ಪ್ರಗತಿವಾಹಿನಿ ಸುದ್ದಿ; ರಾಯಗಢ: ಛತ್ತೀಸ್‌ಗಢದ ಮೊದಲ ಮುಖ್ಯಮಂತ್ರಿ, ಕಾಂಗ್ರೆಸ್ ಮಾಜಿ ನಾಯಕ ಅಜಿತ್ ಜೋಗಿ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಜಿತ್ ಜೋಗಿ ಅವರನ್ನು ರಾಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಅಜಿತ್ ಜೋಗಿ ಅವರಿಗೆ ಮೇ 9ರಂದು ಮೊದಲ ಬಾರಿಗೆ ಮನೆಯಲ್ಲಿ ಹೃದಯಾಘಾತವಾಗಿತ್ತು. ಈ ಹಿನ್ನೆಲೆಯಲ್ಲಿ ಅಂದೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅವರಿಗೆ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದ ಅವರಿಗೆ ಬುಧವಾರ ಮತ್ತೆ ಹೃದಯಾಘಾತವಾಗಿತ್ತು. ಇದೀಗ ಅವರು ನಿಧನರಾಗಿದ್ದಾರೆ.
ಅಜಿತ್ ಜೋಗಿ ಕಾಂಗ್ರೆಸ್ ಪಕ್ಷ ಸೇರಿ 2000 ಇಸವಿಯಲ್ಲಿ ಹೊಸದಾಗಿ ಛತ್ತೀಸ್‌ಗಢ ರಾಜ್ಯ ರಚನೆಯಾದಾಗ ಮೊದಲ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. 2000 ದಿಂದ 2003ರವರೆಗೆ ಛತ್ತೀಸ್‌ಗಢ ರಾಜ್ಯದ ಸಿಎಂ ಹುದ್ದೆ ಅಲಂಕರಿಸಿದ್ದರು. ಬಳಿಕ 2016ರಲ್ಲಿ ಅಜಿತ್ ಜೋಗಿ ತಮ್ಮ ಪತ್ನಿ ಮತ್ತು ಪುತ್ರನ ಜೊತೆಗೂಡಿ ಕಾಂಗ್ರೆಸ್ ತೊರೆದು ‘ಜನತಾ ಕಾಂಗ್ರೆಸ್ ಛತ್ತೀಸ್‌ಗಢ’ ಎಂಬ ಪಕ್ಷವನ್ನು ಕಟ್ಟಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ