ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಹಾರಾಷ್ಟ್ರ ರಾಜ್ಯ ಸಾತಾರಾದ ಗುಂಫಣ ಅಕಾಡೆಮಿ ನೀಡುವ ಗುಂಫಣ ಸಾಂಸ್ಕೃತಿಕ ಪುರಸ್ಕಾರ ಕನ್ನಡದ ನಾಟಕಕಾರ, ಬೆಳಗಾವಿಯ ಡಾ.ಡಿ.ಎಸ್.ಚೌಗಲೆ ಅವರಿಗೆ ಲಭಿಸಿದೆ.
ಅವರ ನಾಟಕ, ಸಾಹಿತ್ಯ ಮತ್ತು ಚಿತ್ರಕಲೆಯ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುವುದು. ಗುಂಫಣ ಅಕಾಡೆಮಿಯು ಕಳೆದ 15 ವರ್ಷಗಳಿಂದ ಮರಾಠಿ ಭಾಷಿಕರು ನೆಲೆಸಿರುವ ವಿವಿಧ ರಾಜ್ಯಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನಗಳನ್ನು ಏರ್ಪಡಿಸುತ್ತ ಬಂದಿದೆ. ಹಾಗೂ ಪ್ರತಿ ವರ್ಷ ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸಿದವರನ್ನು ಗುರುತಿಸಿ ಪುರಸ್ಕಾರಗಳನ್ನು ನೀಡುತ್ತ ಬಂದಿದೆ. ಇದುವರೆಗೆ ಗೋವಾ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕಗಳಲ್ಲಿ ಗುಂಫಣ ಮರಾಠಿ ಸಾಹಿತ್ಯ ಸಮ್ಮೇಳನಗಳು ನಡೆದಿವೆ.
ಮಾಂಢ್ರೆ-ಪೇಢಣ ಗೋವೆಯ ರಾಮದಾಸ ಕೇಳಕರ (ಗುಂಫಣ ಸಾಹಿತ್ಯ), ಮಹುದ ಬುದ್ರಕ-ಸೊಲ್ಲಾಪುರ ಮಹಾರಾಷ್ಟ್ರದ ಮಹೇಂದ್ರ ಬಾಜಾರೆ (ಗುಂಫಣ ಸಾಮಾಜಿಕ), ಪುಣೆ-ಮಹಾರಾಷ್ಟ್ರದ ಜಯಶ್ರೀ ಘುಲೆ (ಗುಂಫಣ ಸದ್ಭಾವನಾ), ಭುಯಿಂಜ- ಸಾತಾರಾದ ಮಧುಕರ ಖರೆ (ಗುಂಫಣ ಪತ್ರಕರ್ತ) ಅವರಿಗೆ ಸಹ ಪ್ರಶಸ್ತಿ ನೀಡಲಾಗುತ್ತಿದೆ.
ಫೆಬ್ರುವರಿ 10 ರಂದು ಬೆಳಗಾವಿ ಸಮೀಪ ಕಾವಳೇವಾಡಿಯಲ್ಲಿ ಜರುಗುವ ಅಂತರರಾಜ್ಯ 16 ನೆಯ ಗುಂಫಣ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಡಾ.ಬಸವೇಶ್ವರ ಚೆಣಗೆ ಮತ್ತು ಉಪಾಧ್ಯಕ್ಷ ಬಬನ ಪೋತದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ