Kannada NewsKarnataka NewsLatest

ಅರಭಾವಿ ಕ್ಷೇತ್ರದ ಜನರು ಪುಣ್ಯವಂತರು – ಮುರುಘರಾಜೇಂದ್ರ ಮಹಾಸ್ವಾಮಿಗಳು

ಪ್ರಗತಿವಾಹಿನಿ ಸುದ್ದಿ, ಗೋಕಾಕ : ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಂತಹ ಹೃದಯಮಯಿ ಶಾಸಕರನ್ನು ಪಡೆದಿರುವುದು ಅರಭಾವಿ ಕ್ಷೇತ್ರದ ಜನರ ಪುಣ್ಯವೆಂದು ಶೂನ್ಯ ಸಂಪಾದನಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ತಾಲೂಕಿನ ಮೆಳವಂಕಿ ಗ್ರಾಮದಲ್ಲಿ ನೂತನವಾಗಿ ೧೬.೨೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ರಾಜೀವಗಾಂಧಿ ಸೇವಾ ಕೇಂದ್ರದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಕಳೆದ ಎರಡು ದಶಕಗಳಿಂದ ಅರಭಾವಿ ಕ್ಷೇತ್ರದ ಜನರ ಸಂಪರ್ಕವನ್ನಿಟ್ಟುಕೊಂಡು ಸಹಕಾರಿ ರಂಗದ ಮೂಲಕ ಚಿರಪರಿಚಿತರಾಗಿ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಕ್ಕರೆ ಕಾರ್ಖಾನೆಯ ಚೇರಮನ್‌ರಾಗಿ ಜನಮನ್ನಣೆ ಗಳಿಸಿದರು. ನಂತರ ಶಾಸಕರಾಗಿ, ಸಚಿವರಾಗಿ ಅಪಾರವಾಗಿ ಸೇವೆ ಸಲ್ಲಿಸುತ್ತ ಈ ಭಾಗದಲ್ಲಿ ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡರು. ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕ್ಷೇತ್ರದ ಪ್ರತಿಯೊಂದು ಗ್ರಾಮಗಳನ್ನು ಉದ್ಧಾರ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಮಾತೃ ಹೃದಯದ ಬಾಲಚಂದ್ರ ಜಾರಕಿಹೊಳಿ ಅವರು ಜನರು ಸಂಕಷ್ಟದಲ್ಲಿದ್ದಾಗ ಅದನ್ನು ಸಮರ್ಥವಾಗಿ ನಿಭಾಯಿಸಿ ಜನರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಇಂತಹ ಶಾಸಕರು ಸಿಗುವುದು ಅಪರೂಪ. ಕೋವಿಡ್-೧೯ ಸಮಯದಲ್ಲಿ ಕ್ಷೇತ್ರದ ಎಲ್ಲ ಜನರಿಗೂ ಆಹಾರ ಧಾನ್ಯಗಳ ಕಿಟ್, ಮಾಸ್ಕ್‌ಗಳನ್ನು ವಿತರಿಸಿರುವುದು ಮಾನವೀಯತೆಗೆ ಸಾಕ್ಷಿಯಾಗಿದೆ.

ಇವರನ್ನು ಎಷ್ಟು ಗುಣಗಾನ ಮಾಡಿದರೂ ಅದು ಕಡಿಮೆಯೇ. ಇವರಂತಹ ದಾನಿಗಳು ಮತ್ತೊಬ್ಬರಿಲ್ಲ. ಬಾಲಚಂದ್ರ ಅವರು ದಾನಶೂರ ಕರ್ಣನೆಂದು ಮುರುಘರಾಜೇಂದ್ರ ಮಹಾಸ್ವಾಮಿಗಳು  ಮುಕ್ತ ಕಂಠದಿಂದ ಶ್ಲಾಘಿಸಿದರು.

ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯತಿ ಕಟ್ಟಡವನ್ನು ಉದ್ಘಾಟಿಸಿದ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು, ಮೆಳವಂಕಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿವಿಧ ಯೋಜನೆಗಳ ಅಡಿಯಲ್ಲಿ ಕೋಟ್ಯಾಂತರ ರೂ. ವೆಚ್ಚದ ಅಭಿವೃದ್ಧಿ ಪರ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಳೆದ ೧೫ ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮೆಳವಂಕಿ ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಶಕುಂತಲಾ ಕಾಪಶಿ, ತಾಪಂ ಸದಸ್ಯೆ ಬಾಳವ್ವ ಬಬಲಿ, ಪಿಕೆಪಿಎಸ್ ಅಧ್ಯಕ್ಷ ಭೀಮಪ್ಪ ಕಾಪಶಿ, ಮುಖಂಡರಾದ ಮಹಾದೇವ ಪತ್ತಾರ, ಸಿದ್ದಪ್ಪ ಹಂಜಿ, ಭೀಮಗೌಡ ಪಾಟೀಲ, ಅಡಿವೆಪ್ಪ ಮುತವಾಡ, ಅಲ್ಲಪ್ಪ ಕಂಕಣವಾಡಿ, ಈರಪ್ಪ ಬೀರನಗಡ್ಡಿ, ಯಲ್ಲವ್ವಾ ಶಿಂತ್ರಿ, ಗ್ರಾಪಂ ಸದಸ್ಯರು, ಪಿಡಿಓ ಯಲ್ಲಪ್ಪ ಮೂಡಲಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಅಂಕಲಗಿ ಮಠದ ಗುರುಸಿದ್ಧೇಶ್ವರ ಮಹಾಸ್ವಾಮಿಗಳು ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button