ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆ ಬೆಳೆದ ಎಲ್ಲಾ ರೈತರಿಗೂ 5 ಸಾವಿರ ರೂ ಪರಿಹಾರ ನೀಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬೆಳೆ ನಾಶವಾದ ರೈತರಿಗೆ ಮಾತ್ರ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಎಲ್ಲಾ ರೈತರಿಗೂ 5 ಸಾವಿರ ಪರಿಹಾರ ನೀಡಲು ನಿರ್ಧರಿಸಿದೆ ಎಂದರು.
ಕೊರೊನಾ ಸೋಂಕು ಹೆಚ್ಚಾಗಿ ಪತ್ತೆಯಾಗಿರುವ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ ಈ 5 ರಾಜ್ಯಗಳಿಂದ ಬರುವವರಿಗೆ ಇನ್ನೂ 15 ದಿನಗಳಕಾಲ ನಿರ್ಬಂಧ ಹೇರಲಾಗಿದೆ. ಈ ರಾಜ್ಯಗಳಿಂದ ಬಸ್, ರೈಲು, ವಿಮಾನಗಳ ಮೂಲಕ ಬರುವವರಿಗೆ ತಡೆ ಹಿಡಿಯಲಾಗುವುದು ಎಂದು ಹೇಳಿದರು.
ಈಗಾಗಲೇ ಈ ರಾಜ್ಯದಿಂದ ಬಂದವರಲ್ಲಿ ಸೋಂಕಿನ ಸಂಖ್ಯೆ ಹೆಚ್ಚುತ್ತಿದ್ದು, ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಕ್ವಾರಂಟೈನ್ ನಲ್ಲಿರುವ ಎಲ್ಲರನ್ನೂ ಕೊವಿಡ್ ಪರೀಕ್ಷೆಗೆ ಒಳಪಡಿಸಲು ವ್ಯವಸ್ಥೆ ಮಾಡಲಾಗಿದ್ದು, ಆ ಬಳಿಕ ಹೊರ ರಾಜ್ಯದಲ್ಲಿರುವವರನ್ನು ಹಂತ ಹಂತವಾಗಿ ರಾಜ್ಯಕ್ಕೆ ಕರೆಸಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಇನ್ನು ಲಾಕ್ ಡೌನ್ ಬಗ್ಗೆ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.
ಪಿಎಸ್ ಐ ನೇಮಕಾತಿ ವಯೋಮಿತಿ ಹೆಚ್ಚಳ ಮಾಡಲಾಗಿದ್ದು, ಸಾಮಾನ್ಯ ವರ್ಗಕ್ಕೆ 28 ರಿಂದ 30 ವರ್ಷದವರೆಗೆ ಹಾಗೂ ಎಸ್ ಸಿ/ ಎಸ್ ಟಿ ವರ್ಗದವರಿಗೆ 30 ರಿಂದ 32 ವರ್ಷದವರೆಗೆ ವಯೋಮಿತಿ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.
ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ ಚಿಕ್ಕಬಳ್ಳಾಪುರಗಳಲ್ಲಿ ಔಷಧ ಉಗ್ರಾಣ ನಿರ್ಮಾಣಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, 18 ಕೋಟಿ ವೆಚ್ಚದಲ್ಲಿ ಉಗ್ರಾಣ ನಿರ್ಮಾಣವಾಗಲಿದೆ ಎಂದು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ