ಇಬ್ಬರನ್ನೂ ಬಂಧಿಸಿ, ಕಪ್ಪು ಪಟ್ಟಿಗೆ ಸೇರಿಸಿ
ಪ್ರಗತಿವಾಹಿನಿ ಸುದ್ದಿ, ಸವದತ್ತಿ – ಕಳೆದವಾರ ಹೆಸ್ಕಾಂ ಅಧಿಕಾರಿ ಸಿ.ಎಸ್.ಮಠಪತಿಯವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಹೆಸ್ಕಾಂ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾಗೂ ರೈತ ಸಂಘಟನೆಯ ಮುಖಂಡರು ಮಂಗಳವಾರ ಹೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಹೆಸ್ಕಾಂ ಗುತ್ತಿಗೆದಾರ ರಾಮದುರ್ಗ ತಾಲೂಕಿನ ಕಟಕೋಳದ ರವಿಕುಮಾರ ಕುಂಬಾರ ಮತ್ತು ಅವನ ತಂದೆ ಸವದತ್ತಿ ಹೆಸ್ಕಾಂನ ಎಇಇ ಸಿ.ಎಸ್.ಮಠಪತಿಯವರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸುವುದರ ಜೊತೆಗೆ ಅವರ ಮೇಲೆ ಹಲ್ಲೆ ಮಾಡಿರುವುದರಿಂದ ಅವರನ್ನು ಕೂಡಲೆ ಬಂಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮುಂಜಾನೆ ೧೦ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೆ ಹೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ಸೇರಿದ ಸಿಬ್ಬಂದಿ ಅಧೀಕ್ಷಕ ಅಭಿಯಂತರರಾದ ಗಿರಿಧರ ಕುಲಕರ್ಣಿಯವರು ಬೆಳಗಾವಿಯಿಂದ ಸ್ಥಳಕ್ಕೆ ಆಗಮಿಸಿ ನ್ಯಾಯ ಒದಗಿಸುವ ಭರವಸೆ ನೀಡುವವರೆಗೆ ಹಿಂದೆ ಸರಿಯುವುದಿಲ್ಲ ಎಂದು ಹಠ ಹಿಡಿದಿದ್ದರು. ಹೆಸ್ಕಾಂ ಅಧೀಕ್ಷಕ ಅಭಿಯಂತರರು ಸ್ಥಳಕ್ಕೆ ಆಗಮಿಸಿ ಸಿಬ್ಬಂದಿಯ ಮನವಿಯನ್ನು ಸ್ವೀಕರಿಸಿ ಅವರಿಗೆ ಭರವಸೆ ನೀಡಿದ ನಂತರ ಪ್ರತಿಭಟನೆಯಿಂದ ಹಿಂದೆ ಸರಿದರು.
ಹೆಸ್ಕಾಂನ ಸಿಬ್ಬಂದಿಯ ಮೇಲೆ ನಡೆಯುತ್ತಿರುವ ಹಲ್ಲೆಯಂತ ಯತ್ನಗಳು ಖಂಡನೀಯವಾಗಿದ್ದು, ಹಲ್ಲೆ ಮಾಡಿದ ಗುತ್ತಿಗೆದಾರ ರವಿಕುಮಾರ ಕುಂಬಾರ ಮತ್ತು ಅವನ ತಂದೆ ನಿವೃತ್ತ ಹೆಸ್ಕಾಂ ನೌಕರ ಬಸಪ್ಪ ಕುಂಬಾರ ನನ್ನು ಬಂಧಿಸುವುದರ ಜೊತೆಗೆ ಗುತ್ತಿಗೆದಾರನ ಲೈಸೆನ್ಸ್‌ನ್ನು ಕಪ್ಪು ಪಟ್ಟಿಯಲ್ಲಿ ಜೋಡಿಸಬೇಕೆಂದು ಒತ್ತಾಯಿಸಿದರು.
ಹೆಸ್ಕಾಂನ ಅಧೀಕ್ಷಕ ಅಭಿಯಂತರ ಗಿರಿಧರ ಕುಲಕರ್ಣಿ ಹೆಸ್ಕಾಂ ಸಿಬ್ಬಂದಿಯ ಮನವಿಯನ್ನು ಸ್ವೀಕರಿಸಿ ಮಾತನಾಡಿ, ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಮೇಲೆ ಅಸಭ್ಯವಾಗಿ ವರ್ತಿಸಿ ಅವರ ಮೇಲೆ ಹಲ್ಲೆ ಮಾಡಿರುವ ಹಲ್ಲೆ ಗುತ್ತಿಗೆದಾರನನ್ನು ಬಂಧಿಸಲು ಎಸ್.ಪಿಯವರೊಂದಿಗೆ ಚರ್ಚಿಸಿ ಕೂಡಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ಹೆಸ್ಕಾಂನ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿರುವ ಆರೋಪಿತನ ಲೈಸೆನ್ಸ್ ರದ್ದುಪಡಿಸಲು ಇಲಾಖೆಯಿಂದ ಕೂಡಲೆ ಶಿಫಾರಸ್ಸು ಮಾಡಲಾಗುತ್ತಿದೆ ಎಂದರು.
ಬೈಲಹೊಂಗಲ ಕಾರ್ಯನಿರ್ವಾಹಕ ಅಭಿಯಂತರ ಅಣ್ಣಪ್ಪ ಲಮಾಣಿ, ಸವದತ್ತಿ ಹೆಸ್ಕಾಂ ಉಪ ವಿಭಾಗದ ಎಇಇ ಸಿ.ಎಸ್.ಮಠಪತಿ, ಹೆಸ್ಕಾಂ ಪ್ರಾಥಮಿಕ ಸಮಿತಿ ಅಧ್ಯಕ್ಷ ಎಸ್.ಪಿ.ಲಮಾಣಿ ಮತ್ತು ಸ್ಥಳೀಯ ಸಮಿತಿ ಬೈಲಹೊಂಗಲದ ಕಾರ್ಯದರ್ಶಿ ರವಿ ಬಾರಿಮರದ, ಕೇಂದ್ರ ಕಾರ್ಯಕಾರಿಣಿ ಸದಸ್ಯ ಎನ್.ಬಿ.ಕುಂಬಾರ, ಎಸ್.ಓ ಟೀಕೆಹಳ್ಳಿ, ಬಾಬು ದೊಡವಾಡ, ಎಮ್.ಎಸ್.ಹಿರೇಮಠ, ಬಿ.ಎ.ಗಾಣಿಗೇರ, ಎಮ್.ಸಿ.ನಾಯ್ಕರ, ಎಸ್.ಎಸ್.ಕರಾಳೆ, ಕುಬೇರ ಸಗಣಿ, ಆರ್.ಎಮ್.ಭಜಂತ್ರಿ, ಕೆ.ಎಸ್.ನಿಕ್ಕಮ್ಮನವರ, ಲೋಕರೆ ಹಾಗೂ ಹೆಸ್ಕಾಂ ಸಿಬ್ಬಂದಿ ಮತ್ತು ರೈತ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ