇ.90ರಷ್ಟು ಪೆಟ್ರೋಲ್ ಬಂಕ್‌ಗಳ ನಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಗ್ರಾಹಕರಿಗೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇಂಧನ ದೊರೆಯುತ್ತಿದೆ ಎಂಬ ಆರೋಪವನ್ನೂ ಮಾಡಿದ್ದಾರೆ.

ಕೇಂದ್ರಕ್ಕೆ ಐದು ಪ್ರಮುಖ ಬೇಡಿಕೆಗಳು

ಎಥೆನಾಲ್ ಮಿಶ್ರಣದ ಪ್ರಮಾಣದ ಬಗ್ಗೆ ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ. ಪೆಟ್ರೋಲ್ ಬಂಕ್‌ಗಳಲ್ಲಿ ಮಿಶ್ರಣದ ಪ್ರಮಾಣವನ್ನು ಪ್ರದರ್ಶಿಸುವುದರ ಜತೆಗೆ, ಗ್ರಾಹಕರಿಗೆ ನೀಡುವ ಬಿಲ್‌ನಲ್ಲೂ ಅದನ್ನು ನಮೂದಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಡಿಮೆ ಎಥೆನಾಲ್ ಮಿಶ್ರಣವಿರುವ E-10 ಇಂಧನ ಆಯ್ಕೆಗೆ ಗ್ರಾಹಕರಿಗೆ ಅವಕಾಶ ನೀಡಬೇಕು. NABL ಮಾನ್ಯತೆ ಪಡೆದ ಪ್ರಯೋಗಾಲಯಗಳ ಮೂಲಕ ಸ್ವತಂತ್ರ ಇಂಧನ ಪರೀಕ್ಷೆ ನಡೆಸುವ ವ್ಯವಸ್ಥೆ ರೂಪಿಸಬೇಕು ಎಂಬುದು ಮತ್ತೊಂದು ಬೇಡಿಕೆಯಾಗಿದೆ.

ಇದಲ್ಲದೆ, ಎಥೆನಾಲ್ ಮಿಶ್ರಿತ ಇಂಧನ ಬಳಕೆಯಿಂದ ವಾಹನಗಳಿಗೆ ಹಾನಿಯಾದರೆ ಗ್ರಾಹಕರಿಗೆ ಪರಿಹಾರ ನೀಡಬೇಕು. ಇದಕ್ಕಾಗಿ ಪ್ರತ್ಯೇಕ ಪರಿಹಾರ ನಿಧಿ ರಚಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಎಥೆನಾಲ್ ವಿರುದ್ಧದ ಆರೋಪಗಳಿಗೆ ಗಡ್ಕರಿ ಉತ್ತರ

ಇನ್ನೊಂದೆಡೆ, ಎಥೆನಾಲ್ ಮಿಶ್ರಿತ ಇಂಧನದಿಂದ ವಾಹನಗಳಿಗೆ ಹಾನಿಯಾಗುತ್ತಿದೆ ಎಂಬ ಆರೋಪಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯಿಸಿದ್ದಾರೆ. ಎಥೆನಾಲ್ ಬಳಕೆಯಿಂದ ಯಾವುದೇ ವಾಹನ ಹಾನಿಯಾಗಿಲ್ಲ ಎಂದು ಹೇಳಿರುವ ಅವರು, ಈ ಸಂಬಂಧ ನಡೆಯುತ್ತಿರುವ ಅಭಿಯಾನಗಳು ಪೇಯ್ಡ್ ಕ್ಯಾಂಪೇನ್‌ಗಳಾಗಿವೆ ಎಂದು ಆರೋಪಿಸಿದ್ದಾರೆ.

2022ರಿಂದ ದೇಶದಲ್ಲಿ ಸುಮಾರು ನಾಲ್ಕು ಕೋಟಿ ನಾಲ್ಕು ಚಕ್ರದ ವಾಹನಗಳು ಹಾಗೂ 20 ಕೋಟಿ ದ್ವಿಚಕ್ರ ವಾಹನಗಳು E-20 ಇಂಧನದಲ್ಲಿ ಸಂಚರಿಸುತ್ತಿವೆ ಎಂದು ಗಡ್ಕರಿ ತಿಳಿಸಿದ್ದಾರೆ. ಕಳೆದ ಮೂರು-ನಾಲ್ಕು ತಿಂಗಳಿನಿಂದ ವಾಹನಗಳು ಹಾಳಾಗುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎಥೆನಾಲ್ ವಿರುದ್ಧ ಅಭಿಯಾನ ನಡೆಸಲಾಗುತ್ತಿದೆ. ಆದರೆ, ವಾಹನಗಳಿಗೆ ಯಾವುದೇ ಹಾನಿಯಾಗುತ್ತಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ವಿವಾದದ ಕುರಿತು ಮಾಜಿ ಸಚಿವ ಮುರುಗೇಶ್ ನಿರಾಣಿ ಕೂಡ ಪ್ರತಿಕ್ರಿಯಿಸಿದ್ದಾರೆ. ರಿಜ್ವಾನ್ ಅರ್ಷದ್ ಅವರ ಆರೋಪಗಳೇ ಅವರಿಗೆ ತಿರುಗುಬಾಣವಾಗಲಿವೆ ಎಂದು ಟೀಕಿಸಿರುವ ನಿರಾಣಿ, ಇಂಧನದ ಮಾದರಿಗಳನ್ನು ಯಾರ ಸಮಕ್ಷಮದಲ್ಲಿ ಸಂಗ್ರಹಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ರಿಜ್ವಾನ್ ಅರ್ಷದ್, 63 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿರುವುದಾಗಿ ಹೇಳಿದ್ದಾರೆ. ಇಂಧನದಲ್ಲಿ ಮಿಶ್ರಣ ಮಾಡಿ ಹಣ ಪಡೆಯುತ್ತಿರುವವರ ವಿರುದ್ಧವೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಎಥೆನಾಲ್ ಮಿಶ್ರಣದ ಪ್ರಮಾಣ, ವಾಹನಗಳ ಮೇಲಿನ ಪರಿಣಾಮ ಮತ್ತು ಇಂಧನ ವಿತರಣೆಯಲ್ಲಿನ ವ್ಯತ್ಯಾಸದ ಆರೋಪಗಳು ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿವೆ. ಸಚಿವರು ಮುಂದಿಟ್ಟಿರುವ ಐದು ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

Related Articles

Back to top button