*ಪೊಲೀಸ್ ಅಧಿಕಾರಿಗಳ ಆಸ್ತಿ ವ್ಯವಹಾರಕ್ಕೆ ಡಿಕೆಶಿ ಬ್ರೇಕ್*: *ಬೇನಾಮಿ ಆಸ್ತಿ ಹೊಂದಿದವರಿಗೆ ಖಡಕ್ ಎಚ್ಚರಿಕೆ!*

ಪ್ರಗತಿವಾಹಿನಿ ಸುದ್ದಿ: ಪೊಲೀಸ್ ಇಲಾಖೆಯಲ್ಲಿ ಯಾವುದೇ ಒತ್ತಡ, ಪ್ರಭಾವ ಅಥವಾ ರಾಜಕೀಯ ಶಿಫಾರಸಿಗೆ ಅವಕಾಶವಿಲ್ಲ. ಜನರ ಸೇವೆ ಮಾಡಬೇಕಾದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಇಲ್ಲವಾದರೆ ಅಧಿಕಾರದ ಕುರ್ಚಿಯಲ್ಲಿ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಎಚ್ಚರಿಕೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹೊಸದಾಗಿ ನೇಮಕಗೊಂಡಿರುವ ಐವರು ಪೊಲೀಸ್ ಕಮಿಷನರೇಟ್‌ಗಳ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. “ನೀವು ಯಾರಿಗೂ ಒಂದು ರೂಪಾಯಿ ಲಂಚ ಕೊಟ್ಟು ಈ ಹುದ್ದೆಗೆ ಬಂದಿಲ್ಲ. ಹೀಗಾಗಿ ಪರ್ಫೆಕ್ಟ್ ಆಗಿ ಕೆಲಸ ಮಾಡಿ. ಹೊಸದಾಗಿ ಬಂದಿದ್ದೇವೆ, ಒಂದು ವರ್ಷ ಯಾರೂ ಏನೂ ಮಾಡಲಾಗುವುದಿಲ್ಲ ಎಂದುಕೊಂಡಿದ್ದರೆ ಅದು ನಿಮ್ಮ ಭ್ರಮೆ. ಸರಿಯಾಗಿ ಕೆಲಸ ಮಾಡದಿದ್ದರೆ ಒಂದೇ ಗಂಟೆಯೊಳಗೆ ಬದಲಾವಣೆ ಮಾಡುತ್ತೇವೆ” ಎಂದು ಎಚ್ಚರಿಸಿದ್ದಾರೆ.
ಜನರಿಗೆ ಪೊಲೀಸರ ಮೇಲೆ ಭಕ್ತಿ, ಗೌರವದ ಜೊತೆಗೆ ಅಪರಾಧಿಗಳಲ್ಲಿ ಭಯವೂ ಇರಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಉದ್ದೇಶದಿಂದ ಐದು ಕಮಿಷನರೇಟ್‌ಗಳನ್ನು ರಚಿಸಲಾಗಿದೆ. ಆರ್ಥಿಕ ಅಪರಾಧ, ಸಂಚಾರ ನಿಯಮ ಉಲ್ಲಂಘನೆ, ಕ್ರೈಂ ಹಾಗೂ ದ್ವೇಷ ಭಾಷಣ ಸೇರಿದಂತೆ ಎಲ್ಲ ರೀತಿಯ ಅಪರಾಧಗಳನ್ನು ನಿಯಂತ್ರಿಸಬೇಕು. ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ.
ಬೆಂಗಳೂರು ಈಗ ಜಾಗತಿಕ ನಗರವಾಗಿ ಬೆಳೆದಿದೆ. ನ್ಯೂಯಾರ್ಕ್ ಟೈಮ್ಸ್ ಕೂಡ ಬೆಂಗಳೂರಿನ ಬಗ್ಗೆ ಬರೆಯುತ್ತದೆ. ಇಂತಹ ನಗರದ ಘನತೆ ಹೆಚ್ಚಿಸುವ ರೀತಿಯಲ್ಲಿ ಪೊಲೀಸರು ಕೆಲಸ ಮಾಡಬೇಕು. ಸರ್ಕಾರಕ್ಕೂ ಉತ್ತಮ ಹೆಸರು ತರುವಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕೆಲವು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಕರ್ತವ್ಯ ನಿರ್ವಹಿಸುವ ಬದಲು ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ. ಕುಟುಂಬ ಸದಸ್ಯರ ಹೆಸರಿನಲ್ಲಿ ಎಕರೆಗಟ್ಟಲೆ ಜಮೀನು ನೋಂದಣಿ ಮಾಡಿಸಿಕೊಂಡು ಬೇನಾಮಿ ಆಸ್ತಿ ಗಳಿಸುತ್ತಿದ್ದಾರೆ. ಈ ಬಗ್ಗೆ ತಮ್ಮ ಬಳಿ ಸಂಪೂರ್ಣ ಮಾಹಿತಿ ಇದೆ ಎಂದು ಡಿಕೆ ಶಿವಕುಮಾರ್ ಎಚ್ಚರಿಸಿದರು.
ಸೈಬರ್ ಕ್ರೈಂ, ಆನ್‌ಲೈನ್ ವಂಚನೆ ಹಾಗೂ ಡ್ರಗ್ಸ್ ಮಾಫಿಯಾವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ವ್ಯವಹಾರದ ಕೇಂದ್ರಗಳಾಗಬಾರದು. ಎಲ್ಲರೂ ತಂಡವಾಗಿ ಕೆಲಸ ಮಾಡಬೇಕು. ಅಧಿಕಾರಿಗಳಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಉತ್ತಮ ಅವಕಾಶ ನೀಡಲಾಗಿದೆ. ಸರ್ಕಾರಕ್ಕೆ ಪರ್ಫಾರ್ಮೆನ್ಸ್, ಗವರ್ನನ್ಸ್ ಮತ್ತು ಅಕೌಂಟೆಬಿಲಿಟಿ ಮುಖ್ಯ ಎಂದು ಖಡಕ್ ಸಂದೇಶ ನೀಡಿದರು.




