ಕೊರೊನಾ ವೈರಸ್: ದೇಶದಲ್ಲಿ 2ನೇ ಸಾವು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ವೈರಸ್ ದೇಶದಲ್ಲಿ ಎರಡನೇ ಬಲಿ ಪಡೆದುಕೊಂಡಿದೆ. ದೆಹಲಿಯಲ್ಲಿ 68 ವರ್ಷದ ಮಹಿಳೆ ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ.

ವಿದೇಶದಿಂದ ಮರಳಿದ್ದ ಪುತ್ರನಿಂದ ಮಹಿಳೆಗೆ ಕೊರೊನಾ ಸೋಂಕು ಹರಡಿತ್ತು. ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್‌) ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಇಂದು ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕಲಬುರಗಿಯಲ್ಲಿ ಮಾರ್ಚ್ 11ರಂದು ಮೃತಪಟ್ಟ 76 ವರ್ಷದ ವೃದ್ಧರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಇದೀಗ ದೆಹಲಿಯಲ್ಲಿ ಮಹಿಳೆಯೊಬ್ಬರು ಈ ಸೋಂಕಿಗೆ ಸಾವನ್ನಪ್ಪಿದ್ದಾರೆ.

ಇನ್ನು ಕರ್ನಾಟಕದಲ್ಲಿ ಕೊರೊನಾ ಶಂಕಿತರ ಸಂಖ್ಯೆ 32ಕ್ಕೆ ಏರಿಕೆಯಾಗಿದ್ದು, ಇಂದು ಒಂದೇ ದಿನ 19 ಮಂದಿ ದಾಖಲಾಗಿದ್ದಾರೆ. ಗುರುವಾರ ಮೃತಪಟ್ಟ ವ್ಯಕ್ತಿ ಸೇರಿದಂತೆ ಒಟ್ಟು 6 ಮಂದಿಗೆ ಕೊರೊನಾ ಬಂದಿದ್ದು, ಇಂದು ಹೊಸದಾಗಿ ಯಾವುದೇ ಕೇಸ್ ಪತ್ತೆಯಾಗಿಲ್ಲ. 5 ಮಂದಿ ಕೊರೊನಾ ಪೀಡಿತರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಕಲಬುರಗಿ, ದಕ್ಷಿಣ ಕನ್ನಡ, ಹಾಸನದಲ್ಲಿ ನಾಲ್ಕು ಮಂದಿ, ಬೆಂಗಳೂರಿನಲ್ಲಿ 3, ಉಡುಪಿಯಲ್ಲಿ 2, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ತಲಾ ಒಬ್ಬರು ದಾಖಲಾಗಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 3 ಮಂದಿ ಹಾಸನದಲ್ಲಿ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಬೆಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ 7 ಮಂದಿ, ಉಡುಪಿಯಲ್ಲಿ 5, ಹಾಸನ ಮತ್ತು ಕಲಬುರಗಿಯಲ್ಲಿ 4 ಮಂದಿ ಮೇಲೆ ನಿಗಾ ಇಡಲಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button