ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆಗೆ ಬಹುದೊಡ್ಡ ಹೊಡೆತಬಿದ್ದಿದ್ದು, ಈ ನಡುವೆ ಮಾರುಕಟ್ಟೆಗೆ ಚೈತನ್ಯ ನೀಡುವ ನಿಟ್ಟಿನಲ್ಲಿ ಆರ್ ಬಿಐ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೇ ವೇಳೆ ಇಎಂಐ ಪಾವತಿಗೆ ಮೂರು ತಿಂಗಳ ಕಾಲಾವಕಾಶ ಮತ್ತೆ ಮುಂದೂಡುವ ಮೂಲಕ ಮದ್ಯಮವರ್ಗದ ಜನರಿಗೆ ಬಿಗ್ ರಿಲೀಫ್ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಬಿಐ ಗವರ್ನರ್ ಶಂಕ್ತಿಕಾಂತ್ ದಾಸ್, ರೆಪೋ ಮತ್ತು ರಿವರ್ಸ್ ರೆಪೋ ದರ ಇಳಿಕೆ ಮಾಡಿದ್ದಾರೆ. ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ ಕಡಿತ ಮಾಡಲಾಗಿದೆ. ಅಂದರೆ ಶೇ. 4.4ರಷ್ಟಿದ್ದ ರೆಪೋ ದರ ಶೇ. 4ಕ್ಕೆ ಇಳಿಕೆಯಾಗಿದೆ. ರಿವರ್ಸ್ ರಿಪೋ ದರವನ್ನೂ ಕೂಡ ಶೇ. 3.35ಕ್ಕೆ ಇಳಿಸಲಾಗಿದೆ.
ಲಾಕ್ ಡೌನ್ ಘೋಷಣೆಯಾದ ಬಳಿಕ ಸಾಲದ ಕಂತುಗಳನ್ನು ಕಟ್ಟುವುದನ್ನು ಮೂರು ತಿಂಗಳು ಮುಂದೂಡಿದ್ದ ಆರ್ಬಿಐ ಇದೀಗ ಇನ್ನೂ 3 ತಿಂಗಳು ಮುಂದೂಡಲಾಗಿದೆ. ಆ.31ರವರೆಗೂ ಕಂತು ಪಾವತಿಗೆ ಕಾಲಾವಕಾಶ ನೀಡಲಾಗಿದೆ. ಮೂರು ತಿಂಗಳಾದ ಬಳಿಕ ಒಟ್ಟಾರೆ ಆರು ತಿಂಗಳು ಬಾಕಿ ಉಳಿದ ಕಂತುಗಳ ಮೇಲಿನ ಬಡ್ಡಿ ಸೇರಿಸಿ ಸಾಲ ಪಾವತಿ ಮಾಡಬೇಕಾಗುತ್ತದೆ.
ದೇಶದ ಆರ್ಥಿಕ ಸ್ಥಿತಿ ನಿರೀಕ್ಷೆಮೀರಿ ಸಂಕಷ್ಟಕ್ಕೆ ಸಿಲುಕಿದೆ ಎಂದ ಅವರು ಕೃಷಿ ಕ್ಷೇತ್ರ ಮಾತ್ರ ಆಶಾದಾಯಕವಾಗಿದೆ. ಕಚ್ಛಾ ತೈಲದ ಬೆಲೆ ಕಡಿಮೆಯಾಗಿರುವುದು ಆದಾಯ ಹರಿವಿನ ಮೇಲೆ ಪರಿಣಾಮ ಬೀರಿದೆ. ಆಹಾರ ಹಣದುಬ್ಬರ ಪ್ರಮಾಣವು ಏಪ್ರಿಲ್ನಲ್ಲಿ ಶೆ. 8.6ಕ್ಕೆ ಹೆಚ್ಚಿದೆ. ಔದ್ಯಮಿಕ ಉತ್ಪಾದನೆಗೂ ಹೊಡೆತ ಬಿದ್ದಿದೆ. ಹೂಡಿಕೆ ಅವಕಾಶಕ್ಕೂ ಸಂಚಕಾರವಾಗಿದೆ. ಆಮದು ಕೂಡ ಶೇ. 58ರಷ್ಟು ತಗ್ಗಿದೆ. ಒಟ್ಟಾರೆ 2021ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ನಕಾರಾತ್ಮಕವಾಗಲಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ