Kannada NewsLatest

ಲಾಕ್ ಡೌನ್ ನಿಯಮ ಪಾಲಿಸಲು‌ ಜಲಸಂಪನ್ಮೂಲ ಸಚಿವರ ಕರೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಾಳೆಯಿಂದ ಗೋಕಾಕ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ನಿವಾರಣೆಗಾಗಿ ಕಟ್ಟುನಿಟ್ಟಿನ ಲಾಕ್ ಡೌನ್ ನಿಯಮ ಜಾರಿ ಆಗಲಿದೆ. ಸಾರ್ವಜನಿಕರು ವಿನಾಕಾರಣ ಮನೆಯಿಂದ ಹೊರಗೆ ಬರುವುದನ್ನು ನಿಲ್ಲಿಸಿ. ಮನೆಯಲ್ಲಿಯೇ ಇದ್ದು ಸಾಮಾಜಿಕ ವ್ಯಕ್ತಿಗತ ಅಂತರ ಪಾಲಿಸುವಂತೆ ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಕರೆ ನೀಡಿದ್ದಾರೆ.

ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಸರ್ಕಾರ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

3 Cಗಳಿಂದ ದೂರವಿರಿ, 3 Wಗಳನ್ನು ಪಾಲಿಸಿ:

ಕೊರೋನ ಮಣಿಸಲು 3 C ಗಳಾದ (Closed Spaces, Close Contacts and Crowds) ಗಾಳಿಯಾಡದ ಪ್ರದೇಶ, ಹತ್ತಿರದ ಸಂಪರ್ಕ, ಗುಂಪುಗೂಡುವುದು ಇವುಗಳಿಂದ ದೂರವಿದ್ದು, 3 W (Watch your distance, Wear Masks, Wash your hands) ಗಳಾದ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಮತ್ತು ಆಗಾಗ ಕೈ ತೊಳೆಯುತ್ತಿರುವುದು ಇವುಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಕೊರೋನ ಗೆಲ್ಲಬಹುದು ಎಂದು ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಅದೇರೀತಿ ಕೊರೋನ ವಿರುದ್ಧದ ಸಮರದಲ್ಲಿ ನಮ್ಮ ಕೈಲಾಗುವ ನೆರವನ್ನು ಮಾಡಬೇಕು. ಚಿಕ್ಕ ಕೆಲಸ, ಅಲ್ಪ ಕಾಣಿಕೆ ಎಂಬ ಮನೋಭಾವ ಇರಬಾರದು. ಹಿಂಜರಿಕೆ ತೊರೆದು ನಮ್ಮ ಕೈಲಾದ ಸಹಾಯವನ್ನು ಮಾಡಲು ಮುಂದಾಗಬೇಕು ಎಂದು ಸಚಿವರು ಹೇಳಿದ್ದಾರೆ.

ಕೊರೋನ ನಿಯಂತ್ರಣಕ್ಕಾಗಿ ಗೋಕಾಕ್ ಕ್ಷೇತ್ರದ ವ್ಯಾಪ್ತಿಯಲ್ಲಿ ಭೂತ್ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಆದರಲ್ಲಿ ಧಾರ್ಮಿಕ, ಸಾಮಾಜಿಕ ಸಂಘ ಸಂಸ್ಥೆಗಳು, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಸ್ಕೌಟ್ಸ್ ಅಂಡ್ ಗೈಡ್ಸ್ ಮುಂತಾದ ಸಂಘಟನೆಗಳ ಸಹಕಾರ ಪಡೆಯಲಾಗಿದೆ. ಕೋವಿಡ್ ಕೇರ್ ಸೆಂಟರ್ ಗಳಿಗೆ ಮತ್ತು ಆಸ್ಪತ್ರೆಗಳಿಗೆ ತಲುಪಿಸಲು ಸಹಾಯ ಮಾಡುವುದು, ಹಿರಿಯ ನಾಗರಿಕರು ಒಂಟಿಯಾಗಿದ್ದರೆ ಅವರಿಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಿವುದು,
ಹೋಮ್ ಐಸೋಲೇಷನ್ ಕುರಿತು ಮನೆಯ ಸದಸ್ಯರಿಗೆ ಮತ್ತು ನೆರೆಹೊರೆಯವರಿಗೆ ಅರಿವು ಮೂಡಿಸುವುದು, ಮುಂಜಾಗ್ರತೆಗಳ ಬಗ್ಗೆ ತಿಳಿಸುವುದು, ಅವರಲ್ಲಿರುವ ಭಯ, ಆತಂಕ ಮತ್ತು ಸೋಂಕಿತರ ಮೇಲಿರುವ ಕಳಂಕ ಭಾವ ನಿವಾರಿಸುವುದು ಹೀಗೆ ಹಲವಾರು ರೀತಿಯಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯರು ನೆರವು ನೀಡಲಿದ್ದಾರೆ. ಸಾರ್ವಜನಿಕರು‌ ಸಹಕರಿಸಿದರೆ ಸೋಂಕು ನಿವಾರಣೆ ಕಷ್ಟದ ಕೆಲಸವಲ್ಲ ಎಂದು‌ ಸಚಿವ ರಮೇಶ್ ಜಾರಕಿಹೊಳಿ‌ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button