ಪ್ರಗತಿವಾಹಿನಿ ಸುದ್ದಿ; ಉಡುಪಿ: ಕೊರೊನಾ ಸೋಂಕಿನ ವಿರುದ್ಧ ಕಳೆದ 10 ದಿನಗಳಿಂದ ಹೋರಾಟ ನಡೆಸಿದ್ದ 18 ಮಕ್ಕಳು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೊರೊನಾದಿಂದ ಗುಣಮುಖರಾದ ಎಲ್ಲಾ ಮಕ್ಕಳಿಗೆ ಡ್ರಾಯಿಂಗ್ ಬುಕ್, ಚಾಕ್ಲೇಟ್ ಕೊಟ್ಟು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆಸ್ಪತ್ರೆಯಿಂದ ಮನೆಗೆ ಕಳುಹಿಸಿಕೊಟ್ಟರು.
ಉಡುಪಿಯಲ್ಲಿ ಇಂದು ಒಂದೇ ದಿನ 40 ಜನ ಕೊರೊನಾ ಸೋಂಕಿತರು ರೋಗಮುಕ್ತರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಪೈಕಿ 18 ಮಕ್ಕಳನ್ನು ಟಿಎಂಎ ಪೈ ಕೋವಿಡ್ 19 ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಉಡುಪಿ ಜಿಲ್ಲಾಡಳಿತ ಮತ್ತು ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯರು ಮಕ್ಕಳು ಹಾಗೂ ಗುಣಮುಖರಾದ ಇತರನ್ನು ಶುಭಕೋರಿ ಕಳುಹಿಸಿಕೊಟ್ಟಿದ್ದಾರೆ.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ 35 ಮಕ್ಕಳಿಗೆ ಕೊರೊನಾ ಪಾಸಿಟೀವ್ ಬಂದಿತ್ತು. ಮಕ್ಕಳಿಗೆ ಉಡುಪಿ ಟಿಎಂಎ ಪೈ, ಕಾರ್ಕಳದ ಸರ್ಕಾರಿ ಆಸ್ಪತ್ರೆ ಮತ್ತು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಎಲ್ಲ ಮಕ್ಕಳು ಸದ್ಯ ಆರೋಗ್ಯವಾಗಿದ್ದಾರೆ. ಮಕ್ಕಳ ಜೊತೆ ಜಿಲ್ಲೆಯಿಂದ ಇಂದು 45 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈಗ ಸರ್ಕಾರದ ನಿಯಮದಂತೆ ವೈದ್ಯರ ಸೂಚನೆಯಂತೆ ಮನೆಯಲ್ಲಿಯೇ 14 ದಿನ ಹೋಮ್ ಕ್ವಾರಂಟೈನ್ ಒಳಪಡಿಸಲಾಗುವುದು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ