ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಮಚ್ಚೆ ಬಳಿಯ 2ನೇ ಪಡೆ ಕೆ.ಎಸ್.ಆರ್.ಪಿ ಅಧಿಕಾರಿ ವರ್ಗದಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಭಾಗವಹಿಸಿ, ಸಸಿ ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅಂಗಡಿ, ಕೊವಿಡ್19 ಬಿಕ್ಕಟ್ಟಿನ ಸಂದರ್ಭದಲ್ಲಿ ಪೋಲೀಸ್ ಇಲಾಖೆಯವರ ಬಹುಮುಖ್ಯ ಪಾತ್ರವನ್ನು ನೆನೆದು, ಅವರ ಅನನ್ಯ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದರು. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಂದಿಗೆ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹಗಲಿರುಳು ಸೇವೆ ಸಲ್ಲಿಸುತ್ತಿರುವ ಪೋಲೀಸ್ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದ ಅವರು, ಪರಿಸರ ಸಂರಕ್ಷಣೆಯ ಕುರಿತು ನಾವು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ 2 ನೇ ಪಡೆಯ ಕೆ.ಎಸ್.ಆರ್.ಪಿ ಬೆಳಗಾವಿ ಕಮಾಂಡೆಂಟ್ ಹಂಜಾ ಹುಸೇನ್, ಸಹಾಯಕ ಕಮಾಂಡೆಂಟ್ ಹೇಮಂತ್ ಕುಮಾರ್, ಸಹಾಯಕ ಕಮಾಂಡೆಂಟ್ ಎನ್.ಪಿ. ಯಡಾಳ್, ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಜಿನೇಶ್, ಪ್ರಶಾಂತ್, ಶ್ರೀಮಂತ, ಪಾಂಡಪ್ಪ, ಸುರೇಶ್ ಹಾಗೂ ಇಲಾಖೆಯ ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ