Kannada NewsKarnataka News

ಸ್ಮಾರ್ಟ್ ಸಿಟಿ ಕಾಮಗಾರಿ ಪ್ರಗತಿ ಪರಿಶೀಲಿಸಿದ ಸಚಿವ ರಮೇಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  -: ಸ್ಮಾರ್ಟ್ ಸಿಟಿ ಕಾಮಗಾರಿ ನಿಗದಿತ ಸಮಯಕ್ಕೆ ಪೂರ್ಣಗೊಳಿಸದವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು. ಕೆಲಸದ ಸಮಯದಲ್ಲಿ ಲೋಪ ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೊದಲು ನೋಟಿಸ್ ನೀಡಿ ಅವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ (ಜೂ.೨೯) ಮಹಾನಗರ ಪಾಲಿಕೆ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಮಾರ್ಟ್ ಸಿಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಮಾರ್ಟ್ ಸಿಟಿ ಕಾಮಗಾರಿಗೆ ಪರಿಸರ ಇಲಾಖೆಯವರು ತಡ ಮಾಡದೆ ಅನುಮತಿ ನೀಡಬೇಕು. ಪರಿಸರ ಇಲಾಖೆಯಿಂದ ಅನುಮತಿ ಸಿಗದೆ ಇರುವ ಕಾರಣ ನಗರದಲ್ಲಿ ಸಾಕಷ್ಟು ಕಾಮಗಾರಿಯಲ್ಲಿ ವಿಳಂಬ ಆಗುತ್ತಿದೆ  ಎಂದು ತಿಳಿಸಿದರು.
ನಗರದ  ಕೆಲವು ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ನಿರ್ಮಾಣಕ್ಕಾಗಿ ಈಗಿರುವ ರಸ್ತೆ ಅಗೆಯಲಾಗಿದ್ದು, ಆ ಪ್ರದೇಶದ ಜನರಿಗೆ ತುಂಬಾ ತೊಂದರೆ ಆಗುತ್ತಿದೆ. ಆ ಸಮಸ್ಯೆಯನ್ನು ಇವತ್ತೇ ಪರಿಶೀಲನೆ ಮಾಡಿ ವರದಿ ಸಲ್ಲಿಸಬೇಕು ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಅವರಿಗೆ ಸೂಚನೆ ನೀಡಿದರು‌
ಬುಡಾ ಅಡಿ ಯೋಜನೆಗೆ ಸಂಬಂಧಿಸಿದಂತೆ ಇರುವ ಪ್ರಕರಣಗಳನ್ನು ಇನ್ನೊಮ್ಮೆ ಪರಿಶೀಲನೆ ಮಾಡಿ ಆ ಪ್ರಕರಣಗಳನ್ನು ಗೆಲ್ಲಲು ಒಳ್ಳೆಯ ವಕೀಲರನ್ನು ನೇಮಕ ಮಾಡಬೇಕು  ಎಂದು ಬುಡಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಕಸ ವಿಲೆವಾರಿಗೆ ಸಂಬಂಧಿಸಿದಂತೆ ಬುಡಾ, ಮಹಾನಗರ ಪಾಲಿಕೆ ಹಾಗೂ ಕಂಟೋನ್ಮೆಂಟ್ ಬೋರ್ಡ್ ದವರು ಮೀಟಿಂಗ್ ಮಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ಇಂದಿನ ಸಭೆಯಿಂದ  ಸರಿಯಾದ ಮಾಹಿತಿ ಸಭೆಗೆ ದೊರೆತಿಲ್ಲ. ಹಾಗಾಗಿ ಪ್ರಧಾನ ಕಾರ್ಯದರ್ಶಿ ಜತೆಗೆ ಶೀಘ್ರವಾಗಿ ಸಭೆ ಮಾಡೊಣ ಆ ಸಭೆಯಲ್ಲಿ ಎಲ್ಲ ಅಧಿಕಾರಿಗಳು ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿಗಳ ಗುತ್ತಿಗೆದಾರರು ಸೇರಿದಂತೆ ಎಲ್ಲರೂ ಹಾಜರಿರಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ತಿಳಿಸಿದರು.
ಶಾಸಕ ಅನಿಲ ಬೆನಕೆ ಮಾತನಾಡಿ, ನಗರದ ಅನೇಕ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಅಂಡರ್ ಕೇಬಲ್ ಕಾಮಗಾರಿ ವೇಳೆ ರಸ್ತೆಗಳನ್ನು ಅಗೆಯಲಾಗಿದ್ದು, ರಸ್ತೆಗಳನ್ನು ಸರಿಪಡಿಸುವ ಕಾಮಗಾರಿ ಇದುವರೆಗೂ ಪುರ್ಣಗೊಳಿಸಿಲ್ಲ. ಇದರಿಂದಾಗಿ ಜನರಿಗೆ ತೊಂದರೆ ಆಗುತ್ತಿದೆ ಸಾಕಷ್ಟು ಸಲ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕಮ್ರಕೈಗೊಂಡಿಲ್ಲ ಎಂದು ಹೇಳಿದರು.
ಶಾಸಕ ಅಭಯ ಪಾಟೀಲ್ ಮಾತನಾಡಿ, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಸ್ಮಾರ್ಟ್ ಸಿಟಿಯ ೯೦ ಪ್ರತಿಶತ ಕಾಮಗಾರಿಗಳು  ಪೂರ್ಣಗೊಂಡಿದೆ. ಆದರೆ ಉಳಿದ ಕಾಮಗಾರಿ ವಿಳಂಬ ಆಗುತ್ತಿದೆ. ಟೆಂಡರ್ ಪಡೆದುಕೊಂಡವರು  ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸದಿದ್ದರೆ ಅವರಿಗೆ ನೋಟಿಸ್ ನೀಡಬೇಕು. ಪಿ.ಎಂ.ಸಿ  ಕಂಪ‌ನಿಯವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.
ರೇಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಮಾತನಾಡಿ, ಮಹಾನಗರ ಪಾಲಿಕೆ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ಸ್ಮಾರ್ಟ್ ಸಿಟಿ ಸಭೆ ಮಾಡಿಕೊಂಡು ಸ್ಥಳೀಯ ಮಟ್ಟದಲ್ಲಿ ಆಗುವ ಕೆಲಸಗಳಿಗೆ ಆದ್ಯತೆ ನೀಡಿ, ಸರ್ಕಾರಕ್ಕೆ ವರದಿ ಸಲ್ಲಿಸಿ ಅನುಮತಿ ಸಿಗುವವರೆಗೆ ಕಾಯಬೇಡಿ ಎಂದು ಸಲಹೆ ನೀಡಿದರು. ‌
ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ವಿವರಣೆ ನೀಡಿದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ್  ಅವರು, ನಗರದಲ್ಲಿ ೧೧ ಪ್ರತಿಶತ ಸ್ಥಳಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಗಾಗಿ ಸ್ಮಾರ್ಟ್ ಸಿಟಿ ಬೋರ್ಡ್ ರಚನೆ ಮಾಡಲಾಗಿದ್ದು, ಇಲ್ಲಿವರೆಗೆ ೨೦ ಬೋರ್ಡ್ ಸಭೆ ಮಾಡಲಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸ್ಮಾರ್ಟ್ ಸಿಟಿ ಯೋಜನೆಗೆ ೩೯೬ಕೋಟಿ ಬಿಡುಗಡೆ ಆಗಿದ್ದು, ಇಲ್ಲಿಯವರೆಗೆ ೨೩೦ ಕೋಟಿ ಖರ್ಚು ಮಾಡಲಾಗಿದೆ ೧೦೦ ಸ್ಮಾರ್ಟ್ ನಗರಗಳ ಪೈಕಿ ಬೆಳಗಾವಿ ೨೪ ನೇ ಸ್ಥಾನದಲ್ಲಿದೆ ಎಂದು ವಿವರಿಸಿದರು.
೪೯ ಕೋಟಿ ವೆಚ್ಚದಲ್ಲಿ ಕಮಾಂಡ್ ಸೇಂಟರ್ ನಿರ್ಮಾಣ ಮಾಡಲಾಗಿದೆ. ಒಂಟಮುರಿಯಲ್ಲಿ ೩೦ ಹಾಸಿಗೆ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ೫ ಕೋಟಿ ವೆಚ್ಚದಲ್ಲಿ ೧೧ ಸ್ಮಾರ್ಟ್ ಕ್ಲಾಸ್ ರೂಮ್ ನಿರ್ಮಾಣ ಮಾಡಲಾಗಿದೆ.‌ ನಗರದ ೧೨ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪ‌ನೆ ಮಾಡಲಾಗಿದ್ದು, ೩೨ ಕೋಟಿ ವೆಚ್ಚದಲ್ಲಿ ಸಿ.ಬಿ.ಟಿ ಬಸ್ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವಿಧ ಕಾಮಗಾರಿಗಳ ಕುರಿತು ವಿವರಿಸಿದರು.
ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ ಕೆ.ಎಚ್  ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿ ದರ್ಜೆಯ ಹುದ್ದೆಗಳ ಕೊರತೆ ಇದೆ. ಎಪಿಎಂಸಿ ರಸ್ತೆಯಲ್ಲಿ ನಿರ್ಮಾಣ ಮಾಡುತ್ತಿರುವ ಕಾಂಪ್ಲೆಕ್ಸ್ ಕೊನೆಯ ಹಂತದಲ್ಲಿ ಇದೆ.‌ ನಗರದಲ್ಲಿ  ಬಡ ಜನರಿಗೆ ಅಡುಗೆ ಅನಿಲ ಸಂಪರ್ಕ  ನೀಡಲಾಗುತ್ತಿದೆ ಎಂದು ವಿವರಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಮ ನಸಲಾಪುರೆ ಮಾತನಾಡಿ, ನಗರಾಭಿವೃದ್ಧಿ ಪ್ರಾಧಿಕಾರವು  ೧೯ಯೋಜನೆಗಳನ್ನು ಒಳಗೊಂಡಿದೆ. ೧೭ ಯೋಜನೆಗಳನ್ನು ಬೆನಕನಹಳ್ಳಿ ಗ್ರಾಮ ಪಂಚಾಯತಿ ಮತ್ತು ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ‌ ಎಂದರು.
ರಾಮತೀರ್ಥ ನಗರದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲು ವರದಿ ಸಲ್ಲಿಸಲಾಗಿದ್ದು, ಅನುಮೋದನೆ ಸಿಕ್ಕ ಕೂಡಲೇ ಕೆಲಸ ಪ್ರಾರಂಭಿಸಲಾಗುವುದು. ಯೋಜನೆ ಸಂಖ್ಯೆ ೬೧ ರ ಅಡಿ ಕಣಬರ್ಗಿಯಲ್ಲಿ  ೨೩ ಎಕರೆಯಲ್ಲಿ ೩೦೦೦ ಮನೆಗಳ ನಿರ್ಮಾಣ  ಮಾಡಲಾಗುತ್ತದೆ ಎಂದು ಹೇಳಿದರು.
ಈ ವೇಳೆ ವಿಧಾನ ಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಘೂಳಪ್ಪ ಹೊಸಮನಿ, ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button