ಪ್ರಗತಿವಾಹಿನಿ ಸುದ್ದಿ; ಧಾರವಾಡ: ಕೊರೊನಾ ವೈರಸ್ ಅದೆಷ್ಟೋ ಜನರ ಬದುಕಿಗೆ ಆಘಾತ ನೀಡಿದೆ. ರಾಜ್ಯದಲ್ಲಿ ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನು ಹಲವರಿಗೆ ಸಂಬಳ ಪಾವತಿಯೇ ಆಗಿಲ್ಲ. ಇನ್ನಷ್ಟು ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿ ನಡುವೆ ವ್ಯಕ್ತಿಯೊಬ್ಬರು ತಾನೂ ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದಾಗಿ ಪತ್ನಿ ಹಾಗೂ ಮಗಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಕವಳಿಕಾಯಿ ಚಾಳದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಪತಿ ಮೌನೇಶ್ ಪತ್ತಾರ (36), ಪತ್ನಿ ಅರ್ಪಿತಾ (28), ಮಗಳು ಸುಕೃತಾ (4) ಎಂದು ಗುರುತಿಸಲಾಗಿದೆ.
ಪತ್ನಿ ಅರ್ಪಿತಾ , ಮಗಳು ಸುಕೃತಾಗೆ ವಿಷ ನೀಡಿ ಬಳಿಕ ಮೌನೇಶ್, ತಾವೂ ಕೂಡ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಅಸೂಟಿ ಗ್ರಾಮದವನಾದ ಮೌನೇಶ್ ಪತ್ತಾರ್ ನಗರದ ಟಾಟಾ ಮಾರ್ಕೊಪೋಲೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಕಂಪನಿಯಲ್ಲಿ ಇತ್ತೀಚೆಗೆ ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗಿತ್ತು. ಅಲ್ಲದೇ ಮೌನೇಶ್ಗೆ ಉದ್ಯೋಗ ಕಳೆದುಕೊಳ್ಳೋ ಆತಂಕವೂ ಶುರುವಾಗಿತ್ತು. ಪತ್ನಿ ಲೋ ಬಿಪಿಯಿಂದ ಬಳಲುತ್ತಿದ್ದು ಚಿಕಿತ್ಸೆ ಕೊಡಿಸಲು ಆಸ್ಪತ್ರೆಗಳಿಗೆ ತೆರಳಿದರೂ ಆಸ್ಪತ್ರೆಗಳಲ್ಲಿ ಅಷ್ಟಾಗಿ ಸ್ಪಂದಿಸುತ್ತಿರಲಿಲ್ಲ. ಈ ಎಲ್ಲಾ ಯೋಚನೆಯಲ್ಲಿ ಮೌನೇಶ್ ಸಾವಿನ ನಿರ್ಧಾರಕ್ಕೆ ಬಂದಿದ್ದಾರೆ.
ಪತ್ನಿ ಹಾಗೂ ಮಗಳಿಗೆ ವಿಷ ನೀಡಿದ್ದ ಮೌನೇಶ್ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ