Kannada NewsKarnataka News

ಸತತ 8ನೇ ಬಾರಿಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಡಾ.ಪ್ರಭಾಕರ ಕೋರೆ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಡಾ.ಪ್ರಭಾಕರ ಕೋರೆ ಸತತವಾಗಿ ೮ನೇ ಬಾರಿಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗುವುದರ ಮೂಲಕ ಸಂಸ್ಥೆಯ ಇತಿಹಾಸದಲ್ಲಿಯೇ ನೂತನ ದಾಖಲೆ ಬರೆದಿದ್ದಾರೆ.

ಕೆಎಲ್‌ಇ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಗುರುವಾರ ಜರುಗಿದ ನೂತನ ಆಡಳಿತ ಮಂಡಳಿಯ ಪ್ರಥಮ ಸಭೆಯಲ್ಲಿ ಸದಸ್ಯರು ಡಾ.ಪ್ರಭಾಕರ ಕೋರೆಯವರನ್ನು ಕಾರ್ಯಾಧ್ಯಕ್ಷರನ್ನಾಗಿ ಪುನರ್‌ಆಯ್ಕೆ ಮಾಡುವ ಮೂಲಕ ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರು ಹಾಗೂ ವಿಧಾನ ಪರಿಷತ್‌ನ ಸರ್ಕಾರದ ಮುಖ್ಯಸಚೇತಕರಾದ ಮಹಾಂತೇಶ ಕವಟಗಿಮಠ ಅವರು ಮಾತನಾಡಿ ’ಡಾ.ಕೋರೆಯವರು ಕೆಎಲ್‌ಇ ಸಂಸ್ಥೆಯ ಸಾರಥ್ಯವನ್ನು ವಹಿಸಿಕೊಂಡಾಗಿನಿಂದಲೂ ಸಂಸ್ಥೆಗೆ ಒಂದು ಗುಣಾತ್ಮಕವಾದ ರೂಪವನ್ನು ನೀಡಿದ್ದಾರೆ. ಅವರ ವಿಚಾರಗಳು ಹಾಗೂ ಆಲೋಚನೆಗಳು ಸಂಸ್ಥೆಯ ವಿಕಾಸಕ್ಕೆ ನೂತನ ವ್ಯಾಖ್ಯಾನವನ್ನು ಬರೆಯಿತು. ಕೆಎಲ್‌ಇ ಜಾಗತಿಕ ಮಟ್ಟದಲ್ಲಿ ಅಗಾಧವಾಗಿ ಬೆಳೆದನಿಂತಿತು. ಅವರ ಸೂಕ್ತವಾದ ನಿರ್ಧಾರಗಳು, ದೃಢಸಂಕಲ್ಪಗಳು ಸಂಸ್ಥೆಗೆ ಭದ್ರವಾದ ಬುನಾದಿ ಹಾಕಿದ್ದು ಸೂರ್ಯನಷ್ಟೇ ಸತ್ಯವೆಂದು ಹೇಳಿದರು.
ಹಿರಿಯ ವೈದ್ಯರಾದ ಡಾ.ಎಚ್.ಬಿ.ರಾಜಶೇಖರ ಅವರು ಮಾತನಾಡುತ್ತ, ಕೆಎಲ್‌ಇ ಸಂಸ್ಥೆಯಲ್ಲಿ ಅರವತ್ತರ ದಶಕದಿಂದ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ಅದರಲ್ಲಿಯೂ ಕೋರೆಯವರ ಕಾರ್ಯವೈಖರಿಯನ್ನು ಕಂಡು ವಿಸ್ಮಯ ಪಟ್ಟಿದ್ದೇನೆ. ಸಂಸ್ಥೆಯ ಬೆಳವಣಿಗೆಗಾಗಿ ಅವರು ಹಗಲಿರುಳು ಶ್ರಮಿಸಿದ್ದಾರೆ. ಬಂದ ಪ್ರತಿಯೊಂದು ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ. ಅವರ ದೂರದೃಷ್ಟಿ ಅದ್ಭುತ ಹಾಗೂ ವಿಸ್ಮಯಕಾರಿ, ನಮಗೆ ಕಾಣದ್ದು ಅವರಿಗೆ ಸೂಕ್ಷ್ಮವಾಗಿ ಕಂಡಿರುತ್ತದೆ. ಅದನ್ನು ಕಾರ್ಯಗತಗೊಳಿಸದೆ ಬಿಡಲಾರರು. ಅಂತೆಯೆ ಅವರ ಸಮರ್ಥ ಸಾರಥ್ಯದಲ್ಲಿ ಕೆಎಲ್‌ಇ ಸಂಸ್ಥೆಯ ೩೮ ರಷ್ಟಿದ್ದ ಅಂಗಸಂಸ್ಥೆಗಳು ೨೭೦ಕ್ಕೂ ಹೆಚ್ಚು ಬೆಳೆಯಲು ಸಾಧ್ಯವಾಯಿತು. ಅವರು ಸಂಸ್ಥೆಯನ್ನು ಶೈಕ್ಷಣಿಕವಾಗಿ ಮಾತ್ರವಲ್ಲದೆ ಆರೋಗ್ಯಸೇವೆ ಹಾಗೂ ಸಂಶೋಧನಾತ್ಮಕವಾಗಿಯೂ ವಿಸ್ತರಿಸಿದರು. ಕೆಎಲ್‌ಇ ಸಂಸ್ಥೆ ದೇಶದುದ್ದಗಲಕ್ಕೂ ಪ್ರಕಾಶಿಸುವಂತೆ ಮಾಡಿದರು. ಅವರೊಂದಿಗೆ ಕೆಲಸ ಮಾಡುವುದೇ ಒಂದು ಅದ್ಭುತ ಅನುಭವವೆಂದು ಬಣ್ಣಿಸಿದರು.
ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ವಿವೇಕ ಸಾವೋಜಿ ಹಾಗೂ ಸಂಸ್ಥೆಯ ಆಜೀವ ಸದಸ್ಯರಾದ ಡಾ.ಶಿವಪ್ರಸಾದ ಗೌಡರ ಈ ಸಂದರ್ಭದಲ್ಲಿ ಡಾ. ಕೋರೆಯವರ ವ್ಯಕ್ತಿತ್ವವನ್ನು ಕುರಿತು ಮಾತನಾಡಿದರು.
ಸಂಸ್ಥೆಯ ನೂತನ ಅಧ್ಯಕ್ಷರಾದ ಮಹಾಂತೇಶ ಕೌಜಲಗಿಯವರು ಮಾತನಾಡುತ್ತ, ಡಾ.ಕೋರೆಯವರ ಅನುಭವ ಕ್ಷಿತಿಜ ಬಹುವಿಸ್ತಾರ. ಅವರು ಸಂಸ್ಥೆಯನ್ನು ಗುಣಾತ್ಮಕವಾಗಿ ಹಾಗೂ ರಚನಾತ್ಮಕವಾಗಿ ಕಟ್ಟಿದ್ದಾರೆ. ಅವರ ಇಚ್ಛಾಶಕ್ತಿಯ ಪ್ರತಿಫಲವಾಗಿ ಕೆಎಲ್‌ಇ ಸಂಸ್ಥೆಯು ಹೆಮ್ಮರವಾಗಿದೆ ಎಂದು ಹೇಳುತ್ತಾ, ಡಾ. ಪ್ರಭಾಕರ ಕೋರೆಯವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ.ಪ್ರಭಾಕರ ಕೋರೆಯವರು ’ಕೆಎಲ್‌ಇ ಸಂಸ್ಥೆಯು ನನ್ನೊಬ್ಬನಿಂದ ಬೆಳೆದಿಲ್ಲ. ನಾನು ನಿಮಿತ್ತ ಮಾತ್ರ. ಈ ಸಂಸ್ಥೆಯಲ್ಲಿ ಪ್ರತಿಯೊಬ್ಬರು ತನುಮನದಿಂದ ದುಡಿದಿದ್ದಾರೆ. ಅವರೆಲ್ಲ ಶ್ರಮದ ಮೇಲೆ ಸಂಸ್ಥೆ ವಿಕಾಸಗೊಂಡಿದೆ. ನಾನು ಈ ಸಂಸ್ಥೆಯ ಡ್ರೈವರ್ ಮಾತ್ರ. ಎಲ್ಲರ ಸಹಕಾರದಿಂದ ಚಾಲನೆ ಮಾಡಿದ್ದೇನೆ ಅಷ್ಟೇ. ಸಪ್ತರ್ಷಿಗಳು ನೆಟ್ಟ ಸಸಿ ಇಂದು ಹೆಮ್ಮರವಾಗುವಲ್ಲಿ ಎಲ್ಲರ ಶ್ರಮವನ್ನೂ ಸ್ಮರಿಸಲೇಬೇಕು. ನನಗೆ ಧರ್ಮಪತ್ನಿ ಹಾಗೂ ಮಕ್ಕಳು ಸಹಾಯ ಸಹಕಾರ ನೀಡಿದರು. ಅದರ ಫಲವಾಗಿ ಕೆಎಲ್‌ಇ ಸಂಸ್ಥೆಗಾಗಿ ಹಾಗೂ ಸಮಾಜಕ್ಕಾಗಿ ದುಡಿಯಲು ಸಾಧ್ಯವಾಯಿತು. ಸಮಾಜ ಸೇವೆ ನನ್ನ ಬದುಕಿನ ಧ್ಯೇಯವಾಗಿತ್ತು. ಅದನ್ನು ಮಾಡುವುದರಲ್ಲಿಯೇ ನಾನು ತಲ್ಲೀನನಾದೆ, ಆನಂದ ಪಟ್ಟೆ. ನನ್ನ ದೃಢ ನಿರ್ಧಾರಗಳು, ವಿಚಾರಗಳು ನನಗೆ ಶ್ರೀರಕ್ಷೆಯಾದವು’ ಎಂದು ಹಲವು ಘಟನೆಗಳನ್ನು ಮೆಲುಕು ಹಾಕಿದರು.

ಸಭೆಯಲ್ಲಿ ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ಉಪಾಧ್ಯಕ್ಷರಾದ  ರಾಜೇಂದ್ರ ಹಂಜಿ,   ಬಸವರಾಜ ತಟವಟಿ, ಕೆಎಲ್‌ಇ ನೂತನ ಆಡಳಿತ ಮಂಡಳಿಯ ಸದಸ್ಯರಾದ  ಮಹಾಂತೇಶ ಕವಟಗಿಮಠ, ಡಾ.ವಿ.ಎಸ್.ಸಾಧುನವರ,  ಶಂಕರಣ್ಣ ಮುನವಳ್ಳಿ,  ವಾಯ್.ಎಸ್.ಪಾಟೀಲ, ಡಾ.ವಿಶ್ವನಾಥ ಪಾಟೀಲ,  ಬಿ.ಆರ್.ಪಾಟೀಲ,   ಜಯಾನಂದ ಮುನವಳ್ಳಿ,   ಅನೀಲ ಪಟ್ಟೇದ,  ಅಮಿತ ಕೋರೆ,   ಪ್ರವೀಣ ಬಾಗೇವಾಡಿ,   ಎಸ್.ಸಿ.ಮೆಟಗುಡ್, ಕಾರ್ಯದರ್ಶಿಗಳಾದ ಡಾ.ಬಿ.ಜಿ.ದೇಸಾಯಿ, ಸಂಸ್ಥೆಯ ಆಜೀವ ಸದಸ್ಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button