*15 ದಿನಗಳ ಹಿಂದೆ ಸಿಕ್ಕ ಅಸ್ಥಿಪಂಜರದ ಹಿಂದಿತ್ತು ಕೊಲೆ ರಹಸ್ಯ*: *ಪತ್ನಿಯನ್ನೇ ಮುಗಿಸಿದ ಎರಡನೇ ಪತಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: 15 ದಿನಗಳ ಹಿಂದೆ ಪತ್ತೆಯಾಗಿದ್ದ ಅಸ್ಥಿಪಂಜರವೊಂದು ಕೊಲೆ ಪ್ರಕರಣದ ಭಯಾನಕ ರಹಸ್ಯವನ್ನು ಬಯಲಿಗೆಳೆದಿದೆ. ಸುಮಾರು ಎರಡು ತಿಂಗಳ ಹಿಂದೆ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪತ್ನಿಯನ್ನೇ ಹತ್ಯೆ ಮಾಡಿದ ಆರೋಪದ ಮೇಲೆ ಎರಡನೇ ಪತಿ ಫಯಾಜ್ ಪಾಷಾನನ್ನು ಬಂಧಿಸಿದ್ದಾರೆ.
ನವೆಂಬರ್ 6ರಂದು ಬೆಂಗಳೂರಿನಲ್ಲಿ ಏಳು ಜನರ ಸರಣಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದ ದಿನವೇ, ಕೊಡಿಗೆಹಳ್ಳಿ ಬಳಿಯ ಬಿಬಿಎಂಪಿ ಶಾಲೆಯೊಂದರ ಸಮೀಪ ಅಸ್ಥಿಪಂಜರವೊಂದು ಪತ್ತೆಯಾಗಿತ್ತು. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹದಲ್ಲಿ ಅಸ್ಥಿಪಂಜರ ಮಾತ್ರ ಉಳಿದಿತ್ತು. ಕೂದಲು ಹಾಗೆಯೇ ಇದ್ದ ಕಾರಣ ಅದು ಮಹಿಳೆಯ ಮೃತದೇಹವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು.
ಅಸ್ಥಿಪಂಜರ ಯಾರದ್ದು? ಕೊಲೆಯೋ, ಆತ್ಮಹತ್ಯೆಯೋ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಮೃತದೇಹ ಅಲ್ಲಿಗೆ ಬಂದಿತ್ತೋ ಎಂಬ ಹಲವು ಅನುಮಾನಗಳ ನಡುವೆ ಪೊಲೀಸರು ತನಿಖೆ ಆರಂಭಿಸಿದ್ದರು. ಸಿಸಿಟಿವಿ ದೃಶ್ಯಗಳು ಹಾಗೂ ಸುತ್ತಮುತ್ತಲಿನ ಚಲನವಲನಗಳನ್ನು ಪರಿಶೀಲಿಸಿದಾಗ ಮೃತದೇಹ ಸುಜಾತಾ ಎಂಬ 34 ವರ್ಷದ ಮಹಿಳೆಯದ್ದು ಎಂಬುದು ಪತ್ತೆಯಾಗಿದೆ.
ತನಿಖೆಯಲ್ಲಿ ಸುಜಾತಾಳ ಪತಿ ಫಯಾಜ್ ಪಾಷಾನೇ ಹತ್ಯೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸುಮಾರು ಎರಡು ತಿಂಗಳ ಹಿಂದೆ ಪಾರ್ಕ್ ಬಳಿ ಯಾರೂ ಇಲ್ಲದ ಸಮಯದಲ್ಲಿ ಸುಜಾತಾಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಚೀಲದಲ್ಲಿ ತುಂಬಿ, ಯಾರಿಗೂ ಕಾಣದಂತೆ ಬಚ್ಚಿಟ್ಟು ಹೋಗಿದ್ದ ಎಂಬುದು ಗೊತ್ತಾಗಿದೆ
ಸುಜಾತಾಳ ಮೊದಲ ಪತಿ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದ. ಬಳಿಕ 24 ವರ್ಷದ ಫಯಾಜ್ ಪಾಷಾ ಜೊತೆ ಸಲುಗೆ ಬೆಳೆಸಿಕೊಂಡಿದ್ದ ಸುಜಾತಾ, ಐದು ತಿಂಗಳ ಹಿಂದೆ ಆತನನ್ನು ಮದುವೆಯಾಗಿದ್ದಳು. ಆದರೆ ಸುಜಾತಾಳ ನಡವಳಿಕೆ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಫಯಾಜ್, ಆಕೆಯೊಂದಿಗೆ ಜಗಳವಾಡಿ ದೂರವಾಗಿದ್ದ.
ದಂಪತಿ ನಡುವೆ ಜಗಳವಾದ ಬಳಿಕ ಮತ್ತೆ ಒಟ್ಟಿಗೆ ಬದುಕೋಣ ಎಂದು ಸುಜಾತಾಳೇ ಫಯಾಜ್ನನ್ನು ಕರೆತಂದಿದ್ದಳು. ಆದರೆ ಆತ ಮರಳಿದ ಬಳಿಕವೂ ಇಬ್ಬರ ನಡುವಿನ ಗಲಾಟೆ ಮುಂದುವರಿದಿತ್ತು. ಇದೇ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 6ರಂದು ಅಸ್ಥಿಪಂಜರ ಪತ್ತೆಯಾದ ಬಳಿಕ ಆರಂಭವಾದ ತನಿಖೆ, ಎರಡು ತಿಂಗಳ ಹಿಂದಿನ ಕೊಲೆ ಪ್ರಕರಣವನ್ನು ಬಯಲಿಗೆಳೆದಿದೆ. ಸದ್ಯ ಆರೋಪಿ ಫಯಾಜ್ ಪಾಷಾನನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



