
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಹೆಚ್ಚುತ್ತಿದ್ದು, ಈ ನಡುವೆ ಹಲವು ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಸುಲಿಗೆ ಮಾಡುತ್ತಿದ್ದರೆ, ಇನ್ನು ಕೆಲ ಆಸ್ಪತ್ರೆಗಳು ಯಾವುದೆ ರೋಗಿಗಳನ್ನು ಸೇರಿಸಿಕೊಳ್ಳುತ್ತಲೂ ಇಲ್ಲ. ಈ ಹಿನ್ನಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಇಷ್ಟು ದಿನ ದುಡ್ಡು ಮಾಡಿದ್ದು ಸಾಕು. ಈಗ ಮಾನವೀಯತೆ ಮೆರೆಯುವ ಸಮಯ. ನೀವು ಆರು ತಿಂಗಳು ಸಹಕಾರ ನೀಡಲೇಬೇಕು ಎಂದಿದ್ದಾರೆ.
ಖಾಸಗಿ ಆಸ್ಪತ್ರೆಗಳು ಸಾಯೋವರೆಗೂ ದುಡ್ಡು ಮಾಡಬಹುದು. ಆದರೆ ಕೊರೊನಾದಂತ ಈ ಸಮಯದಲ್ಲಿ ನೀವು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಧಾರಾಳ ಮನಸ್ಸಿನಿಂದ ಈಗಾದರೂ ಕೆಲಸ ಮಾಡಿ, ಮಂಗಳವಾರ ಈ ಬಗ್ಗೆ ಸಭೆ ಇದೆ. ಅವತ್ತು ಸಭೆಯಲ್ಲಿ ಹಾಜರಾಗಿ, ಸರ್ಕಾರದಿಂದ ಏನು ಸಹಾಯ ಬೇಕೋ ನಾವು ಮಾಡ್ತೇವೆ. ಆದರೆ ಇನ್ನು ಆರು ತಿಂಗಳು ನೀವು ಕೆಲಸ ಮಾಡಲೇಬೇಕು ಎಂದು ತಾಕೀತು ಮಾಡಿದರು.
ಬೆಂಗಳೂರಿನಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು 8 ವಲಯಗಳನ್ನು ಮಾಡಲಾಗಿದ್ದು, ಶಾಸಕರು, ಪಾಲಿಕೆ ಸದಸ್ಯರಿಗೆ ಹೆಚ್ಚಿನ ಹೊಣೆ ನೀಡಲಾಗುವುದು. ವಾರ್ಡ್ವಾರು ತಲಾ ಹತ್ತು ಸ್ವಯಂ ಸೇವಕರ ನೇಮಕ ಮಾಡಲಾಗಿದೆ. ವಾರ್ಡ್ಗಳಲ್ಲಿ ಸೋಂಕು ಪತ್ತೆ ಆದ ಕೂಡಲೇ ಸ್ವಯಂ ಸೇವಕರು ಸೋಂಕಿತರ ಮನೆ, ಬೀದಿಯನ್ನು ಕಂಟೈನ್ಮೆಂಟ್ ಮಾಡ್ತಾರೆ. ಸೋಂಕಿತರ ಮನೆಗಳಿಗೆ ದಿನಸಿ, ಇತರೆ ವಸ್ತುಗಳನ್ನು ಪೂರೈಸುತ್ತಾರೆ. ಸ್ವಯಂ ಸೇವಕರು ಸ್ವಂತ ವೆಚ್ಚದಲ್ಲಿ ಕರ್ತವ್ಯ ನಿರ್ವಹಿಸಲು ಮುಂದೆ ಬಂದಿದ್ದಾರೆ ಎಂದರು.




