Kannada NewsLatestNational

*ಶಾಲಾ ಬಸ್ ಗೆ ಟ್ರಕ್ ಡಿಕ್ಕಿ*: *ನಾಲ್ವರು ವಿದ್ಯಾರ್ಥಿಗಳು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದಿದ್ದ ಶಾಲಾ ಬಸ್ ಗೆ ವೇಗವಾಗಿ ಬಂದ ಟ್ರಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಆಗ್ರಾದ ತಾಜ್ ಮಹಲ್ ಪ್ರವಾಸಕ್ಕೆ ತೆರಳಿ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇಂದು ಬೆಳಗಿನ ಜಾವ ಲಕ್ನೋ–ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಈ ದುರಂತ ಸಂಭವಿಸಿದೆ.

ಕನ್ನೌಜ್ ಜಿಲ್ಲೆಯ ಥಾಥಿಯಾ ಪ್ರದೇಶದ ಬಳಿ ಬೆಳಗ್ಗೆ ಸುಮಾರು 6 ಗಂಟೆಗೆ ಅಪಘಾತ ನಡೆದಿದೆ. ಕೌಶಂಬಿ ಜಿಲ್ಲೆಯ ಓರಿಯಂಟಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಆಗ್ರಾದ ತಾಜ್ ಮಹಲ್ ವೀಕ್ಷಿಸಿ ವಾಪಸ್ ಬರುತ್ತಿದ್ದರು. ಬಸ್‌ನಲ್ಲಿ ಸುಮಾರು 50 ಮಂದಿ ಪ್ರಯಾಣಿಸುತ್ತಿದ್ದರು.

ಪ್ರಯಾಣದ ವೇಳೆ ಮಕ್ಕಳಿಗೆ ಶೌಚಾಲಯ ಬಳಸಲು ಅನುಕೂಲವಾಗಲೆಂದು ಚಾಲಕ ಎಕ್ಸ್‌ಪ್ರೆಸ್‌ವೇಯ ರಸ್ತೆಬದಿಯಲ್ಲಿ ಬಸ್ ನಿಲ್ಲಿಸಿದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. 32 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಕ್ಕಿಯ ರಭಸಕ್ಕೆ ಬಸ್‌ನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ಗಾಯಾಳುಗಳನ್ನು ಆಂಬ್ಯುಲೆನ್ಸ್‌ಗಳ ಮೂಲಕ ಹತ್ತಿರದ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯ್ತನಿಖೆ ನಡೆಸಿದ್ದಾರೆ.

Related Articles

Back to top button