ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಕೊರೋನಾ ವೈರಸ್ ಸೋಂಕು ಹೆಚ್ಚಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಸಿಬಿಎಸ್ಇ ಮತ್ತು ಜೆಇಇ ಮುಖ್ಯ ಪರೀಕ್ಷೆಗಳನ್ನು ಮುಂದೂಡಿದೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್(ಸಿಬಿಎಸ್ಇ) 10 ಮತ್ತು 12ನೇ ತರಗತಿಯ ವಾರ್ಷಿಕ ಪರೀಕ್ಷೆಗಳನ್ನು ಮಾರ್ಚ್ 31ರವರೆಗೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ಭಾರತ ಮತ್ತು ವಿದೇಶಗಳಲ್ಲಿ ನಡೆಯಲಿರುವ ಎಲ್ಲಾ ಸಿಬಿಎಸ್ಇ ಪರೀಕ್ಷೆಗಳನ್ನು ಮಾರ್ಚ್ 31ರವರೆಗೆ ಮುಂದೂಡಲಾಗಿದೆ. ಪರಿಸ್ಥಿತಿ ನೋಡಿ ಮುಂದಿನ ದಿನಾಂಕವನ್ನು ನಿಗದಿ ಪಡಿಸಲಾಗುವುದು ಎಂದು ಸಿಬಿಎಸ್ಇ ಬೋರ್ಡ್ ಕಾರ್ಯದರ್ಶಿ ಅನುರಾಗ್ ತ್ರಿಪತಿ ತಿಳಿಸಿದ್ದಾರೆ. ಮೌಲ್ಯಮಾಪನ ಕಾರ್ಯವನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದರು.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನಿರ್ದೇಶನದ ಮೇರೆಗೆ ಸಿಬಿಎಸ್ಇ ಈ ಕ್ರಮ ಕೈಗೊಂಡಿದೆ. ಕೊರೋನಾ ಭೀತಿ ಹಿನ್ನೆಲೆ, ಎಚ್ಆರ್ಡಿ ಸಚಿವಾಲಯವು ದೇಶದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಪರೀಕ್ಷೆಗಳನ್ನು ಮಾರ್ಚ್ 31ರವರೆಗೆ ಮುಂದೂಡುವಂತೆ ಆದೇಶಿಸಿದೆ.
ಆದರೆ ಐಸಿಎಸ್ಇ ಪರೀಕ್ಷೆಗಳನ್ನು ಮುಂದೂಡಲಾಗಿಲ್ಲ. ಮೊದಲಿನ ವೇಳಾಪಟ್ಟಿಯಂತೆ ಪರೀಕ್ಷೆಗಳು ನಡೆಯಲಿವೆ ಎಂದು ಐಸಿಎಸ್ಇ ಬೋರ್ಡ್ನ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗೆರ್ರಿ ಆರಥಾನ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ