Belagavi NewsBelgaum NewsKarnataka NewsLatest

*ಪತ್ರಕರ್ತೆ ಸುನಿತಾ ದೇಸಾಯಿಗೆ ‘ಸೇವಾರತ್ನ’ ಪ್ರಶಸ್ತಿ*

ನಾಗನೂರು ರುದ್ರಾಕ್ಷಿಮಠದಿಂದ ಗೌರವ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬಡ ಮಕ್ಕಳಿಗೆ ಅನ್ನ, ಆಶ್ರಯ ಒದಗಿಸಲು ಉಚಿತ ಪ್ರಸಾದ ನಿಲಯ ಆರಂಭಿಸಿದ್ದ ಡಾ. ಶಿವಬಸವ ಮಹಾಸ್ವಾಮೀಜಿ ಅವರ 137ನೇ ಜಯಂತಿ ಮಹೋತ್ಸವದಲ್ಲಿ ಬೆಳಗಾವಿಯ ಹಿರಿಯ ಪತ್ರಕರ್ತೆ ಸುನಿತಾ ದೇಸಾಯಿ ಅವರಿಗೆ ‘ಸೇವಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ನಾಗನೂರು ಶ್ರೀ ರುದ್ರಾಕ್ಷಿಮಠ ನೀಡುವ ಈ ಪ್ರಶಸ್ತಿಯು ₹25 ಸಾವಿರ ನಗದು, ಪ್ರಶಸ್ತಿಪತ್ರ ಮತ್ತು ಫಲಕವನ್ನು ಒಳಗೊಂಡಿದೆ. ಡಿಸೆಂಬರ್ 8ರಂದು ಬೆಳಿಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ದೇಸಾಯಿ ಅವರನ್ನು ಗೌರವಿಸಲಾಗುವುದು ಎಂದು ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ತಿಳಿಸಿದ್ದಾರೆ.

ಡಿ. 6ರಿಂದ ಮೂರು ದಿನ ಜಯಂತಿ ಮಹೋತ್ಸವ

ಬೆಳಗಾವಿಯಲ್ಲಿ ಡಿಸೆಂಬರ್ 6, 7 ಮತ್ತು 8ರಂದು ಜಯಂತಿ ಮಹೋತ್ಸವ ನಡೆಯಲಿದೆ. ಈ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸಲಾಗುವುದು ಎಂದು ಮಠ ತಿಳಿಸಿದೆ.


ಕರ್ನಾಟಕ ಏಕೀಕರಣ ಮತ್ತು ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದ ಶಿವಬಸವ ಮಹಾಸ್ವಾಮೀಜಿ ಅವರು ಗಡಿಭಾಗದಲ್ಲಿ ‘ನಾಗನೂರು ಸ್ವಾಮೀಜಿ’ ಎಂದೇ ಜನಪ್ರಿಯರಾಗಿದ್ದರು. 1932ರಲ್ಲೇ ಬಡ ಮಕ್ಕಳಿಗಾಗಿ ಉಚಿತ ಪ್ರಸಾದ ನಿಲಯ ಆರಂಭಿಸಿದ್ದ ಅವರು ಜಾತಿ, ಮತ, ಪಂಥಗಳ ಭೇದವಿಲ್ಲದೆ ಅನ್ನ ಮತ್ತು ಆಶ್ರಯ ಒದಗಿಸಿದ್ದರು. ಏಳು ದಶಕಗಳ ಕಾಲ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು ಎಂದು ಮಠದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Related Articles

Back to top button