*ನಾಗೇಂದ್ರಗೆ ಕ್ಲೀನ್ ಚಿಟ್ ನೀಡಿದ್ದೇಕೆ?*: *ಸಿಐಡಿ ತನಿಖೆಯನ್ನೇ ಪ್ರಶ್ನಿಸಿದ ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ: ವಾಲ್ಮೀಕಿ ನಿಗಮ ಹಗರಣದ ತನಿಖೆ ಇದೀಗ ಮತ್ತೊಂದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಸಿಐಡಿ ಕ್ಲೀನ್ ಚಿಟ್ ನೀಡಿರುವುದನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಪ್ರಶ್ನಿಸಿದ್ದಾರೆ. ಸಿಬಿಐ ಮತ್ತು ಇಡಿ ತನಿಖೆ ನಡೆಸಿದರೆ ನಾಗೇಂದ್ರ ಸಿಕ್ಕಿಬೀಳುತ್ತಾರೆ ಎಂಬ ಆರೋಪವನ್ನೂ ಮಾಡಿದ್ದಾರೆ. ಇದೇ ವೇಳೆ ಕೆಪಿಎಸ್ಸಿ ಅಕ್ರಮದ ವಿಚಾರ ಪ್ರಸ್ತಾಪಿಸಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾಗೇಂದ್ರ ಅವರಿಗೆ ಯಾವ ಆಧಾರದ ಮೇಲೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಪ್ರಶ್ನಿಸಿದರು. “ಇದಕ್ಕಿಂತ ಬೇಕಾ ಪ್ರಿಯಾಂಕ್ ಖರ್ಗೆ ಅವರೇ? ಸಿಬಿಐ, ಇಡಿ ಕೇಸ್ನಲ್ಲಿ ನಾಗೇಂದ್ರ ಅವರನ್ನು ಫಿಕ್ಸ್ ಮಾಡುತ್ತಾರೆ. ಇಲ್ಲಿ ನೀವು ಕ್ಲೀನ್ ಚಿಟ್ ಕೊಡುತ್ತೀರಾ? ಯಾರೋ ಅಧಿಕಾರಿಗಳನ್ನು ಮಾತ್ರ ಆರೋಪಿಗಳನ್ನಾಗಿ ಮಾಡಿದ್ದೀರಾ?” ಎಂದು ಕಿಡಿಕಾರಿದರು.
ಸಿಐಡಿ ಯಾವ ರೀತಿಯಲ್ಲಿ ತನಿಖೆ ನಡೆಸಿದೆ? ಯಾವ ಆಧಾರದ ಮೇಲೆ ಕ್ಲೀನ್ ಚಿಟ್ ನೀಡಿದೆ? ತನಿಖೆಯಲ್ಲಿ ಎಷ್ಟು ಪಾರದರ್ಶಕತೆ ಇದೆ ಎಂದು ಪ್ರಶ್ನಿಸಿದ ಅವರು, ಅಕ್ರಮ ನಡೆದಿದೆ ಎಂದು ಸಚಿವರು ಮತ್ತು ಮುಖ್ಯಮಂತ್ರಿಗಳೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಹಾಗಿದ್ದರೂ ತನಿಖೆ ನಡೆಸಲು ಇಷ್ಟು ವರ್ಷ ಬೇಕಿತ್ತಾ? ಈಗ ದಿಢೀರ್ ಕ್ಲೀನ್ ಚಿಟ್ ನೀಡಿದ್ದೇಕೆ ಎಂದು ಪ್ರಶ್ನಿಸಿದರು.
ಇದೇ ವೇಳೆ ಕೆಪಿಎಸ್ಸಿ ಅಕ್ರಮದ ವಿಚಾರವನ್ನೂ ಪ್ರಸ್ತಾಪಿಸಿದ ಕುಮಾರಸ್ವಾಮಿ, ಇಡಿ ತನಿಖೆ ನಡೆಸದೇ ಇದ್ದಿದ್ದರೆ ಈ ಅಕ್ರಮ ಹೊರಬರುತ್ತಿರಲಿಲ್ಲ ಎಂದು ಆರೋಪಿಸಿದರು. ಐಎಎಸ್ ಅಧಿಕಾರಿ ಜ್ಞಾನೇಂದ್ರ ದೆಹಲಿಗೆ ತೆರಳಲು ಅನುಮತಿ ನೀಡಿದ್ದ ವಿಚಾರವನ್ನು ಉಲ್ಲೇಖಿಸಿ, ಆ ವ್ಯಕ್ತಿಯ ವಿರುದ್ಧದ ಆರೋಪಗಳ ಬಗ್ಗೆ ಇಲಾಖೆಗೆ ಮಾಹಿತಿ ಇರಲಿಲ್ಲವೇ ಎಂದು ಪ್ರಶ್ನಿಸಿದರು. ಇಡಿ ತನಿಖೆಯಿಂದಲೇ ಪ್ರಕರಣದ ಹಲವು ಸಂಗತಿಗಳು ಹೊರಬಂದಿವೆ. ಸಿಐಡಿ ತನಿಖೆ ನಡೆಸಿದ್ದರೆ ಏನಾಗುತ್ತಿತ್ತು ಎಂದು ಜನರಿಗೆ ತಿಳಿಸಿ ಎಂದು ಸವಾಲು ಹಾಕಿದರು.
ಕೆಪಿಎಸ್ಸಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳಲ್ಲೂ ದಾಖಲೆಗಳನ್ನು ನೀಡುವಂತೆ ಕೇಳಲಾಗಿತ್ತು. ತಾವು ದಾಖಲೆಗಳನ್ನು ನೀಡಿದ್ದಾಗಿ ಹೇಳಿದ ಕುಮಾರಸ್ವಾಮಿ, ಎಇಇಗಳ ಅಕ್ರಮ ನೇಮಕಾತಿ ವಿಚಾರವನ್ನು ಪ್ರಸ್ತಾಪಿಸಿದರು. ತರಾತುರಿಯಲ್ಲಿ ಸಚಿವರಾಗಿ 24 ಮಂದಿಗೆ ನೇಮಕಾತಿ ಪತ್ರ ನೀಡಿದ್ದೇಕೆ ಎಂದು ಪ್ರಶ್ನಿಸಿದರು.
ಈ ಪ್ರಕರಣ ಕೋರ್ಟ್ನಲ್ಲಿ ಎರಡು ವರ್ಷಗಳಿಂದ ನಡೆಯುತ್ತಿದ್ದರೂ ಸರ್ಕಾರ ಸರಿಯಾದ ಮಾಹಿತಿ ನೀಡದೆ ವಿಚಾರಣೆಯನ್ನು ಮುಂದೂಡುತ್ತಿದೆ ಎಂದು ಆರೋಪಿಸಿದರು. 24 ಮಂದಿಗೆ ರಕ್ಷಣೆ ನೀಡುತ್ತಿರುವವರು ಯಾರು? ಇಡಿ ದೂರು ನೀಡಿದ್ದರೂ ಕ್ರಮ ಕೈಗೊಳ್ಳದಿರುವುದೇಕೆ ಎಂದು ಪ್ರಿಯಾಂಕ್ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡರು.
ಇನ್ನೊಂದೆಡೆ, ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೂ ಕುಮಾರಸ್ವಾಮಿ ಬೆಂಬಲ ವ್ಯಕ್ತಪಡಿಸಿದರು. ಅವರ ಬೇಡಿಕೆ ನ್ಯಾಯಯುತವಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಆರೋಪ-ಪ್ರತ್ಯಾರೋಪ ಮಾಡುವುದಕ್ಕಿಂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಮುಖ್ಯ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಸಿಬ್ಬಂದಿಗೆ ಗೌರವಧನ ಹೆಚ್ಚಿಸಲು ಸರ್ಕಾರಕ್ಕೆ ಸುಮಾರು 250ರಿಂದ 350 ಕೋಟಿ ರೂಪಾಯಿ ಬೇಕಾಗಬಹುದು. ಬಿಸಿಯೂಟ ಸಿಬ್ಬಂದಿಯ ಗೌರವಧನವನ್ನೂ ಹೆಚ್ಚಿಸಿದರೆ ಹೆಚ್ಚುವರಿಯಾಗಿ ಸುಮಾರು 100 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಅವರು ಲೆಕ್ಕಾಚಾರ ಮುಂದಿಟ್ಟರು.
ಸರ್ಕಾರದ ಕಾಮಗಾರಿಗಳಲ್ಲಿ ಪರ್ಸೆಂಟೇಜ್ ವಸೂಲಿ ನಿಲ್ಲಿಸಿದರೆ ಇಂತಹ ಬೇಡಿಕೆಗಳನ್ನು ಈಡೇರಿಸಲು ಹಣ ಹೊಂದಿಸಬಹುದು ಎಂದು ಆರೋಪಿಸಿದ ಅವರು, ವರ್ಕ್ ಆರ್ಡರ್ ಮತ್ತು ಬಿಲ್ ಪ್ರಕ್ರಿಯೆಗಳಲ್ಲಿ ನಡೆಯುವ ಅಕ್ರಮಗಳನ್ನು ನಿಯಂತ್ರಿಸುವಂತೆ ಒತ್ತಾಯಿಸಿದರು.
ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ಕೆಲಸ ನಡೆಯುತ್ತದೆ ಎಂಬ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, “ಇಷ್ಟು ವರ್ಷ ಅವರ ಕೈಯಲ್ಲಿ ಕೆಲಸ ಮಾಡಿಸಿದ್ದೇಕೆ? ಮೂರು ವರ್ಷದಿಂದ ಕೆಲಸ ಮಾಡಿಸಿದ್ದೇಕೆ? ತೆಗೆದುಹಾಕಿ ಅವರನ್ನು” ಎಂದು ವ್ಯಂಗ್ಯವಾಡಿದರು.
ಚುನಾವಣಾ ಪ್ರಣಾಳಿಕೆಯಲ್ಲಿ 15 ಸಾವಿರ ರೂಪಾಯಿ ಗೌರವಧನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈಗ ಅವರ ಬೇಡಿಕೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು. ಇಂತಹ ಮುಖ್ಯಮಂತ್ರಿ ಮತ್ತು ಸಚಿವರ ಆಡಳಿತ ಅನ್ಫಿಟ್ ಎಂದು ಟೀಕಿಸಿದರು.
ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದ ಜನರನ್ನು ಕೂರಿಸಿಕೊಂಡು ಮಾತನಾಡುವ ಸೌಜನ್ಯವೂ ಸರ್ಕಾರಕ್ಕೆ ಇಲ್ಲವೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಪಾನ್ನಿಂದ ಮರಳಿದ ಬಳಿಕ ಸಮಸ್ಯೆಗೆ ಪರಿಹಾರ ನೀಡಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಹೇಳಿಕೆಗಳನ್ನು ಗಮನಿಸಿದರೆ ಅವರಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದು ವ್ಯಂಗ್ಯವಾಡಿದ ಅವರು, ಜನರ ಕಷ್ಟಗಳನ್ನು ಅರ್ಥಮಾಡಿಕೊಳ್ಳುವ ಮನಸ್ಸು ಸರ್ಕಾರಕ್ಕೆ ಇದೆಯೇ ಎಂದು ಪ್ರಶ್ನಿಸಿದರು. ಚಿನ್ನ, ಬೆಳ್ಳಿ ತೂಕದ ಕುರಿತ ಹೇಳಿಕೆಯನ್ನು ಉಲ್ಲೇಖಿಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇಂತಹ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷವೇ ತನ್ನ ರಾಜಕೀಯ ನೆಲೆಯನ್ನು ದುರ್ಬಲಗೊಳಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು.




