ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ -: ಕೊರೋನ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಜನರನ್ನು ರಕ್ಷಿಸಲು ಸರಕಾರಕ್ಕೆ ಎಲ್ಲರ ಸಹಾಯ ಸಹಕಾರ ಅವಶ್ಯವಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕಿನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ. ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ತಿಳಿಸಿದ್ದಾರೆ.
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ದೇಶದಿಂದ ಕೊರೋನ ರೋಗ ಹೊಡೆದೋಡಿಸಲು ಸರಕಾರಗಳಿಗೆ ನೆರವು ಅವಶ್ಯವಿರುವುದನ್ನು ಮನಗಂಡು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಒಂದು ಕೋಟಿ ರೂ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದ್ದು, ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳಿಗೆ ಚೆಕ್ ತಲುಪಿಸಲಾಗುವುದು ಎಂದರು.
ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ದೇಶದಲ್ಲಿ ಲಾಕಡೌನ್ ಅನಿವಾರ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿತ್ವ ಇಂದು ದೇಶದ ಜನರಿಗೆ ನೆಮ್ಮದಿಯ ಬದುಕು ತಂದುಕೊಟ್ಟಿದೆ, ಪ್ರತಿಯೊಬ್ಬರು ಕೇಂದ್ರ ಹಾಗೂ ರಾಜ್ಯ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಜೊತೆಗೆ ಮನೆಯಲ್ಲಿಯೇ ಇದ್ದು ಕುಟುಂಬದ ಜೊತೆಗೆ ಸಮಾಜ ರಕ್ಷಣೆಯ ಹೊಣೆ ಹೊರಬೇಕಾಗಿದೆ ಎಂದರು.
ಮಾರುಕಟ್ಟೆಯಲ್ಲಿ ದಿನಸಿ ವಸ್ತುಗಳ ಕೊರತೆ ಸೃಷ್ಟಿಸುವ ಮೂಲಕ ಹೋಲ್‌ಸೇಲ್ ವ್ಯಾಪಾರಸ್ಥರು ಹೆಚ್ಚಿನ ದರಕ್ಕೆ ದಿನಸಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಜಿಲ್ಲಾಡಳಿತ ಜನರ ರಕ್ಷಣೆಗೆ ನಿಲ್ಲಬೇಕು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ