ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಮಹಾಮಾರಿ ವೈದ್ಯರನ್ನು ಕೂಡ ಬಿಟ್ಟಿಲ್ಲ. ದೆಹಲಿ ಏಮ್ಸ್ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್)ನ ಹಿರಿಯ ವೈದ್ಯರಾದ ಡಾ.ಜಿತೇಂದ್ರ ನಾಥ್ ಪಾಂಡೆ (78) ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇವರು ಏಮ್ಸ್ನ ಶ್ವಾಸಕೋಶಶಾಸ್ತ್ರ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವಿಭಾಗ ಒಂದು ವಾರದಿಂದ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿತ್ತು.
ಜಿತೇಂದ್ರನಾಥ್ ಪಾಂಡೆ ಅವರ ಪತ್ನಿಗೂ ಕಳೆದವಾರ ಕೊರೊನಾ ಪಾಸಿಟಿವ್ ಬಂದಿದೆ. ಅವರನ್ನು ಹೋಂ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗೆ ಅವರು ರೋಗದಿಂದ ಗುಣಮುಖರಾಗುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಅವರ ಪತಿ ಜಿತೇಂದ್ರನಾಥ್ ಸೋಂಕಿಗೆ ಬಲಿಯಾಗಿದ್ದಾರೆ.
ಒಂದುದಿನದ ಹಿಂದೆ ಏಮ್ಸ್ನ ಆರ್.ಪಿ.ಸಿ ಮೆಸ್ನಲ್ಲಿ ಕೆಲಸ ಮಾಡುವ ನೌಕರನೋರ್ವ ಕೊರೊನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದ. ಇದಾದ ಒಂದೇ ದಿನದಲ್ಲಿ ಪಾಂಡೆಯವರು ಕೂಡ ಸಾವನ್ನಪ್ಪಿದ್ದು, ಏಮ್ಸ್ ವೈದ್ಯರಲ್ಲಿ ಆತಂಕ ಮನೆ ಮಾಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ