*ಬಿಜೆಪಿ ಜೊತೆ ಡಿಎಂಕೆ ಒಳ ಒಪ್ಪಂದ?*: *ಉದಯನಿಧಿ ಸ್ಟಾಲಿನ್ ನಡೆಗೆ ವಿಜಯ್ ಪಕ್ಷದ ಗಂಭೀರ ಆರೋಪ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ರಾಜಕೀಯದಲ್ಲಿ ಹೊಸ ಸಂಘರ್ಷ ಶುರುವಾಗಿದೆ. ಆಡಳಿತಾರೂಢ ಡಿಎಂಕೆ ವಿರುದ್ಧ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಗಂಭೀರ ಆರೋಪ ಮಾಡಿದೆ. ಬಿಜೆಪಿ ಜೊತೆ ಕೈಜೋಡಿಸಲು ಡಿಎಂಕೆ ಸಿದ್ಧತೆ ನಡೆಸುತ್ತಿದೆ ಎಂಬುದು ಟಿವಿಕೆ ವಾದ. ರಾಜ್ಯಪಾಲರೊಂದಿಗಿನ ಉದಯನಿಧಿ ಸ್ಟಾಲಿನ್ ಭೇಟಿ ಇದೀಗ ಈ ರಾಜಕೀಯ ಆರೋಪಕ್ಕೆ ಪ್ರಮುಖ ಅಸ್ತ್ರವಾಗಿದೆ. ಅಷ್ಟಕ್ಕೂ ಡಿಎಂಕೆ ವಿರುದ್ಧ ಟಿವಿಕೆ ಮುಂದಿಟ್ಟಿರುವ ಸಾಕ್ಷ್ಯಗಳೇನು?
ಮಹಿಳಾ ಮೀಸಲಾತಿ ಮಸೂದೆಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜಾರಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನ ನಡೆಸಲು ಮುಂದಾಗಿದೆ. ನವೆಂಬರ್ 30ರಿಂದ ಡಿಸೆಂಬರ್ 3ರವರೆಗೆ ಅಧಿವೇಶನ ನಡೆಸುವ ಪ್ರಸ್ತಾಪವಿದ್ದು, ನವೆಂಬರ್ 30ರಂದು ಲೋಕಸಭೆ ಹಾಗೂ ಡಿಸೆಂಬರ್ 2ರಂದು ರಾಜ್ಯಸಭೆಯ ಕಲಾಪಗಳು ನಡೆಯಲಿವೆ.
ಈ ಬೆಳವಣಿಗೆಯ ನಡುವೆಯೇ ಡಿಎಂಕೆ ತನ್ನ ಸೈದ್ಧಾಂತಿಕ ನಿಲುವಿನಿಂದ ಹಿಂದೆ ಸರಿಯುತ್ತಿದೆ ಎಂದು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಆರೋಪಿಸಿದೆ. ಮಾಜಿ ಮುಖ್ಯಮಂತ್ರಿ ಹಾಗೂ ದ್ರಾವಿಡ ಚಳವಳಿಯ ಪ್ರಮುಖ ನಾಯಕ ಸಿ.ಎನ್. ಅಣ್ಣಾದುರೈ ಅವರ ಪ್ರಸಿದ್ಧ ಹೇಳಿಕೆಯನ್ನು ಉಲ್ಲೇಖಿಸಿ ಡಿಎಂಕೆಯನ್ನು ಟೀಕಿಸಿದೆ.
‘ಆಡಿಗೆ ಗಡ್ಡವಿದ್ದರೆ ಏನು ಪ್ರಯೋಜನ? ದೇಶಕ್ಕೆ ರಾಜ್ಯಪಾಲರಿದ್ದರೆ ಏನು ಪ್ರಯೋಜನ?’ ಎಂಬ ಅಣ್ಣಾದುರೈ ಅವರ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಟಿವಿಕೆ ವಾಗ್ದಾಳಿ ನಡೆಸಿದೆ.
ವಿಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾದ ಬೆನ್ನಲ್ಲೇ ಈ ಆರೋಪ ಕೇಳಿಬಂದಿದೆ. ಈ ಭೇಟಿಯು ಡಿಎಂಕೆ ಬಿಜೆಪಿಯತ್ತ ಒಲವು ತೋರುತ್ತಿರುವುದರ ಸೂಚನೆ ಎಂದು ಟಿವಿಕೆ ವ್ಯಾಖ್ಯಾನಿಸಿದೆ.
ಮುರಸೋಲಿಯಲ್ಲಿ ಬಿಜೆಪಿ ಅಧ್ಯಕ್ಷರ ಸಂದರ್ಶನವೇ ಅಸ್ತ್ರ!
ಟಿವಿಕೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಡಿಎಂಕೆ ವಿರುದ್ಧ ತೀವ್ರ ಟೀಕೆ ಮಾಡಿದೆ. ಅಣ್ಣಾದುರೈ ಅವರ ಡಿಎಂಕೆಯನ್ನು ಕುಟುಂಬದ ಪಕ್ಷವನ್ನಾಗಿ ಪರಿವರ್ತಿಸಲಾಗಿದೆ. ರಾಜ್ಯಪಾಲರೊಂದಿಗಿನ ಇಂದಿನ ಭೇಟಿ, ವೇದಿಕೆಗಳಲ್ಲಿ ಮಾಡುತ್ತಿರುವ ಸೈದ್ಧಾಂತಿಕ ಬದ್ಧತೆಯ ಹೇಳಿಕೆಗಳು ಬೂಟಾಟಿಕೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಆರೋಪಿಸಿದೆ.
ಒಂದು ಕಾಲದಲ್ಲಿ ರಾಜ್ಯಪಾಲರು ಮಾತನಾಡದಂತೆ ತಡೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವರು, ಈಗ ಅದೇ ರಾಜ್ಯಪಾಲರನ್ನು ಭೇಟಿಯಾಗಿ ಕಷ್ಟದ ಸಮಯದಲ್ಲಿ ನಮ್ಮನ್ನು ಕಾಪಾಡುವ ರಕ್ಷಕ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.
ಇಷ್ಟಕ್ಕೇ ನಿಲ್ಲದ ಟಿವಿಕೆ, ಡಿಎಂಕೆ ಮುಖವಾಣಿ ‘ಮುರಸೋಲಿ’ಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರ ಸಂದರ್ಶನ ಪ್ರಕಟವಾಗಿರುವುದನ್ನೂ ಪ್ರಶ್ನಿಸಿದೆ. ಸುಮಾರು 14 ವರ್ಷಗಳ ಬಳಿಕ ಮುರಸೋಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಸಂದರ್ಶನ ಪ್ರಕಟವಾಗಿರುವುದು ರಾಜಕೀಯವಾಗಿ ಮಹತ್ವದ ಬೆಳವಣಿಗೆ ಎಂದು ಟೀಕಿಸಿದೆ.
ಕಲೈಞರ್ ಅವರ ಆಶೀರ್ವಾದ ಪಡೆದ ಕಮಲದ ಚಿಹ್ನೆಯ ಇತಿಹಾಸ ಮತ್ತೊಮ್ಮೆ ಪುನರಾವರ್ತನೆಯಾಗುವ ಲಕ್ಷಣಗಳಿವೆ ಎಂದಿರುವ ಟಿವಿಕೆ, ತಮಿಳುನಾಡಿನಲ್ಲಿ ಬಿಜೆಪಿಯನ್ನು ಬೆಳೆಸುವ ಹೊಣೆಗಾರಿಕೆಯನ್ನು ಡಿಎಂಕೆಯೇ ವಹಿಸಿಕೊಂಡಂತಿದೆ ಎಂದು ಆರೋಪಿಸಿದೆ.
ಫ್ಯಾಸಿಸ್ಟ್ ಸಿದ್ಧಾಂತವನ್ನು ಸ್ವೀಕರಿಸಲು ಸಿದ್ಧರಾಗಿರುವವರು ಮತ್ತು ಕನಿಷ್ಠ ಒಂದು ಸಿದ್ಧಾಂತವನ್ನೂ ಹೊಂದಿರದವರು ಒಂದೇ ದಾರಿಯಲ್ಲಿ ಸಾಗುತ್ತಿದ್ದಾರೆ ಎಂದು ಟಿವಿಕೆ ಕಿಡಿಕಾರಿದೆ. ಡಿಎಂಕೆಯ ಕುಟುಂಬ ರಾಜಕಾರಣ ಮತ್ತು ಅದರ ರಾಜಕೀಯ ನಿಲುವುಗಳನ್ನು ಟೀಕಿಸುವ ಮೂಲಕ ತನ್ನ ಹೇಳಿಕೆಯನ್ನು ಮುಕ್ತಾಯಗೊಳಿಸಿದೆ.
ಒಟ್ಟಿನಲ್ಲಿ, ಉದಯನಿಧಿ ಸ್ಟಾಲಿನ್ ಅವರ ರಾಜ್ಯಪಾಲರ ಭೇಟಿ ಮತ್ತು ಮುರಸೋಲಿಯಲ್ಲಿ ಪ್ರಕಟವಾದ ಬಿಜೆಪಿ ರಾಜ್ಯಾಧ್ಯಕ್ಷರ ಸಂದರ್ಶನವನ್ನು ಮುಂದಿಟ್ಟುಕೊಂಡು ಟಿವಿಕೆ ಹೊಸ ರಾಜಕೀಯ ಸಮರಕ್ಕೆ ಇಳಿದಿದೆ. ಆದರೆ ಬಿಜೆಪಿ ಜೊತೆ ಡಿಎಂಕೆ ಮೈತ್ರಿ ಅಥವಾ ಒಳ ಒಪ್ಪಂದ ಮಾಡಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಸದ್ಯಕ್ಕೆ ಟಿವಿಕೆ ಹೇಳಿಕೆಯೇ ಆಧಾರವಾಗಿದೆ.



