Latest

ಕೆವಿ ಶಾಲಾ ಅಂಗಳಕ್ಕೆ ನೆಲಹಾಸು ಹಾಕಲು ಸಂಸದ ಅಂಗಡಿ ಭೂಮಿ ಪೂಜೆ

   

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಲೋಕಸಭಾ ಸದಸ್ಯ ಸುರೇಶ ಅಂಗಡಿ ಅವರು ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಇರುವ ಕೇಂದ್ರೀಯ ವಿದ್ಯಾಲಯ ಸಂಖ್ಯೆ 2 ರಲ್ಲಿ ಪ್ರಾಥಮಿಕ ಶಾಲೆಯ ಅಂಗಳದಲ್ಲಿ ನೆಲ ಹಾಸು ಹಾಕುವ ಕಾರ್ಯಕ್ಕೆ ಶುಕ್ರವಾರ ಬೆಳಿಗ್ಗೆ ಭೂಮಿ ಪೂಜೆ ನೆರವೇರಿಸಿದರು.

ಅಂಗಡಿ ತಮ್ಮ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಐದು ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಇದು ಈ ದೇಶದ ಜನರು ನೀಡಿದ ತೆರಿಗೆ ಹಣವೇ ಹೊರತು ಸಂಸತ್ ಸದಸ್ಯನಾದ ನಾನು ನನ್ನ ಕಿಸೆಯಿಂದ ನೀಡಿದ ಹಣವಲ್ಲವೆಂದು ಅವರು ಹೇಳಿದರು.

ಶಾಲೆಯಲ್ಲಿರುವ ವಿದ್ಯಾರ್ಥಿಗಳು, ಅದರಲ್ಲೂ ವಿದ್ಯಾರ್ಥಿನಿಯರು ಸಂಪೂರ್ಣ ಶಿಕ್ಷಣದ ಲಾಭ ಪಡೆಯಬೇಕು. ಇಲ್ಲಿ ಪಡೆಯುವ ಶಿಕ್ಷಣ ಅವರ ವ್ಯಕ್ತಿತ್ವ ರೂಪಿಸಬೇಕು. ಅವರು ಈ ದೇಶವನ್ನು ಕಟ್ಟುವ ಹೆಮ್ಮೆಯ ನಾಗರಿಕರಾಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು. ಶಾಲೆಯ ಅಭಿವೃದ್ಧಿಗಾಗಿ ಹೆಚ್ಚಿನ ಹಣಕಾಸು ಅನುದಾನಕ್ಕಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಅವರು ಪ್ರಾಂಶುಪಾಲ ಅರುಣ ಕುಮಾರ ಸಿಂಗ್ ಹಾಗೂ ಇತರ ಸಿಬ್ಬಂದಿಗೆ ಸೂಚಿಸಿದರು.

ಶಾಲೆಯ ಆವರಣದಲ್ಲಿ ಸಂಸದರು ರಾಮಫಲ ವೃಕ್ಷದ ಸಸಿ ನೆಟ್ಟರು. ಶಾಲೆಯ ವಿದ್ಯಾರ್ಥಿಗಳು ಅತಿಥಿಗಳನ್ನು ಗೀತೆಯೊಂದಿಗೆ ಸ್ವಾಗತಿಸಿದರು. ಬೆಳಗಿನ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಸಂಸದರು , ಹುಟ್ಟು ಹಬ್ಬ ಆಚರಿಸುತ್ತಿರುವ ವಿದ್ಯಾರ್ಥಿಗಳಿಗೆ ಹುಟ್ಟು ಹಬ್ಬದ ಶುಭಾಷಯ ದ ಪತ್ರಗಳನ್ನು ನೀಡಿದರು.

ಭೂಮಿ ಪೂಜಾ ವಿಧಿವಿಧಾನಗಳನ್ನು ಸಂಸ್ಕೃತ ಶಿಕ್ಷಕರಾದ ಆದಿತ್ಯ ಅವರು ನೆರವೇರಿಸಿ ಕೊಟ್ಟರು. ಶಿಕ್ಷಕರಾದ ಪುಷ್ಪಾ ನಿಗಮ್, ಚಂದ್ರಕಾಂತ ಬಿರಾದಾರ, ಭರತೇಶ ಭೋಸ್ಗೆ, ಗುಲತಾಜ ಜೋಯಾ ಹಾಗು ಇತರರು ಹಾಜರಿದ್ದರು.

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button