*ಬೆಂಗಳೂರಿನ ಜಗನ್ನಾಥ ಭವನದಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾದ ವಿಶೇಷ ಸಭೆಯಲ್ಲಿ ಭಾಗವಹಿಸಿದ ಡಾ.ಸೋನಾಲಿ ಸರ್ನೋಬತ್*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯವಾದ ಜಗನ್ನಾಥ ಭವನದಲ್ಲಿ ಕರ್ನಾಟಕ ಬಿಜೆಪಿ ಮಹಿಳಾ ಮೋರ್ಚಾದ ವಿಶೇಷ ಸಂಘಟನಾತ್ಮಕ ಸಭೆಯು ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಕು. ಸಿ. ಮಂಜುಳಾ ಅವರ ನೇತೃತ್ವದಲ್ಲಿ ನಡೆಯಿತು.
ಮಹಿಳಾ ಸಂಸದರು ಹಾಗೂ ಮಹಿಳಾ ಶಾಸಕರಿಗಾಗಿ ಆಯೋಜಿಸಲಾಗಿದ್ದ ಕಾಮನ್ವೆಲ್ತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಸಂಸದರಾದ ಶ್ರೀಮತಿ ರೂಪಕುಮಾರಿ ಚೌಧರಿ ಅವರು ಈ ವಿಶೇಷ ಸಭೆಯಲ್ಲಿ ಉಪಸ್ಥಿತರಿದ್ದು, ಮಹಿಳಾ ಮೋರ್ಚಾದ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಸಭೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್ ಅವರು ಬೆಳಗಾವಿ ಮಹಿಳಾ ಮೋರ್ಚಾದ ಪ್ರತಿನಿಧಿಗಳಾದ ಡಾ. ಭಾಸ್ಮೆ ಹಾಗೂ ಶ್ರೀಮತಿ ಕೇಕರೆ ಅವರೊಂದಿಗೆ ಭಾಗವಹಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಮಹಿಳಾ ಮೋರ್ಚಾದ ವತಿಯಿಂದ ರಾಷ್ಟ್ರೀಯ ಅಧ್ಯಕ್ಷೆ ಶ್ರೀಮತಿ ರೂಪಕುಮಾರಿ ಚೌಧರಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಲಾಯಿತು.
ಮಹಿಳಾ ಮೋರ್ಚಾದ ಮುಂದಿನ ಕಾರ್ಯಚಟುವಟಿಕೆಗಳು, ಸಂಘಟನೆಯ ಬಲವರ್ಧನೆ ಹಾಗೂ ಮುಂಬರುವ ಚುನಾವಣೆಗಳ ಸಿದ್ಧತೆಗಳ ಕುರಿತು ಚರ್ಚಿಸಲು ಈ ಸಭೆ ಮಹತ್ವದ ವೇದಿಕೆಯಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷೆ ಶ್ರೀಮತಿ ರೂಪಕುಮಾರಿ ಚೌಧರಿ ಅವರು ತಮ್ಮ ರಾಜಕೀಯ ಹಾಗೂ ಸಂಘಟನಾತ್ಮಕ ಅನುಭವಗಳನ್ನು ಹಂಚಿಕೊಂಡರು. ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪರಿಣಾಮಕಾರಿ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸುವುದು, ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಮತ್ತಷ್ಟು ಬಲಪಡಿಸುವುದು ಹಾಗೂ ಮಹಿಳಾ ಕಾರ್ಯಕರ್ತರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಅಗತ್ಯವನ್ನು ವಿವರಿಸಿದರು.
ಸಂಘಟನೆಯಲ್ಲಿ ಶಿಸ್ತು, ಸಾಮೂಹಿಕ ನಾಯಕತ್ವ, ಪರಸ್ಪರ ಸಮನ್ವಯ, ಪರಿಣಾಮಕಾರಿ ಸಂವಹನ ಹಾಗೂ ಜನಸಂಪರ್ಕಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅವರು ತಿಳಿಸಿದರು. ಬಿಜೆಪಿ ಸರ್ಕಾರಗಳ ನೀತಿಗಳು, ಸಾಧನೆಗಳು ಹಾಗೂ ಜನಪರ ಯೋಜನೆಗಳನ್ನು ಮಹಿಳೆಯರು ಮತ್ತು ಕುಟುಂಬಗಳಿಗೆ ತಲುಪಿಸುವಲ್ಲಿ ಮಹಿಳಾ ಮೋರ್ಚಾದ ಪಾತ್ರ ಅತ್ಯಂತ ಮಹತ್ವದ್ದಾಗಿದೆ.




