Latest

ಜ.12ರಿಂದ ಬೆಳಗಾವಿಯಲ್ಲಿ ರಂಗ ಸಂಪದ ನಾಟಕೋತ್ಸವ

 

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಂಗ ಸಂಪದಕ್ಕೆ 40 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಜನೇವರಿ 12 ರಿಂದ 14ರ ವರೆಗೆ ಮೂರು ದಿನಗಳ ನಾಟಕೋತ್ಸವ ಆಯೋಜಿಸಲಾಗಿದೆ.
ರಂಗ ಸಂಪದ ಅಧ್ಯಕ್ಷ ಡಾ.ಅರವಿಂದ ಕುಲಕರ್ಣಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಬೆಳಗಾವಿ ರಂಗ ಸಂಪದವು ತನ್ನದೇ ಆದ ತಂಡವನ್ನು ಕಟ್ಟಿಕೊಂಡು ಕಳೆದ 1979 ರಿಂದ ಕನ್ನಡ ನಾಟಕಗಳನ್ನು ಪ್ರದರ್ಶಿಸುತ್ತಿದೆ. ಕಳೆದ 39 ವರ್ಷಗಳಿಂದ ಬೆಳಗಾವಿ, ಮೈಸೂರು, ಬೆಂಗಳೂರು ಸೇರಿದಂತೆ ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿಯೂ ಕನ್ನಡ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಸಾಂಸ್ಕ್ರತಿಕ ಲೋಕದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿ ಯಶಸ್ವಿಯಾಗಿ ಕಾರ‍್ಯ ನಿರ್ವಸುತ್ತಿದೆ ಎಂದರು.
12ರಂದು ರಂದು ರಂಗ ಸಂಪದ ಕಲಾವಿದರು ಪ್ರಸ್ತುತಪಡಿಸುತ್ತಿರುವ ನಾಟಕ ಸುಖಗಳಿಂದ ದೂರವಾಗಿ (ಮೂಲ ಮರಾಠಿ ಅಭಿರಾಮ ಭಡಕಮಕರ, ಕನ್ನಡ ಅನುವಾದ ಡಾ.ಅರವಿಂದ ಕುಲಕರ್ಣಿ ಹಾಗೂ ಗುರುನಾಥ ಕುಲಕರ್ಣಿ, ನಿರ್ದೇಶನ ಡಾ.ಸಂಧ್ಯಾ ದೇಶಪಾಂಡೆ) ಪ್ರದರ್ಶನಗೊಳ್ಳುತ್ತಿದೆ.
13ರಂದು ರಂಗಾಯಣ ಧಾರವಾಡ ಕಲಾವಿದರು ಪ್ರಸ್ತುತಪಡಿಸುತ್ತಿರುವ ನಾಟಕ ಬಾಣಲೆ ಒಳಗಿನ ಬೆಂಕಿ (ಕನ್ನಡಕ್ಕೆ ರಾಘವೇಂದ್ರ ಪಾಟೀಲ, ಸಂಗೀತ ಮತ್ತು ನಿರ್ದೇಶನ ಎಮ್.ಡಿ ಪಲ್ಲವಿ) ಪ್ರದರ್ಶನಗೊಳ್ಳುತ್ತಿದೆ.
14 ರಂದು ರಂಗ ಆರಾಧನಾ ಸಾಂಸ್ಕ್ರತಿಕ ಸಂಘಟನೆ, ಸವದತ್ತಿ ಕಲಾವಿದರು ಪ್ರಸ್ತುತಪಡಿಸುತ್ತಿರುವ ನಾಟಕ ಗುಲಾಮನ ಸ್ವಾತಂತ್ರ್ಯ ಯಾತ್ರೆ (ರಚನೆ ತೌಫಿಕ ಅಲ್ ಹಕೀಮ, ಕನ್ನಡಕ್ಕೆ ಎಂ.ಸಿ.ಕೆ ಪ್ರಭು, ನಿರ್ದೇಶನ ಜಯತೀರ್ಥ ಜೋಷಿ, ಮರುಸಂಯೋಜನೆ ಝಕೀರ ನದಾಫ) ಪ್ರದರ್ಶನಗೊಳ್ಳುತ್ತಿದೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ರಂಗ ಸಂಪದ ಆಡಳಿತ ಮಂಡಳಿ ಸದಸ್ಯರಾದ ಅನಂತ ಪಪ್ಪು, ಗುರುನಾಥ ಕುಲಕರ್ಣಿ, ರಮೇಶ ಅನಿಗಳ, ರಾಮಚಂದ್ರ ಕಟ್ಟಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button