Kannada NewsKarnataka NewsLatest

*ಡ್ರೋನ್ ಕಣ್ಣಿಗೆ ಬಿದ್ದ 32 ಕಾಡಾನೆಗಳು*: *ಗಜಪಡೆಯನ್ನು ಓಡಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ*

ಪ್ರಗತಿವಾಹಿನಿ ಸುದ್ದಿ: ಬೇಲೂರು ತಾಲೂಕಿನಲ್ಲಿ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸುವ ಹಾಗೂ ಗುಂಪು ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಹಗಲು ವೇಳೆ ಕಾಫಿ ತೋಟಗಳಲ್ಲಿ ಕಾರ್ಮಿಕರು ಕಾಫಿ ಕೊಯ್ಲು ಮಾಡುತ್ತಿರುವುದರಿಂದ ಯಾವುದೇ ಅನಾಹುತ ಸಂಭವಿಸದಂತೆ ಸಂಜೆ 5 ಗಂಟೆಯಿಂದ ಕಾರ್ಯಾಚರಣೆ ಆರಂಭಿಸಲಾಗಿದೆ.

ಸತತ ಮೂರು ದಿನಗಳ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಇಂದು ಸಂಜೆಯವರೆಗೂ ಕುಮ್ಕಿ ಸಾಕಾನೆಗಳಿಗೆ ವಿಶ್ರಾಂತಿ ನೀಡಲಾಗಿತ್ತು. ನಿನ್ನೆ ಸೆರೆಹಿಡಿದ ಎರಡು ಸಲಗಗಳನ್ನು ನಾಗರಹೊಳೆಗೆ ಬಿಡಲು ನಾಲ್ಕು ಕುಮ್ಕಿ ಆನೆಗಳು ತೆರಳಿದ್ದವು. ಈ ನಡುವೆ ಬಿಕ್ಕೋಡು ತಾತ್ಕಾಲಿಕ ಕ್ಯಾಂಪ್‌ಗೆ ಸಕ್ಕರೆಬೈಲು ಕ್ಯಾಂಪ್‌ನಿಂದ ಜೂ. ಅರ್ಜುನ, ಭೀಷ್ಮ, ಸಾಗರ್ ಹಾಗೂ ರಾಮಾಪುರ ಕ್ಯಾಂಪ್‌ನಿಂದ ಪಾರ್ಥಸಾರಥಿ ಮತ್ತು ಧರ್ಮ ಆಗಮಿಸಿವೆ.

ಒಟ್ಟು 12 ಕುಮ್ಕಿ ಆನೆಗಳ ನೆರವಿನೊಂದಿಗೆ ಸಂಜೆ ಗುಂಪು ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಯುತ್ತಿದೆ. ಕ್ಯಾಂಪ್‌ನಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿರುವ ಶೆಟ್ಟಿಹಳ್ಳಿ ಗ್ರಾಮದ ಬಳಿ 20ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ. ಈ ಆನೆಗಳನ್ನು ನಿಧಾನವಾಗಿ ಭದ್ರ ಅಭಯಾರಣ್ಯದತ್ತ ಓಡಿಸಲಾಗುತ್ತಿದೆ.

ಕಾರ್ಯಾಚರಣೆಯಲ್ಲಿ ವಿರೋಧ ತೋರುವ ಗುಂಪಿನ ಗಂಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ 350ರಿಂದ 400 ಅರಣ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದಾರೆ.

ಕಾರ್ಯಾಚರಣೆ ಆರಂಭಕ್ಕೂ ಮುನ್ನ ಎಪಿಸಿಸಿಎಫ್ ಮನೋಜ್ ರಾಜನ್ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಡ್ರೋನ್ ಕ್ಯಾಮೆರಾದಲ್ಲಿ ಒಟ್ಟು 32 ಕಾಡಾನೆಗಳು ಸೆರೆಯಾಗಿದ್ದು, ಅವುಗಳ ಗುಂಪನ್ನು ಓಡಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಗ್ರಾಮಸ್ಥರು, ಸಿಬ್ಬಂದಿ ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಮನೋಜ್ ರಾಜನ್, ಯಾರಿಗೂ ತೊಂದರೆಯಾಗದಂತೆ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದ್ದಾರೆ.

Related Articles

Back to top button