Kannada NewsKarnataka NewsLatest

ರಾಜಕಾರಣ ಅಂದು, ಇಂದು

ಬಿ.ಎಸ್.ಗವಿಮಠ, ಬೆಳಗಾವಿ
ಇಂದಿರಾ ಗಾಂಧಿ ಭಾರತ ದೇಶದ ಪ್ರಧಾನಿಯಾಗುವ ಪೂರ್ವದ ರಾಜಕಾರಣ ಹಾಗೂ ನಂತರದ ರಾಜಕಾರಣದಲ್ಲಿ ಅಜಗಜಾಂತರ ಬದಲಾವಣೆ ಕಾಣುತ್ತಿದ್ದೇನೆ. ಮೌಲ್ಯಾಧಾರಿತ ರಾಜಕಾರಣ ಇಂದು ಎಲ್ಲಿದೆ ಹೇಳಿ. ದೇಶದಲ್ಲಿ ಎಲ್ಲಿಯೋ ರೈಲು ಅಪಘಾತ ಸಂಭವಿಸಿ ಸಾವು ನೋವು ಸಂಭವಿಸಿದರೆ ತತ್‌ಕ್ಷಣ ರಾಜೀನಾಮೆ ನೀಡುತ್ತಿದ್ದ ರಾಜಕಾರಣಿಗಳು ಎತ್ತ ಹೋದರು? ರಾಷ್ಟ್ರನಾಯಕರೆನಿಸಿದ್ದ ಎಸ್.ನಿಜಲಿಂಗಪ್ಪ, ಮೊರಾರ್ಜಿ ದೇಸಾಯಿ, ಸರದಾರ ಪಟೇಲ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಬಹಾದೂರ ಶಾಸ್ತ್ರಿ, ಗುಲ್‌ಜಾರಿಲಾಲ್ ನಂದಾ ಇದೇ ನೆಲದಲ್ಲಿ ಜನಿಸಿದ್ದರೇ? ಹೌದು ನಿಜ. ಅವರ ನೈತಿಕ ಶಕ್ತಿ ಅಗಾಧವಾಗಿತ್ತು. ಅವರುಗಳೆಂದೂ ಭೃಷ್ಟಾಚಾರವೆಂಬುದು ವಿಶ್ವವ್ಯಾಪಿ, ಅದು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ ಎಂದು ಭೃಷ್ಟಾಚಾರವನ್ನು ಸಮರ್ಥಿಸಿಕೊಳ್ಳಲಿಲ್ಲ.
ಇಂದು ವಿರೋಧ ಪಕ್ಷವಾಗಲಿ, ಆಡಳಿತ ಪಕ್ಷವಾಗಲಿ ನಾವು ಭ್ರಷ್ಟರಲ್ಲ, ಸಾರ್ವಜನಿಕ ಹಣವನ್ನು ಲೂಟಿ ಹೊಡೆದಿಲ್ಲ ಎಂದು ಎದೆ ತಟ್ಟಿ ಹೇಳಿ, ತಲೆ ಎತ್ತಿ ನಡೆಯುವಲ್ಲಿ ವಿಫಲರಾಗಿದ್ದಾರೆ. ವಿರೋಧ ಪಕ್ಷದವರು ದಾಖಲೆ ಸಾಕ್ಷಿಯಿಲ್ಲದೆ ಆರೋಪ ಮಾಡುವದು, ಹಾಗೂ ಆಡಳಿತದಲ್ಲಿರುವವರು ವಿರೋಧಿಗಳಿಗೆ ನೀವು ಭ್ರಷ್ಟಾಚಾರಿಗಳಲ್ಲವೇ, ನಿಮ್ಮ ಹಗರಣಗಳನ್ನು ಹೊರಗೆ ತೆಗೆಯೋಣವೇ? ಎಂದು ಕೇಳುವದು, ಅದಕ್ಕೆ ಮತ್ತೆ ವಿರೋಧಿಗಳು ನೀವು ವಿರೋಧ ಪಕ್ಷದಲ್ಲಿದ್ದಾಗ ಏಕೆ ಮೌನವಾಗಿದ್ದಿರಿ, ಕೇಳಬೇಕಾಗಿತ್ತು ಎನ್ನುವದು ಸಾಮಾನ್ಯವಾಗಿದೆ. ರಾಜಕಾರಣದಲ್ಲಿರುವವರು ಯಾರೂ ಸಾಚಾಗಳಿಲ್ಲ. ಸಾಚಾಗಳಾದವರು ರಾಜಕಾರಣದಲ್ಲಿ ಬದುಕಲು ಸಾಧ್ಯವಿಲ್ಲ. ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ ಭೃಷ್ಟಚಾರದಿಂದ ಗಳಿಸಿದ ಜನತೆಯ ಹಣವನ್ನು ಜನತೆಗೆ ಹಂಚಿ ಚುನಾವಣೆಗಳಲ್ಲಿ ಆಯ್ಕೆಯಾಗಿ ಬರುವುದನ್ನು ಯಾರು ಅಲ್ಲಗಳೆಯಬಲ್ಲರು? ಪ್ರಜೆಗಳೇ ಭೃಷ್ಟರಾಗಿದ್ದಾರೆ. ಇಡೀ ವ್ಯವಸ್ಥೆ ಗಬ್ಬೆದ್ದು ಹೋಗಿದೆ. ಸಜ್ಜನರು, ಪ್ರಾಮಾಣಿಕರು, ಬುದ್ಧಿ ಜೀವಿಗಳು, ಸಾಹಿತಿಗಳು, ನೇರ ನಡೆನುಡಿಯುಳ್ಳವರು ರಾಜಕೀಯಕ್ಕೆ ಬರಲು ಸಾಧ್ಯವೇ ಇಲ್ಲ. ದುಡ್ಡು ಇದ್ದವರೇ ರಾಜಕೀಯ ಸ್ಥಾನಮಾನಗಳನ್ನು ಖರೀದಿಸುತ್ತಿದ್ದಾರೆ. ನೇರವಾಗಿ ಜನತೆಯಿಂದ ಆಯ್ಕೆಯಾಗಲಾರದವರು ಪಕ್ಷ ಬೇಡಿದಷ್ಟು ಫಂಡ್ ನೀಡಿ ಸದಸ್ಯರಾಗಿರುವವರನ್ನು ಕಂಡಿಲ್ಲವೇ? ವಿಧಾನ ಪರಿಷತ್ತಾಗಲಿ, ರಾಜ್ಯಸಭೆಯಾಗಲಿ ಹಿರಿಯರ, ಪಂಡಿತ್ತೋತ್ತಮರ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಲು ಸಾಧ್ಯವಿಲ್ಲದ ವಿವಿಧ ಕ್ಷೇತ್ರಗಳಲ್ಲಿನ ಪ್ರತಿಭಾವಂತರ ನೆಲೆಗಳಾಗಿ ಉಳಿಯಲಿಲ್ಲ ರಾಜಕಾರಣಿಗಳೇ ಸಾಹಿತಿಗಳ ಕೋಟಾದಲ್ಲಿ ಸದಸ್ಯರಾಗುತ್ತಿದ್ದಾರೆ. ಸಾಹಿತಿಗಳು, ನಿಜವಾದ ಹೋರಾಟಗಾರರು ಕಣ್ಣಿಗೆ ಕಾಣುವದೇ ಇಲ್ಲ.
ರಾಜಕಾರಣದ ಮೌಲ್ಯಗಳು ಬದಲಾಗಿವೆ. ಇಲ್ಲಿ ಅತಿ ಹೆಚ್ಚು ಸಂಪತ್ತಳ್ಳುವನೇ ಗೌರವಿಸಲ್ಪಡುತ್ತಾನೆ. ಇದು ಇಂದಿನ ಭಾರತ! ಆದಾಗ್ಯೂ ಇಂಥ ಗಾಢಾಂಧಕಾರದಲ್ಲಿಯೂ ಪ್ರಧಾನಿ ಶ್ರೀ ನರೇಂದ್ರ ಮೋದಿಯಂಥ ನಿಸ್ವಾರ್ಥಿಗಳು ಯುವಕರ ಪಾಲಿನ ಆಶಾಕಿರಣವೆನಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button