Kannada News

ಅವರಿಗೆ ಅದು ತಿಳೀಲಿಲ್ಲ… ಇವರಿಗೆ ಇದು ತಿಳೀಲಿಲ್ಲ… ಬಾಲಕಿಯ ಜೀವ ಉಳೀಲಿಲ್ಲ

ಪೂರ್ಣಿಮಾ ಹೆಗಡೆ

ಆ ಹೆಂಗಸು ಬೆಳಿಗ್ಗೆಯಿಂದ ಒಂದೇ ಸಮನೆ ಅಳತಾ ಇತ್ತು. ಪಕ್ಕದಲ್ಲಿರುವವ ಅವಳ ಗಂಡನಿರಬೇಕು. ಒಂತರಾ ಬ್ಲ್ಲ್ಯಾಂಕ್ ಅಂತಾರಲ್ಲ ಹಾಗಾಗಿದ್ದ. ಮಗನ ಕೇಸಿರಬಹುದು, ಇವತ್ತು ಜಡ್ಜಮೆಂಟಿರಬಹುದು ಅನಕೊಂಡೆ. ಆಮೇಲೆ ಅವರ ವಕೀಲರ ಜೊತೆ ಅವಳು ಅಳುತ್ತಾ ಹೇಳ್ತಾ ಇದ್ಲು…. “ಆವತ್ತು ಪೋಲೀಸ್ಟೇಶನ್ದಾಗ ಈ ಕೆಲಸ ಮಾಡಿದ್ದರೆ ನನ್ನ ಮಗಳು ಜೀವಂತಿರತಿತ್ತಲ್ರಿ ಸಾಹೇಬ್ರ. ಈಗ ಕಳಕೊಂಡಾಕಿ ನಾನಾದೆ ಯಾರಿಗೇನ್ ಪರಕ್ ಬಂದಾತ್ರೀ ” ಅಂತ. ಸ್ವಲ್ಪ ಕುತೂಹಲದ ಮನಸು, ಆ ವಕೀಲರ ಜೂನಿಯರಗೆ ಕೇಳಿದೆ” ಏನಾಗಿದೆ?” ಅಂತ.

         ಕಲ್ಲಪ್ಪ ಆತ. ಸಾತವ್ವ ಅವನ ಹೆಂಡತಿ. ಇಬ್ರು ಮಕ್ಕಳು, ರಮೇಶ, ರೇಖಾ. ಸ್ವಲ್ಪ ಹೊಲಮನೆ ಪಿತ್ರಾರ್ಜಿತವಾಗಿ ಬಂದಿತ್ತು. ಮತ್ತೊಂದು ಸ್ವಲ್ಪ ಹೊಲವನ್ನ ಹೆಂಡತಿಯ ತವರಮನೆ ಮೇಲೆ ದಾವಾ ಮಾಡಿ ಪಡೆದಿದ್ದ ಕಲ್ಲಪ್ಪ. ಅದು ಅವನ ಭಾವ ಅಂದರೆ ಸಾತವ್ವನ  ಅಣ್ಣನಿಗೆ ಜೀರ್ಣಿಸಿ ಕೊಳ್ಳುವುದು ಕಷ್ಟವಾಗಿತ್ತು. ಛಾಲೆಂಜ್ ಮಾಡಿದ್ದ. ಹೇಗೆ ಹೊಲಮನಿ ವಾಪಸ್ ಪಡೀಬೇಕಂತ ಗೊತ್ತು ಅಂತ. ನಿನಗೊಬ್ಳು ಮಗಳಿದಾಳೆ ಅಂತ ಮರೀಬೇಡ ಅಂದಿದ್ದ. ಕಲ್ಲಪ್ಪ ಮರೆತಿದ್ದ.
      ದಿನಚರಿ ಅವರವರದ್ದು ಅವರವರ ಪಾಡಿಗೆ ನಡೆದುಕೊಂಡು ಹೋಗ್ತಾ ಇತ್ತು. ಸಂಬಂಧ ಮಾತ್ರ ಕಡಿದು ಬಿದ್ದಿತ್ತು. ಮಗಳು ಹೈಸ್ಕೂಲ್ ಎರಡನೇ ವರ್ಷ ಓದ್ತಾ ಇದ್ದಳು. ಯಾರ್ಯಾರೋ ಕಲ್ಲಪ್ಪನ ಕಿವಿಗೆ, ಮಗಳು ತನ್ನ ಮಾವನ ಮಗ ಶಶಿಕಾಂತನ ಜೊತೆ ಅಲ್ಲಲ್ಲಿ ಕಾಣಿಸ್ತಾ ಇದಾಳೆ ಅಂತ ಮಾತಾಡೋದು ಬಿತ್ತು. ಮಗಳಿಗೆ ನಯವಾಗಿ ಹೆದರಿಸಿದ. ಹೆಂಡತಿಗೆ ಮಾತ್ರ ಅವಾಚ್ಯವಾಗಿ ಬೈತಾಇದ್ದ, ಅವಳ ತವರು ಮನೆಯವರನ್ನೂ ಸೇರಿಸಿ. ಆದರೆ ವಿಷಯ ಮಾತ್ರ ಕಣ್ಣಿಗೆ ಕಾಣದೇ ಹೋದ್ರೂ ಕಿವಿಗೆ ಬೀಳ್ತಾನೇ ಇತ್ತು.  ಮಗನ ಜೊತೆ ಈ ವಿಷಯ ಹೇಳಿದ, ಏನು ಮಾಡುವಾ ಅಂತ. ಮಗ ಅತೀ ಬುದ್ದಿವಂತನಂತೆ, ನನ್ನ ದೋಸ್ತೊಬ್ಬ ಲಾ ಓದ್ತಾ ಇದಾನೆ ಅವನಿಗೆ ಕೇಳ್ತೇನೆ ಅಂದ. ಕೆಲದಿನಗಳ ನಂತರ ಕಲ್ಲಪ್ಪನ ಮಗ ಒಂದು ನೂರರ ಬಾಂಡ್ ಪೇಪರ್ ತಂದ. ಖಾಲಿ ಪೇಪರಲ್ಲಿ ಕಲ್ಲಪ್ಪ ಮಗಳ ಸಹಿ ಪಡೆದು ಭದ್ರವಾಗಿಟ್ಟ. ಮುಂದಿನ ವರ್ಷ ಮದುವೆ ಮಾಡಿ ಬಿಟ್ಟರಾಯಿತು ಮಗಳಿಗೆ ಅಂತ ಸುಮ್ಮನಾದ.
 ಸುಮಾರು ಎರಡು ತಿಂಗಳಾಗಿರಬೇಕು, ಶಾಲೆಗೆ ಹೋದ ರೇಖಾ ಮನೆಗೆ ಬಂದಿಲ್ಲ ಅಂತ ಹೆಂಡತಿ ಗಾಬರಿಯಲ್ಲಿ ಹೇಳಿದಳು. ಎಲ್ಲ ಗೆಳತಿಯರ ಮನೆಗೆ ಹೋಗಿಬಂದಾಯಿತು. ಎರಡುದಿನಗಳ ನಂತರ ಕಲ್ಲಪ್ಪನ ಸಂಶಯ ನಿಜವಾಗುವಂತೆ ಮಗಳು ಅವಳ ಸೋದರ ಮಾವನ ಮನೆಯಲ್ಲಿದ್ದಾಳೆ ಅಂತ ಗೊತ್ತಾಯ್ತು. ಅಳೆದು ಸುರಿದು ಖರ್ಚು ವೆಚ್ಚ ಲೆಕ್ಖ ಹಾಕಿ ಸುಮಾರು ಎರಡು ತಿಂಗಳ ನಂತರ ಕಲ್ಲಪ್ಪ, ಶಶಿಕಾಂತ ಮತ್ತು ಅವರ ಮನೆಯವರ ಮೇಲೆ ಪೋಲೀಸ್ ಕಂಪ್ಲೇಂಟ್ ಕೊಟ್ಟ. ಶಶಿಕಾಂತ ಪೋಲೀಸರನ್ನ ಮ್ಯಾನೇಜ್ ಮಾಡ್ತಾ ಉಳಿದ. ನಂತರ ಒಂದು ದಿನ ಪೋಲೀಸರಿಂದ ಕರೆಯಾ ಬಂತು. ಹೋದರೆ ಮಗಳೂ ಶಶಿಕಾಂತನ ಜೊತೆಯಲ್ಲಿ ಅಲ್ಲಿದ್ದಳು. “ಈಗ ಕರೆದು ಕೊಂಡು ಹೋಗು, ನನ್ನ ಜೊತೆ ಐದು ತಿಂಗಳಿನಿಂದಾ ಆಕಿ ಅದಾಳ, ಯಾವ ಮದಿವಿ ಆಗ್ತಾನ ನಾನೂ ನೋಡೇ ಬಿಡ್ತೇನೆ. ಅಂದ ಶಶಿಕಾಂತ. ನಿನ್ನ ಮಗಳು, ನಮ್ಮಾಸ್ತಿ ಎರಡೂ ನಮಗ “, ಅಂದ. ಪೋಲೀಸ್ ಕೇಳಿದಾಗ ರೇಖಾ ನಾನು ನನ್ನ ಸೋದರಮಾವನ ಮನೆಯಲ್ಲಿದ್ದು ಕೊಂಡು ಶಾಲೆಗೆ ಹೋಗ್ತಾ ಇದೇನೆ. ನಮ್ಮವ್ವ ಅಪ್ಪಾನೇ ನಂಗೆ ಅಲ್ಲಿ ಬಿಟ್ಪಾರ”, ಅಂದ್ಲು. ಕಲ್ಲಪ್ಪನ ಮಗ ತಂಗಿಗೆ ಹೊಡೆಯಲು ಹೋದ, ಶಶಿಕಾಂತ ತಡೆದ, “ಆಕಿ ಮೈಮುಟ್ಟಿದಿ ಅಂದ್ರ ಇಲ್ಲೇ ಹೂತು ಬಿಡ್ತೇನೆ ಅಂತ. ಮನೆಗೆ ಹೋಗಿ ನೋಡುವಾ ಅಂತ ಕಲ್ಲಪ್ಪ ಮಗನಿಗೆ ಸನ್ನೆ ಮಾಡಿದ. ಪೋಲೀಸ್ಟೇಶನ್ ದಿಂದ ಕಂಪ್ಲೇಂಟ್ ವಾಪಸ್ ಪಡೆದು ಎಲ್ಲರೂ ಹೊರಟರು. ರೇಖಾಳ ಗಮನಕ್ಕೆ ಅಪ್ಪ, ಅಣ್ಣ ಮನೆಗೆ ಹೋದಮೇಲೆ ತನ್ಗೆ ಬಿಡುವುದಿಲ್ಲ ಅಂತ ಗೊತ್ತಾಯ್ತು, ಮತ್ತು ಶಶಿಕಾಂತನಿಂದ ದೂರ ಹೋಗುವ ಮನಸೂ ಇರಲಿಲ್ಲ “ಮಾಮಾರಿ, ನಾ ನಿಮ್ಮ ಜೋಡಿನೇ ಬರ್ತೇನಂತ ಗಂಟ ಬಿದ್ದಳು. ಅದರದೇ ನಿರೀಕ್ಷೆಯಲ್ಲಿಯೇ ಇದ್ದ ಶಶಿಕಾಂತ ಗೆದ್ದ ಪಟುವಿನಂತೆ ಮುಖ ಮಾಡಿದ. ಕಲ್ಲಪ್ಪ ಮಗಳಿಗೆ ಯೇನೂ ಹೇಳಲೇ ಇಲ್ಲ. ಆದರೆ ಕಲ್ಲಪ್ಪನ ಮಗನಿಗೆ ಸೋಲು ಬೇಕಿರಲಿಲ್ಲ. ಎಲ್ಲರೂ ಅಲ್ಲಿಂದ ಹೊರ ಬಂದ ಮೇಲೆ ಕಲ್ಲಪ್ಪನ ಮಗ ಶಶಿಕಾಂತನಿಗೆ ಹೇಳಿದ, ತಗೊಂಡೋಗು ಆಕಿನ್ನ, ನಾನು ಏನು ಬುದ್ದಿಗೇಡಿ ಅಲ್ಲ ಆಕಿ ಕಡೆ ಆಸ್ತೀ ಬ್ಯಾಡಂತ ಬಾಂಡ್ ಪೇಪರ್ನಾಗ ಬರೆಸ್ಕೊಂಡೇನಿ”, ಅಂದ. ಶಶಿಕಾಂತ ಪೂರ್ತೀ ಇಳಿದು ಹೋದ. ಅಲ್ಲಿಂದ ಮರು ಮಾತಾಡದೆ ಬರಬರ ನಡೆದ. ರೇಖಾ ಅವನನೇ ಹಿಂಬಾಲಿಸಿ ಹೋದಳು. ಕಲ್ಲಪ್ಪ ಮಾತ್ರ ಮೌನವಾಗಿದ್ದ, ಏನೂ ತೋಚದವನಂತೆ.
 ನಾಲ್ಕು ದಿನ ಕಳೆದ ಮೇಲೆ ಯಾರೋ ಓಡಿ ಬಂದು ಸುದ್ದಿ ಹೇಳಿದರು, ನಿನ್ನ ಮಗಳು ನಿಮ್ಮ ಹೊಲದ ಬಡ್ಡೆಯಲ್ಲಿ ಸುಟ್ಟು ಅರೆ ಗರಿತ ಹೆಣವಾಗಿ ಬಿದ್ದಿದ್ದಾಳೆ ಅಂತ. ಕಲ್ಲಪ್ಪ ನಿಜವಾಗಿಯೂ ಕಲ್ಲಾದ.
 ತನಗೆ ತನ್ನ ಕುಟುಂಬಕ್ಕೆ ಸಾಕಾಗುವಷ್ಟು ಆಸ್ತಿ ಇದ್ದಾಗ್ಲೂ ಹೆಂಡತಿಯ ತವರು ಮನೆಯ ಆಸ್ತಿಗೆ ಆಸೆ ಪಡಬಾರದು ಅಂತ ತಿಳೀಲಿಲ್ಲ.
 ಮಗಳು ಶಶಿಕಾಂತನ ಜೊತೆ ಓಡಾಡುತ್ತಿರುವಾಗ ಮಗಳನ್ನ ರಕ್ಷಿಸಿ ಕೊಳ್ಳಬೇಕು, ಆಸ್ತಿಯನ್ನಲ್ಲ ಅಂತ ತಿಳೀಲಿಲ್ಲ.
ಅಪ್ರಾಪ್ತ ವಯಸ್ಸಿನ ಮಗಳ ಕಡೆ ಬಾಂಡ್ ಮಾಡಿಸಿ ಕೊಂಡ್ರೆ ಅದು ಊರ್ಜಿತವಲ್ಲ ಅಂತ ತಿಳೀಲಿಲ್ಲ.
ಮಗಳನ್ನ ಪೋಲೀಸ್ಟೇಷನ್ದಿಂದ ಮನೆಗೆ ಕರೆದು ಕೊಂಡು ಬರಬೇಕು ಅಂತ ತಿಳೀಲಿಲ್ಲ.
ಶಶಿಕಾಂತನ ಮುಂದೆ ಬಾಂಡ್ ವಿಚಾರ ಮಾತನಾಡಬಾರದು ಅಂತ ತಿಳೀಲಿಲ್ಲ.
ತಮ್ಮದೇ ಕರುಳಿನ ಕುಡಿ, ಬೆಂಕಿ ಇಡುವುದು ಬೇಡ ಅಂತ ಸಾತವ್ವನ ತವರು ಮನೆಯವರಿಗೂ ತಿಳಿಯಲಿಲ್ಲ.
ಒಟ್ಟಾರೆ ದ್ವೇಶಕ್ಕೆ ಎಳೆಜೀವ ಕರಕಲಾಗಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button