*ಯಕ್ಸಂಬಾ ಪಟ್ಟಣದ ಬೀರೇಶ್ವರ ಸಂಸ್ಥೆಗೆ ಎಕ್ಸಲೆನ್ಸ್ ಇನ್ ಬಿಸಿನೆಸ್ ಗ್ರೋತ್- 2026’ ರಾಷ್ಟ್ರೀಯ ಗೌರವ ಪ್ರಶಸ್ತಿ*

ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿ:-ಗ್ರಾಮೀಣ ಭಾಗದಿಂದ ಆರಂಭವಾಗಿ ಇಂದು ರಾಷ್ಟ್ರಮಟ್ಟದಲ್ಲಿ ಸಹಕಾರಿ ಕ್ಷೇತ್ರದ ದಿಗ್ಗಜರ ಗಮನ ಸೆಳೆದಿರುವ ನಮ್ಮ ಹೆಮ್ಮೆಯ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ., (ಮಲ್ಟಿ-ಸ್ಟೇಟ್) ಯಕ್ಸಂಬಾ ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ರಾಷ್ಟ್ರೀಯ ಗರಿ ಮೂಡಿದೆ.
ಸಹಕಾರ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುವುದರ ಜೊತೆಗೆ ಆರ್ಥಿಕ ಪ್ರಗತಿ ಹಾಗೂ ವ್ಯವಹಾರ ವೃದ್ಧಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಬೀರೇಶ್ವರ ಸಂಸ್ಥೆಗೆ ರಾಷ್ಟ್ರಮಟ್ಟದ ಪ್ರತಿಷ್ಠಿತ ‘ಎಕ್ಸಲೆನ್ಸ್ ಇನ್ ಬಿಸಿನೆಸ್ ಗ್ರೋತ್ 2026’ ಪ್ರಶಸ್ತಿ ಲಭಿಸಿದೆ.
ಗುರುವಾರ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ‘ಇಂಡಿಯನ್ ಕೋ-ಆಪ್ ನ್ಯೂಸ್ ಪೋರ್ಟಲ್’ನ 15ನೇ ವಾರ್ಷಿಕ ಸ್ಥಾಪನಾ ದಿನದ ಅಂಗವಾಗಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಟ್ಟದ ವಿಚಾರ ಸಂಕೀರ್ಣದಲ್ಲಿ,ದೇಶಾದ್ಯಂತದ ಸಹಕಾರಿ ಸಂಘಗಳ ಸಮ್ಮುಖದಲ್ಲಿ ನಮ್ಮ ಸಂಸ್ಥೆಯ ಅಪ್ರತಿಮ ಸಾಧನೆ ಮತ್ತು ಪಾರದರ್ಶಕ ವ್ಯವಹಾರವನ್ನು ಗುರುತಿಸಿ ಪ್ರತಿಷ್ಠಿತ “ಎಕ್ಸಲೆನ್ಸ್ ಇನ್ ಬಿಸಿನೆಸ್ ಗ್ರೋತ್ 2026” ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿದ್ದು ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಮಾಜಿ ನಿರ್ದೇಶಕರಾದ ಸತೀಶ ಮರಾಠೆ ಹಾಗೂ ಗಣ್ಯರ ಸಮ್ಮುಖದಲ್ಲಿ ಜೊಲ್ಲೆ ಗ್ರೂಪ್ ಸಂಸ್ಥಾಪಕರು ಹಾಗೂ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಈ ಹೆಮ್ಮೆಯ ಪ್ರಶಸ್ತಿಯನ್ನು ಸ್ವೀಕರಿಸಿದರು.
ಸಹಕಾರ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಶ್ರೀ ಬೀರೇಶ್ವರ ಸೊಸೈಟಿಯು ಸದಸ್ಯರ ವಿಶ್ವಾಸವನ್ನೇ ತನ್ನ ನಿಜವಾದ ಶಕ್ತಿಯನ್ನಾಗಿ ಪರಿಗಣಿಸಿ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ.ಹಣಕಾಸಿನ ವ್ಯವಹಾರಗಳಲ್ಲಿ ಶಿಸ್ತು, ಯೋಜನಾಬದ್ಧ ನಿರ್ವಹಣೆ, ಗ್ರಾಹಕ ಸ್ನೇಹಿ ಸೇವೆ ಹಾಗೂ ವ್ಯವಹಾರ ವೃದ್ಧಿಗಾಗಿ ನಿರಂತರವಾಗಿ ಕೈಗೊಂಡ ಪ್ರಯತ್ನಗಳು ಸಂಸ್ಥೆಗೆ ವಿಶಿಷ್ಟ ಗುರುತನ್ನು ತಂದುಕೊಟ್ಟಿವೆ. ಈ ಸಾಧನೆಗೆ ರಾಷ್ಟ್ರಮಟ್ಟದ ಪ್ರಶಸ್ತಿಯ ಮೂಲಕ ಮನ್ನಣೆ ದೊರೆತಿದೆ.
ಈ ಸಂದರ್ಭದಲ್ಲಿ ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವಾ ಸಂಸ್ಥೆಗಳ ಬ್ಯೂರೋ ಸದಸ್ಯರಾದ ಸತೀಶ ಮರಾಠೆ, ಇಂಡಿಯನ್ ಕೋ-ಆಪರೇಟಿವ್ (ಭಾರತ್ ಸಹಕಾರ) ಪತ್ರಿಕೆಯ ಸಂಪಾದಕ ಅಜಯ್ ಝಾ, ನ್ಯಾಷನಲ್ ಫೆಡರೇಶನ್ ಆಫ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಸ್ ಆ್ಯಂಡ್ ಕ್ರೆಡಿಟ ಸೊಸೈಟೀಸ್ (NAFCUB) ಅಧ್ಯಕ್ಷ ಲಕ್ಷ್ಮೀದಾಸ, ಭಾರತ ಸರ್ಕಾರದ ಸಹಕಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪಂಕಜ ಬನ್ಸಲ್, ಸಹಕಾರಿ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಡಿ.ಕೆ. ಸಿಂಗ, ಇಫ್ಕೋ (IFFCO) ಸಂಸ್ಥೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಯು.ಎಸ್. ಅವಸ್ಥಿ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸಂಸ್ಥೆಯ ನಿರ್ದೇಶಕರಾದ ಕಾಶಿನಾಥ ಕಮತೆ,ಸೇರಿದಂತೆ ಸಹಕಾರ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.




