ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೆಹಲಿಯ ಆಪ್ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ಹಿನ್ನಲೆಯಲ್ಲಿ ಸಚಿವರಿಗೆ ಪ್ಲಾಸ್ಮಾ ಥೆರಪಿ ಮಾಡಲು ನಿರ್ಧರಿಸಲಾಗಿದೆ.
ಸಚಿವ ಜೈನ್ ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶ್ವಾಸಕೋಶದಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗಿರುವುದರಿಂದ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿರುವುದರಿಂದ ಕುಟುಂಬಸ್ಥರ ಒಪ್ಪಿಗೆ ಬಳಿಕ ಅವರಿಗೆ ಪ್ಲಾಸ್ಮಾ ಥೆರಪಿ ನೀಡಲು ನಿರ್ಧರಿಸಲಾಗಿದೆ.
ಇದೇ ಕಾರಣಕ್ಕೆ ಸತ್ಯೇಂದರ್ ಜೈನ್ ಅವರನ್ನು ಸಾಕೇತ್ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನಾಳೆ ಅಥವಾ ಮಾಡಿದ್ದು ಪ್ಲಾಸ್ಮಾ ಥೆರಪಿ ನಡೆಸುವ ಸಾಧ್ಯತೆ ಇದೆ.
ಸತ್ಯೇಂದರ್ ಜೈನ್ ಆರಂಭದಲ್ಲಿ ತೀವ್ರ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಮೊದಲು ಕೊರೊನಾ ಟೆಸ್ಟ್ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಚಿಕಿತ್ಸೆ ನೀಡಿದರೂ ಜ್ವರ ಕಡಿಮೆಯಾಗದ ಕಾರಣ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ