ಮುಸ್ಲಿಮರಿಗೆ ಡಿಸಿಎಂ ಪಟ್ಟ, ಮಹಿಳೆಯರಿಗೆ ₹25 ಸಾವಿರ: ಓವೈಸಿ-ಚಂದ್ರಶೇಖರ್ ಮೈತ್ರಿಯ ಹೊಸ ಲೆಕ್ಕಾಚಾರ ಏನು?

ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನ ರಾಜಕೀಯ ಲೆಕ್ಕಾಚಾರಗಳು ಬದಲಾಗುವ ಸೂಚನೆ ಸಿಕ್ಕಿದೆ. ಎಐಎಂಐಎಂ ಮತ್ತು ಆಜಾದ್ ಸಮಾಜ ಪಕ್ಷದ ಮೈತ್ರಿಕೂಟ ಹೊಸ ಅಧಿಕಾರ ಹಂಚಿಕೆ ಸೂತ್ರ ಪ್ರಕಟಿಸಿದೆ. ತಾವು ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಚಂದ್ರಶೇಖರ್ ಆಜಾದ್ ಘೋಷಿಸಿದ್ದಾರೆ. ಮಹಿಳೆಯರಿಗೆ ತಿಂಗಳಿಗೆ 25 ಸಾವಿರ ರೂಪಾಯಿ ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ.
2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಅಸಾದುದ್ದೀನ್ ಓವೈಸಿ ಮತ್ತು ಚಂದ್ರಶೇಖರ್ ಆಜಾದ್ ನೇತೃತ್ವದ ಸಾಮಾಜಿಕ ಪರಿವರ್ತನಾ ಮೋರ್ಚಾ (SPM) ಮೈತ್ರಿಕೂಟ ಲಕ್ನೋದಲ್ಲಿ ಬೃಹತ್ ಸಮಾವೇಶ ನಡೆಸಿದೆ. ಸಂವಿಧಾನ ದಿನದ ಅಂಗವಾಗಿ ನಡೆದ ಈ ಸಭೆಯಲ್ಲಿ ಅಧಿಕಾರ ಹಂಚಿಕೆ ಮತ್ತು ಚುನಾವಣಾ ಕಾರ್ಯತಂತ್ರವನ್ನು ಪ್ರಕಟಿಸಲಾಗಿದೆ.
ಸಮಾವೇಶದಲ್ಲಿ ಮಾತನಾಡಿದ ನಗೀನಾ ಸಂಸದ ಚಂದ್ರಶೇಖರ್ ಆಜಾದ್, ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಘೋಷಿಸಿದರು. “ಇನ್ನು ಮುಂದೆ ಅಬ್ದುಲ್ ರಾಜಕೀಯ ನಾಯಕರಿಗಾಗಿ ಚಾಪೆ ಹಾಸುವುದಿಲ್ಲ. ಬದಲಾಗಿ ಉಪಮುಖ್ಯಮಂತ್ರಿಯಾಗಿ ನನ್ನ ಪಕ್ಕದಲ್ಲೇ ಕುಳಿತುಕೊಳ್ಳುತ್ತಾನೆ” ಎಂದು ಹೇಳುವ ಮೂಲಕ ಇತರ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಮುಸ್ಲಿಮರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಅವರಿಗೆ ಸೂಕ್ತ ಅಧಿಕಾರ ಮತ್ತು ಸ್ಥಾನಮಾನ ನೀಡುತ್ತಿಲ್ಲ ಎಂದು ಆರೋಪಿಸಿದರು. ತಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯದಿಂದ ಒಬ್ಬರು ಮತ್ತು ಹಿಂದುಳಿದ ವರ್ಗದಿಂದ ಮತ್ತೊಬ್ಬರು ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭರವಸೆ ನೀಡಿದರು.
ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚಂದ್ರಶೇಖರ್ ಆಜಾದ್ ಅವರನ್ನು ಘೋಷಿಸಲಾಗಿದೆ. ಉತ್ತರ ಪ್ರದೇಶದ ಎಲ್ಲಾ 403 ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಮೈತ್ರಿಕೂಟ ತಿಳಿಸಿದೆ. ಮಹಿಳೆಯರಿಗೆ ಪ್ರತಿ ತಿಂಗಳು 25 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವುದಾಗಿಯೂ ಆಜಾದ್ ಘೋಷಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಉತ್ತರ ಪ್ರದೇಶದಲ್ಲಿ ಬಡವರು, ಶೋಷಿತರು ಮತ್ತು ಹಿಂದುಳಿದವರ ಸರ್ಕಾರ ರಚನೆಯಾಗಬೇಕಾದರೆ ಚಂದ್ರಶೇಖರ್ ಆಜಾದ್ ಮುಖ್ಯಮಂತ್ರಿಯಾಗಬೇಕು ಎಂದು ಕರೆ ನೀಡಿದರು. ಅಂಚಿನಲ್ಲಿರುವ ಸಮುದಾಯಗಳ ಹಿತಾಸಕ್ತಿ ಕಾಪಾಡುವಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷ ಎರಡೂ ವಿಫಲವಾಗಿವೆ ಎಂದು ಟೀಕಿಸಿದರು.
ಉತ್ತರ ಪ್ರದೇಶದ ಜನಸಂಖ್ಯೆಯಲ್ಲಿ ದಲಿತರು ಸುಮಾರು ಶೇ.21ರಷ್ಟು ಮತ್ತು ಮುಸ್ಲಿಮರು ಶೇ.19ರಷ್ಟು ಇದ್ದಾರೆ ಎಂಬ ಅಂದಾಜಿನ ಆಧಾರದಲ್ಲಿ ಈ ಎರಡು ಸಮುದಾಯಗಳ ಮತಗಳನ್ನು ಒಗ್ಗೂಡಿಸುವುದು ಮೈತ್ರಿಕೂಟದ ಪ್ರಮುಖ ಗುರಿಯಾಗಿದೆ. ಒಟ್ಟಾರೆ ಶೇ.40ರಷ್ಟು ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದೆ.
ಈ ಮೈತ್ರಿಕೂಟದ ನಡೆ ಆಡಳಿತಾರೂಢ ಬಿಜೆಪಿಗೆ ಸವಾಲಾಗುವ ಸಾಧ್ಯತೆಯಿದೆ. ಜೊತೆಗೆ ಸಮಾಜವಾದಿ ಪಕ್ಷದ ಪಿಡಿಎ ತಂತ್ರ ಮತ್ತು ಮಾಯಾವತಿ ಅವರ ಬಿಎಸ್‌ಪಿ ಮತಬ್ಯಾಂಕ್ ಮೇಲೂ ಪರಿಣಾಮ ಬೀರಬಹುದೆಂಬ ರಾಜಕೀಯ ಚರ್ಚೆ ಆರಂಭವಾಗಿದೆ.




