Latest

ಸಪ್ತಪದಿಗೆ 17 ನಿಯಮ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇನ್ನುಮುಂದೆ ಮದುವೆ ಸಮಾರಂಭ, ಕಾರ್ಯಕ್ರಮಗಳು ಕೂಡ ಸರ್ಕಾರದ ನಿಯಮಾನುಸಾರವೇ ನಡೆಯಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಸಪ್ತಪದಿಗೆ 17 ಮಾರ್ಗಸೂಚಿಯನ್ನು ರೂಪಿಸಿ ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ

ಲಾಕ್ ಡೌನ್ ಅವಧಿ ಮುಗಿಯುತ್ತಾ ಬಂದರೂ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ನಡುವೆ ಮೇ 18ರಿಂದ ಲಾಕ್ ಡೌನ್ ನಲ್ಲಿ ಇನ್ನಷ್ಟು ಸಡಿಲಿಕೆಕೂಡ ಆಗಲಿದೆ. ಇದೇ ವೇಳೆ ರಾಜ್ಯದ ವಿವಿಧೆಡೆಗಳಲ್ಲಿ ಮದುವೆ ಸೀಜನ್ ಕೂಡ ಆರಂಭವಾಗಿದ್ದು, ಕೊರೊನಾ ಸೋಂಕು ನಿಯಂತ್ರಿಸುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಪ್ತಪದಿಗೆ 17 ಮಾರ್ಗಸೂಚಿಯನ್ನು ರೂಪಿಸಿ, ಮದುವೆಯಲ್ಲಿಯೂ ಸಾಮಾಜಿಕ ಅಂತರ ಕಡ್ಡಾಯವಾಗಿ ಹೇಗೆ ಕಾಯ್ದುಕೊಳ್ಳಬೇಕು ಎಂಬ ಬಗ್ಗೆ ನಿಯಮಗಳು ಜಾರಿ ಮಾಡಿದೆ.

ಸರ್ಕಾರ ಪಟ್ಟಿಮಾಡಿರುವ 17 ನಿಯಮಗಳನ್ನು ಮದುವೆಯಾಗುವವರು ಹಾಗೂ ಸಮಾರಂಭದಲ್ಲಿ ಭಾಗಿಯಾಗುವ ಜನರು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದೆ.

17 ಮಾರ್ಗಸೂಚಿ:
* ಯಾವುದೇ ಮದುವೆಗಳಿಗೆ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಅನುಮತಿ ಕಡ್ಡಾಯ
* ಒಂದು ಮದುವೆಯಲ್ಲಿ 50 ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ
* ಗರ್ಭಿಣಿಯರು, 65 ವರ್ಷ ಮೇಲ್ಪಟ್ಟ ವೃದ್ಧರು, 10 ವರ್ಷದೊಳಗಿನ ಮಕ್ಕಳಿಗೆ ನಿರ್ಬಂಧ.
* ಕಂಟೈನ್ಮೆಂಟ್ ವಲಯದವರಿಗೆ ನಿರ್ಬಂಧ.
* ಸೂಕ್ತ ಸಾರ್ವಜನಿಕ ಸ್ಥಳ ಮತ್ತು ನೈಸರ್ಗಿಕ ವಾತಾವರಣ ಇರುವೆಡೆ ಮದುವೆ
* ಮದುವೆಗಳಲ್ಲಿ ಎಸಿಗಳು ನಿರ್ಬಂಧ.
* ಮದುವೆಗಳಲ್ಲಿ ಒಬ್ಬ ನೋಡಲ್ ಅಧಿಕಾರಿಯಿರುವುದು ಕಡ್ಡಾಯ
* ಮದುವೆಗೆ ಬಂದವರ ಲಿಸ್ಟ್ ನೋಡಲ್ ಅಧಿಕಾರಿಗೆ ಸಲ್ಲಿಸುವುದು ಕಡ್ಡಾಯ
* ಮದುವೆಗೆ ಬರೋರು ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು
* ಮದುವೆ ಸ್ಥಳಗಳ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ.
* ಮದುವೆಗೆ ಬರೋರಿಗೆ ಮಾಸ್ಕ್ ಕಡ್ಡಾಯ.
* ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. 99.5 ಸೆಲ್ಸಿಯಸ್ ಉಷ್ಣತೆ, ಜ್ವರ, ಕೆಮ್ಮು, ನೆಗಡಿ, ಉಸಿರಾಟ ಸಮಸ್ಯೆ ಇರೋರನ್ನು ನಿರ್ಬಂಧಿಸಿ ಅವರನ್ನು ಆಸ್ಪತ್ರೆಗೆ ಕಳಿಸಬೇಕು.
* ಒಂದು ಮೀಟರ್ ಸಾಮಾಜಿಕ ಅಂತರ.
* ಸಾಬೂನಿನಲ್ಲಿ ಹ್ಯಾಂಡ್ ವಾಷ್ ಗೆ ವ್ಯವಸ್ಥೆ ಇರಬೇಕು
* ಸಾರ್ವಜನಿಕವಾಗಿ ಉಗುಳುವಂತಿಲ್ಲ.
* ಮದುವೆ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು.
* ಮದ್ಯ, ಪಾನ್, ಗುಟ್ಕಾ, ತಂಬಾಕು ಸೇವನೆ ನಿಷಿದ್ಧ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button