Kannada NewsKarnataka NewsLatest

*ಕಣ್ಣೆದುರೇ ನಾಶವಾದ ಕಾಫಿ ತೋಟ*: *‘ನನ್ನನ್ನೂ ಆನೆ ತುಳಿದು ಸಾಯಿಸಲಿ’ ಎಂದು ಕಣ್ಣೀರಿಟ್ಟು ತೋಟದಲ್ಲೇ ಕುಳಿತ ರೈತ*

ಪ್ರಗತಿವಾಹಿನಿ ಸುದ್ದಿ: ಕಾಡಾನೆಗಳ ಹಾವಳಿ ರೈತರ ಬದುಕನ್ನೇ ಕಸಿದುಕೊಳ್ಳುತ್ತಿದೆ. ವರ್ಷಗಳ ಕಾಲ ಮಕ್ಕಳಂತೆ ಬೆಳೆಸಿದ ಕಾಫಿ ತೋಟ ಕ್ಷಣಾರ್ಧದಲ್ಲಿ ನಾಶವಾಗಿದೆ. ಬೆಳೆ ಕಳೆದುಕೊಂಡ ರೈತ ಈಗ ತೋಟದಲ್ಲೇ ಕುಳಿತು ಕಣ್ಣೀರು ಹಾಕುತ್ತಿದ್ದಾರೆ. “ನನ್ನನ್ನೂ ಆನೆಗಳು ತುಳಿದು ಸಾಯಿಸಲಿ” ಎಂಬ ಅವರ ನೋವಿನ ಮಾತು ಮನಕಲಕುವಂತಿದೆ. ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಕಾಡಾನೆಗಳ ಉಪಟಳ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಮೂಡಿಗೆರೆ ತಾಲೂಕಿನ ಕಾರ್ಗಲ್ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ನುಗ್ಗಿ ಗಿಡಗಳನ್ನು ಸಂಪೂರ್ಣವಾಗಿ ನಾಶ ಮಾಡಿವೆ. ಇದರಿಂದ ತೋಟದ ಮಾಲೀಕ ಪ್ರಹ್ಲಾದ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳಂತೆ ಬೆಳೆಸಿದ ತೋಟ ಕಳೆದುಕೊಂಡ ನೋವಿನಲ್ಲಿ, ತೋಟದಲ್ಲೇ ಕುಳಿತು ಪ್ರತಿಭಟನೆಯ ರೀತಿಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

“ನನಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಮೂರು ಎಕರೆ ಕಾಫಿ ತೋಟವನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೆ. ಈಗ ಬೇಲೂರಿನಿಂದ ಬಂದ ಆನೆಗಳು ತೋಟದ ಮೇಲೆ ದಾಳಿ ಮಾಡಿ ಹಾನಿ ಮಾಡಿವೆ. ನನ್ನನ್ನೂ ಆನೆಗಳು ತುಳಿದು ಸಾಯಿಸಲಿ. ನಾನು ಮತ್ತು ನನ್ನ ಹೆಂಡತಿ ಎಲ್ಲಿಗೂ ಹೋಗುವುದಿಲ್ಲ. ಇಲ್ಲೇ ಇರುತ್ತೇವೆ” ಎಂದು ಪ್ರಹ್ಲಾದ್ ನೋವು ತೋಡಿಕೊಂಡಿದ್ದಾರೆ.

ಸ್ಥಳೀಯರು ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತನ ಮನವೊಲಿಸಲು ಪ್ರಯತ್ನಿಸಿದ್ದಾರೆ. ಇದೇ ವೇಳೆ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಬಳಿಯ ನಾಗಲಾಪುರದಲ್ಲಿ ಸುಪ್ರೀತ್ ಎಂಬುವವರ ಮೂರು ಎಕರೆ ಗದ್ದೆ ಮತ್ತು ತೋಟಕ್ಕೂ ಕಾಡಾನೆಗಳು ದಾಳಿ ಮಾಡಿ ಅಪಾರ ಹಾನಿ ಉಂಟುಮಾಡಿವೆ. ಗದ್ದೆಯ ಸ್ಥಿತಿ ಕಂಡು ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

39 ಕಾಡಾನೆಗಳ ಹಿಂಡು ನಾಲ್ಕು ಗುಂಪುಗಳಾಗಿ ಚದುರಾಟ

ಬೀಟಮ್ಮ, ಭುವನೇಶ್ವರಿ ಮತ್ತು ಓಲ್ಡ್ ಬೆಲ್ಟ್ ಎಂಬ ಹೆಸರಿನ ಆನೆಗಳು ಸೇರಿದಂತೆ ಒಟ್ಟು 39 ಕಾಡಾನೆಗಳು ನಾಲ್ಕು ಗುಂಪುಗಳಾಗಿ ಚದುರಿವೆ. ಈ ಹಿಂಡುಗಳು ವಿವಿಧ ಗ್ರಾಮಗಳ ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ.

ಮೊದಲ ಗುಂಪು ಮಾಕೋನಹಳ್ಳಿ ಗ್ರಾಮದ ಬಳಿ ಬೀಡುಬಿಟ್ಟಿದ್ದರೆ, ಎರಡನೇ ಗುಂಪು ಕಾರ್ ಬೈಲು ಗ್ರಾಮದ ಬಳಿ ಇದೆ. ಮೂರನೇ ಗುಂಪು ಕಸ್ಕೆಬೈಲು ಗ್ರಾಮದಲ್ಲಿದ್ದು, ನಾಲ್ಕನೇ ಗುಂಪು ಕಲ್ಲುಗುಡ್ಡ ಗ್ರಾಮದಲ್ಲಿ ಬೀಡುಬಿಟ್ಟಿದೆ. ಈ ಆನೆಗಳ ನಿರಂತರ ಓಡಾಟದಿಂದ 50ಕ್ಕೂ ಹೆಚ್ಚು ಗ್ರಾಮಗಳ ಜನರು ಆತಂಕದಲ್ಲಿದ್ದಾರೆ.

ಕಾಫಿ ಕೊಯ್ಲಿನ ಸಮಯದಲ್ಲೇ ಕಾಡಾನೆಗಳ ಸಂಚಾರ ಹೆಚ್ಚಾಗಿರುವುದರಿಂದ ಎಚ್ಚರಿಕೆಯಿಂದ ಇರುವಂತೆ ಅರಣ್ಯಾಧಿಕಾರಿಗಳು ಸೂಚಿಸಿದ್ದಾರೆ. ಕಾಫಿ ತೋಟಗಳಿಗೆ ತೆರಳದಂತೆಯೂ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ವರ್ಷಗಳ ಪರಿಶ್ರಮದಿಂದ ಬೆಳೆಸಿದ ತೋಟಗಳು ಕಾಡಾನೆಗಳ ದಾಳಿಗೆ ನಾಶವಾಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ಒಂಟಿ ಸಲಗ ಸೆರೆಗೆ ಕಾರ್ಯಾಚರಣೆ

ಇನ್ನೊಂದೆಡೆ, ಹಾಸನ ಭಾಗದಿಂದ ಚಿಕ್ಕಮಗಳೂರು ನಗರದೆಡೆಗೆ ಬಂದಿರುವ ಒಂಟಿ ಸಲಗದ ಉಪಟಳವೂ ಹೆಚ್ಚಾಗಿದೆ. ಈ ಸಲಗವನ್ನು ಸೆರೆ ಹಿಡಿಯಲು ರಾಜ್ಯ ಸರ್ಕಾರ ಆದೇಶಿಸಿದೆ. ಬೆಳಗ್ಗೆಯಿಂದಲೇ ಗುಂಪಿನಿಂದ ಬೇರ್ಪಟ್ಟು ಓಡಾಡುತ್ತಿರುವ ಆನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿದೆ.

ಬೇಲೂರು ಕ್ಯಾಂಪ್‌ನಲ್ಲಿರುವ ಆರು ಕುಮ್ಕಿ ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾಡಾನೆಗಳ ಹಾವಳಿಯಿಂದ ಜನಜೀವನ ಮತ್ತು ಕೃಷಿ ಎರಡೂ ಸಂಕಷ್ಟಕ್ಕೆ ಸಿಲುಕಿದ್ದು, ರೈತರಿಗೆ ಶಾಶ್ವತ ಪರಿಹಾರ ಯಾವಾಗ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

Related Articles

Back to top button